ಸರ್ಕಾರಿ ನೌಕರರ ಸಂಘಕ್ಕೆ ಚುನಾವಣೆ: ಅವಿರೋಧ ಆಯ್ಕೆಗೆ ಮನವಿ
ಕ.ಪ್ರ.ವಾರ್ತೆ ಟಿ ರಾಮನಗರ ಟಿ ಜು.15
ಜಿಲ್ಲಾ ಸರ್ಕಾರಿ ನೌಕರರ ಸಂಘಕ್ಕೆ ಜು.22ರಂದು ಚುನಾವಣೆ ನಿಗದಿಯಾಗಿದೆ. ಚುನಾವಣೆಗೆ ಅವಕಾಶ ನೀಡದೆ, ಎಲ್ಲಾ ಸ್ಥಾನಗಳಿಗೂ ಅವಿರೋಧ ಆಯ್ಕೆಗೆ ಸಹಕರಿಸಬೇಕು ಎಂದು ಜಿಲ್ಲಾಧ್ಯಕ್ಷ ವೈ.ಟಿ.ಸೋಮಶೇಖರಯ್ಯ ಮನವಿ ಮಾಡಿದರು.
2013-18ರ ಅವಧಿಗೆ ಚುನಾವಣೆ ನಡೆಯುತ್ತಿದ್ದು, ಒಟ್ಟು 62 ನಿರ್ದೇಶಕರನ್ನು ಆಯ್ಕೆ ಮಾಡಬೇಕಿದೆ. 38 ನಿರ್ದೇಶಕರು ಈಗಾಗಲೇ ಅವಿರೋಧ ಆಯ್ಕೆಯಾಗಿದ್ದಾರೆ. ಇನ್ನುಳಿದ 24 ನಿರ್ದೇಶಕರ ಸ್ಥಾನಕ್ಕೂ ಸಹ ಅವಿರೋಧ ಆಯ್ಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಪರಸ್ಪರ ಮಾತುಕತೆ ನಡೆಸಿ, ನಾಮಪತ್ರ ವಾಪಸ್ ಪಡೆಯಬೇಕು ಎಂದು ಸಂಘದ ಜಿಲ್ಲಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಚುನಾವಣೆಯಲ್ಲಿ ರಾಜಕೀಯ ಬೆರಸಬಾರದು. ಸಂಘ-ಸಂಸ್ಥೆಗಳಲ್ಲಿ ಒಡಕು ಮೂಡಿದರೆ ಅವು ದುಃಸ್ಥಿತಿಗೆ ತಲುಪುತ್ತವೆ. ಸಂಘದ ಹಿತದೃಷ್ಟಿಯಿಂದ ಭಿನ್ನಾಭಿಪ್ರಾಯಗಳನ್ನು ತೊರೆದು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಸಂಘವು ಮತ್ತಷ್ಟು ಪ್ರಗತಿ ಸಾಧಿಸಲಿದೆ ಎಂದರು. ಜಿಲ್ಲೆಯಾದ ನಂತರ ಮೊದಲ ಅವಧಿಯ 4ನೇ ಅಧ್ಯಕ್ಷನಾಗಿ, ಸಂಘದ ಅಭಿವೃದ್ಧಿಗಾಗಿ ಶ್ರಮಿಸಿದ್ದೇನೆ. ನೌಕರರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದು, ಸಾಮಾಜಿಕ ಕೆಲಸ ಕಾರ್ಯಗಳನ್ನೂ ಕೈಗೊಂಡಿದ್ದೇನೆ. ನನಗೆ ಈ ಅವಧಿಯಲ್ಲಿ ಸಹಕರಿಸಿದ ಎಲ್ಲ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಕೃತಜ್ಞತೆ ಅರ್ಪಿಸುವುದಾಗಿ ಸೋಮಶೇಖರಯ್ಯ ತಿಳಿಸಿದರು.
ಶೀಘ್ರದಲ್ಲೇ ಪದೋನ್ನತಿ ಇರುವುದರಿಂದ ಈ ಬಾರಿ ನಾನು ನಿರ್ದೇಶಕ ಸ್ಥಾನದ ಆಕಾಂಕ್ಷಿಯಾಗಿರದೆ, ನಾನು ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಣ ಇಲಾಖೆಯ ನಿರ್ದೇಶಕ ಸ್ಥಾನಕ್ಕೆ ಅವಿರೋಧ ಆಯ್ಕೆ ಮಾಡಲಾಗಿದೆ. ಇದು ಬೇರೆ ಇಲಾಖೆಗಳಿಗೂ ಮಾದರಿಯಾಗಿ ಅವಿರೋಧ ಆಯ್ಕೆಗೆ ಮುಂದಾಗುವಂತೆ ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಪಿ.ಜಯರಾಂ, ಉಪಾಧ್ಯಕ್ಷ ಪುಟ್ಟಸ್ವಾಮಿ, ಸತೀಶ್, ಶಂಕರ ಮೂತಿ, ರಾಜು, ಚಿಕ್ಕಪುಟ್ಟೇಗೌಡ, ರಮೇಶ, ಶಿವಣ್ಣ, ರವಿ, ಸಜೀವ್, ನಾರಾಯಣ ಸ್ವಾಮಿ, ಗುಂಡೇಗೌಡ ಮತ್ತಿತರರು ಹಾಜರಿದ್ದರು.