ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸುದ್ದಿ ಸಂಕ್ಷೇಪ

Mainashree
Updated On : 16 Jul 2013, 12:32 pm

'ಯೋಗ ಕಲ್ಮಶ ಹೊರ ಹಾಕುತ್ತದೆ'
ಮಾಗಡಿ: ಯೋಗ ಮಾಡುವುದು ಕೇವಲ ಆರೋಗ್ಯ ಸುಧಾರಣೆಗೆ ಮಾತ್ರವಲ್ಲ, ದೇಹದಲ್ಲಿರುವ ಕಲ್ಮಶಗಳನ್ನು ಅದು ಹೊರಹಾಕುತ್ತದೆ. ಪ್ರತಿಕ್ಷಣವೂ ಚೈತನ್ಯ ಚಿಲುಮೆಯಂತೆ ಆರೋಗ್ಯವಂತರನ್ನಾಗಿ ಬದುಕುವುದನ್ನು ಕಲಿಸುವ ಸೂಕ್ಷ್ಮ ನಿಯಮವೇ ಯೋಗ ಎಂದು ಪತಂಜಲಿ ಯೋಗ ಸಂಗಮದ ಶ್ಯಾಮಸುಂದರ ಗುರೂಜಿ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಮಾಗಡಿ ಪಟ್ಟಣದ ಆರ್ಯ ವೈಶ್ಯ ಧ್ಯಾನ ಮಂದಿರದಲ್ಲಿ ಏರ್ಪಡಿಸಿದ್ದ ವಿಶೇಷ ಯೋಗ ಶಿಬಿರದಲ್ಲಿ ಮಾತನಾಡುತ್ತಾ ಮನಸ್ಸು ಸುಮ್ಮನೆ ಕೊರಗುತ್ತದೆ. ದೇಹ ಇದ್ದಕ್ಕಿದ್ದಂತೆ ಬಳಲಿ ಬೆಂಡಾಗಿ ಹೋಗುತ್ತದೆ. ಕಾರಣ ಹುಡುಕಿದರೆ ಏನೇನು ಇರುವುದಿಲ್ಲ. ಆದರೂ ಪದೇ ಪದೆ ಮಾನಸಿಕ ಯಾತನೆ ದೈಹಿಕ ಆರೋಗ್ಯ ಹದಗೆಡುತ್ತಿದೆ.ಇದಕ್ಕೆಲ್ಲ ಬದಲಾದ ಆಹಾರ ಪದ್ಧತಿ, ಜೀವನ ಶೈಲಿಯೇ ಪ್ರಮುಖ ಕಾರಣ. ಯೋಗ ಮಾಡುವುದರಿಂದ ದೇಹವನ್ನು ಸದೃಢಗೊಳ್ಳುತ್ತದೆ. ಮನಸ್ಸನ್ನು ದೃಢವಾಗಿಸುತ್ತದೆ ಎಂದರು. ಶಿಕ್ಷಕ ಮಾರಣ್ಣ ಮಾತನಾಡಿದರು. ಆರ್ಯ ವೈಶ್ಯ ಮಂಡಲಿ ಉಪಾಧ್ಯಕ್ಷ ಅರುಣ್, ಪತಂಜಲಿ ಯೋಗ ಸಂಗಮ ಚಿಂತಕ ಎಸ್. ಸುನೀಲ್, ದೈಹಿಕ ಶಿಕ್ಷಣ ಶಿಕ್ಷಕ ಗಣೇಶಚಾರಿ, ಶಾರದ ಸುರೇಶ್, ಹೇಮಾವತಿ, ವತ್ಸಲಾ ಗೋವಿಂದರಾಜು, ನಾಗರತ್ನ ಹಾಗು ಯೋಗ ಶಿಬಿರಾರ್ಥಿಗಳು ಇತರರು ಇದ್ದರು.
ಪರಿಸರ ರಕ್ಷಣೆಯಿಂದ ಜೀವಿಗಳ ಉಳಿವು
ನೆಲಮಂಗಲ: ಪರಿಸರವನ್ನು ಸಂರಕ್ಷಿಸುವುದರಿಂದ  ಜೀವಿಗಳ ಉಳಿವು ಸಾಧ್ಯ. ಇಂತಹ ಅಮೂಲ್ಯವಾದ ಪ್ರಕೃತಿಯನ್ನು ಕಾಪಾಡುವ ಕರ್ತವ್ಯ ನಮ್ಮೆಲ್ಲರದ್ದಾಗಿದೆ  ಎಂದು  ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ನುಡಿದರು. ಅವರು ಸೋಮವಾರ ಪಟ್ಟಣದ ಬಸವಣ್ಣ ದೇವರ ಮಠದಲ್ಲಿ ರೋಟರಿ ಸಂಸ್ಥೆ ವತಿಯಿಂದ 2013-14ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ  ಮಾತನಾಡುತ್ತಾ ಮನುಷ್ಯ  ಆರೋಗ್ಯವಂತನಾಗಿರಲು ಉತ್ತಮ ಪರಿಸರ ಅತ್ಯವಶ್ಯಕವಾಗಿದೆ. ಪ್ರತಿಯೊಬ್ಬರೂ ಪರಿಸರದಲ್ಲಿ ಸಮತೋಲನ ಕಾಪಾಡುವ ದೃಷ್ಟಿಯಿಂದ ಹೆಚ್ಚು ಮರಗಿಡಗಳನ್ನು ಬೆಳೆಸಿ ಪೋಷಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ಗ್ರಾಮೀಣ ಭಾಗದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸಹಾಯಹಸ್ತ ನೀಡಲು  ಆಸರೆಯಾಗುವಂತಹ ಹಲವು ಉಪಯುಕ್ತ ಸಾಮಾಜಿಕ ಕಾರ್ಯ ನಿರ್ವಹಿಸಲು ಶ್ರಮಿಸುತ್ತೇವೆ. ಸೇವಾ ಮನೋಭಾವದಿಂದ ಸಾಮಾಜಿಕ ಕಳಕಳಿ ಹೊಂದಿ, ಸಮಾಜಕ್ಕೆ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡಬಯಸುತ್ತೇವೆ ಎಂದು ಅಧಿಕಾರ ಸ್ವೀಕರಿಸಿದ  ರೋಟರಿ ನೂತನ ಅಧ್ಯಕ್ಷ ಎ.ಎನ್.ಮಂಜುನಾಥ್ ಹೇಳಿದರು. ರೋಟರಿ ಕಾರ್ಯದರ್ಶಿ ಎನ್.ಎಸ್.ಮೂರ್ತಿ, ಖಜಾಂಚಿ ಸತೀಶ್ , ಮಾಜಿ ಅಧ್ಯಕ್ಷ ವಜ್ರಘಟ್ಟೆ ನಾಗರಾಜು, ಪುರಸಭಾ ಸದಸ್ಯ ಎಚ್.ಜಿ.ರಾಜು, ಹಾಗೂ ನೂತನ ಪದಾಧಿಕಾರಿಗಳು  ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement