ಕೃಷ್ಣಪ್ಪ 'ಕಾರು-ಬಾರು'ಗೆ ನಾಲ್ಕು ಬಲಿ
ಬೆಂಗಳೂರು: ಅದು ಜನನಿಬಿಡ ಪ್ರದೇಶ. ಜೊತೆಗೆ ಸಂತೆ. ಅಲ್ಲಿದ್ದವರು ವ್ಯಾಪಾರ-ವಹಿವಾಟು ಸೇರಿದಂತೆ ತಮ್ಮ ತಮ್ಮ ವ್ಯವಹಾರಗಳಲ್ಲಿ ತಲ್ಲೀನರಾಗಿದ್ದರು. ಇನ್ನೇನು ಎಲ್ಲವನ್ನೂ ಮುಗಿಸಿ ಮನೆಗೆ ಹೊರಡುವ ಸಮಯ. ಆಗ ಬಂತು ಕಾರು...
ಅದು ಅಂತಿಂಥ ಕಾರಲ್ಲ, ಐಷಾರಾಮಿ ಲ್ಯಾಂಡ್ ರೋವರ್. ರಸ್ತೆಯಲ್ಲಿ ನೆಟ್ಟಗೆ ಹೋಗಬೇಕಿದ್ದ ಆ ಕಾರು ಏಕಾಏಕಿ ಪಾದಚಾರಿ ಮಾರ್ಗಕ್ಕೆ ನುಗ್ಗಿತು. ನೋಡನೋಡುತ್ತಿದ್ದಂತೆ ಹಲವರು ಯಮಸ್ವರೂಪಿಯಾಗಿ ಬರುತ್ತಿದ್ದ ಆ ಕಾರಿನ ಚಕ್ರಕ್ಕೆ ಸಿಲುಕಿದರು. ರಕ್ತ ಚೆಲ್ಲಾಡಿತು. ನೋವು, ಆಕ್ರಂದನ ಮುಗಿಲು ಮುಟ್ಟಿತು. ಕ್ಷಣ ಮಾತ್ರದಲ್ಲಿ ಸಂತೆಯ ಚಿತ್ರಣವೇ ಬದಲಾಯಿತು. ಒಟ್ಟಿನಲ್ಲಿ ಇದು ಹತ್ತಾರು ವರ್ಷದ ಹಿಂದೆ ತೆರೆಕಂಡ ಆಕ್ಸಿಡೆಂಟ್ ಚಿತ್ರದಲ್ಲಿನ ಅಪಘಾತದ ದೃಶ್ಯವನ್ನು ಅಲ್ಲಿದ್ದವರಿಗೆ ನೆನಪಿಗೆ ತಂದಿತು.
ಕಾರು ಚಾಲನೆ ಮಾಡುತ್ತಿದ್ದ ವ್ಯಕ್ತಿಗೆ ಪ್ರಜ್ಞೆ ಎಂಬುದೇ ಇರಲಿಲ್ಲ. ಕಾರಣ, ಆತ ಮದ್ಯದ ಅಮಲಿನಲ್ಲಿ ಮುಳುಗಿ ಹೋಗಿದ್ದ. ಹೀಗಾಗಿ ಕಾರು ಆತನ ನಿಯಂತ್ರಣ ತಪ್ಪಿತ್ತು. ಆಡ್ಡಾದಿಡ್ಡಿ ನುಗ್ಗಿ ನಾಲ್ಕು ಮಂದಿ ಆಮಾಯಕರ ಪ್ರಾಣ ಬಲಿತೆಗೆದುಕೊಂಡಿತು. ಈ ಘೋರ ದುರಂತ ನಡೆದ ಜಾಗ ಎಲೆಕ್ಟ್ರಾನಿಕ್ ಸಿಟಿಯ ಚನ್ನಕೇಶವ ನಗರದ ಹೊಸೂರು ರಸ್ತೆ ಜಂಕ್ಷನ್. ಸಮಯ, ಸೋಮವಾರ ರಾತ್ರಿ. ಮದ್ಯದ ಅಮಲಿನಲ್ಲಿದ್ದ ನಗರಸಭೆಯ ಮಾಜಿ ಅಧ್ಯಕ್ಷ ಕೃಷ್ಣಪ್ಪ ಎಂಬಾತ ಕಂಠಪೂರ್ತಿ ಕುಡಿದು ಕಾರು ಚಾಲನೆ ಮಾಡಿದ ತಪ್ಪಿಗೆ ನಾಲ್ಕು ಮಂದಿ ಸತ್ತು ಆರು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಂತಾಜನಕ ಸ್ಥಿತಿಯಲ್ಲಿರುವ ಅವರು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಇನ್ನೂ ಐದಾರು ಮಂದಿ ಸಣ್ಣಪುಟ್ಟ ಗಾಯಗಳಾಗಿವೆ.
