ಕಾಡಾನೆ ದಾಳಿಯಿಂದ ಲಕ್ಷಾಂತರ ರು. ಬೆಳೆ ನಾಶ
ಕ.ಪ್ರ.ವಾರ್ತೆ ಮಾಗಡಿ ಜು. 16
ಕಾಡಾನೆ ದಾಳಿಯಿಂದ ಲಕ್ಷಾಂತರ ರು. ಬೆಲೆ ಬಾಳುವ ರೈತರ ಅಡಿಕೆ, ತೆಂಗು, ಮಾವು, ಸಪೋಟ, ಹಲಸಿನ ಮರಗಳು ನಾಶವಾಗಿದ್ದು, ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಮಾಗಡಿ ತಾಲೂಕಿನ ಸಾವನದುರ್ಗದ ಅರಣ್ಯದ ಅಂಚಿನಲ್ಲಿರುವ ಕರಲಮಂಗಲ, ಗುಡ್ಡಹಳ್ಳಿ, ನಾಯಕನಪಾಳ್ಯ ಕಿಲ್ಲೇದಾರನಪಾಳ್ಯ ಜೋಡಗಟ್ಟೆ, ಕಲ್ಯಾಣದೇವರ ಮಠ ಸೇರಿದಂತೆ ವಿವಿಧಡೆ ಕಾಡಾನೆ ದಾಳಿಗೆ ತೋಟಗಾರಿಕೆ ಬೆಳೆಗಳು ನಾಶವಾಗಿವೆ. ಗುಡ್ಡಹಳ್ಳಿಯ ಕುಂಬಳಕಾಯಿ ಗಂಗಣ್ಣ ಅವರಿಗೆ ಸೇರಿದ ಅಡಿಕೆ, ತೆಂಗಿನ ಮರ,ಅಲಸಂಧೆ, ಮುಸುಕಿನ ಜೋಳ ಸೇರಿದಂತೆ ಇತರೆ ಬೆಳೆಗಳನ್ನು ತಿಂದು ತುಳಿದು ನಾಶ ಮಾಡಿವೆ. ಇದೇ ರೀತಿ ಸುತ್ತಮುತ್ತಲ ಇತರೆ ರೈತರ ಬೆಳೆಗಳು ನಾಶವಾಗಿವೆ. ಈ ಸಂಬಂಧ ಅರಣ್ಯ ಇಲಾಖೆಗೂ ಮನವಿ ಮಾಡಲಾಗಿದೆ ಎಂದು ಗಂಗಣ್ಣ ವಿವರಿಸಿದರು. ಅರಣ್ಯ ಇಲಾಖೆ ಇತ್ತ ಗಮನ ಹರಿಸಬೇಕು. ಸಾವನದುರ್ಗದ ಕಾಡಿಗೆ ಸೋಲಾರ್ ಸ್ಪೆನ್ಸಿಂಗ್ ಹಾಕಿಸಬೇಕು. ಕಾಡಾನೆ ಓಡಿಸಲು ಅಗತ್ಯ ಕ್ರಮ ವಹಿಸಬೇಕು. ತೋಟಗಾರಿಕೆ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.