ಚನ್ನಕೇಶವ ನಗರದ ನಿವಾಸಿಗಳಾದ ಪುಷ್ಪಾರಾಣಿ (48), ಅವರ ಸಹೋದರಿ ಇಂದ್ರಾಣಿ (45), ವಿಜಯ್‌ಕುಮಾರ್ (35) ಹಾಗೂ ರಾಜಾ ನಾಯಕ್ (23) ತಮ್ಮದಲ್ಲದ ತಪ್ಪಿಗೆ ಪ್ರಾಣ ಕಳೆದುಕೊಂಡವರು. ತೀವ್ರವಾಗಿ ಗಾಯಗೊಂಡಿರುವ ಪುಷ್ಪಾರಾಣಿ ಅವರ ಪತಿಜನಕರಾಜ್, ಎಂ.ರೇಖಾ, ಲೀಲಮ್ಮ, ಮಲ್ಲೇಶ್, ರಾಜೇಶ್, ಹರೀಶ್ ಅವರ ಸ್ಥಿತಿ ಗಂಭೀರವಾಗಿದೆ. ಅಪಘಾತದ ಬಳಿಕ ಕೃಷ್ಣಪ್ಪ ನಾಪತ್ತೆಯಾಗಿದ್ದು, ಪೊಲೀಸರು ಶೋಧ ನಡೆಸಿದ್ದಾರೆ.
ಮನೆಗೆ ಹೊರಟವರು ಮಸಣಕ್ಕೆ: ಚನ್ನಕೇಶವ ನಗರದ ಹೊಸೂರು ರಸ್ತೆಯಲ್ಲಿ ಪ್ರತಿನಿತ್ಯ ರಾತ್ರಿ ಸಂತೆ ನಡೆಯುತ್ತದೆ. ಹೀಗಾಗಿ ಜನಸಂದಣಿ ಹೆಚ್ಚಾಗಿರುತ್ತದೆ. ಅಪಘಾತಕ್ಕೆ ಮುನ್ನ ನೆರೆದಿದ್ದ ಜನರಲ್ಲಿ ಕೆಲವರು ತರಕಾರಿ ವ್ಯಾಪಾರದಲ್ಲಿ ತೊಡಗಿದ್ದರು. ಅಂಗಡಿ ಮಾಲೀಕರು ಬಾಗಿಲು ಹಾಕಿ ಮನೆಗೆ ಹೊರಡಲು ಸಿದ್ಧರಾಗಿದ್ದರು. ಕೆಲವರು ಬಸ್‌ಗಾಗಿ ಕಾಯುತ್ತಾ ರಸ್ತೆ ಬದಿ ನಿಂತಿದ್ದರು.
ಅಷ್ಟರಲ್ಲಿ ಅದೇ ಮಾರ್ಗದಲ್ಲಿ ಬಂದ ಕಾರು, ಚಾಲಕನ ನಿಯಂತ್ರಣ ತಪ್ಪಿ ಅಡ್ಡಾದಿಡ್ಡಿ ಚಲಿಸಿ, ನಂತರ ಪಾದಚಾರಿ ರಸ್ತೆ ಮೇಲೆ ಹರಿದು ಈ ದುರಂತ ಸಂಭವಿಸಿದೆ.
ಎಲ್ಲರೂ ತಮ್ಮತಮ್ಮ ಕೆಲಸಗಳಲ್ಲಿ ತೊಡಗಿದ್ದರು. ಏನಾಗುತ್ತಿದೆ ಎಂದು ಅರಿಯುವಷ್ಟರಲ್ಲಿ ಕೆಲವರ ಪ್ರಾಣಪಕ್ಷಿ ಹಾರಿಹೋಗಿತ್ತು. ಕೆಲವರು ಕಾರಿನ ಚಕ್ರಕ್ಕೆ ಸಿಲುಕಿ ಚೀರುತ್ತಿದ್ದರು.
ಸ್ವಲ್ಪದೂರ ಹೋದ ಕಾರು ಸಿಕ್ಕಸಿಕ್ಕವರಿಗೆ ಗುದ್ದಿದೆ. ನಂತರ ವಾಹನ ನಿಲ್ಲಿಸಿ ಕೃಷ್ಣಪ್ಪ ಪರಾರಿಯಾಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಘಟನೆ ಬಗ್ಗೆ ವಿವರಿಸಿದರು. ಘಟನೆ ನಂತರ ಸಾರ್ವಜನಿಕರೇ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ನಂತರ ಪೊಲೀಸರಿಗೆ ಮಾಹಿತಿ ನೀಡಿದರು.
ಎಲ್ಲರೂ ಕೂಲಿ ಕಾರ್ಮಿಕರು: ಘಟನೆಯಲ್ಲಿ ಮೃತಪಟ್ಟವರು ಹಾಗೂ ಗಾಯಾಳುಗಳೆಲ್ಲ ಮೂಲತಃ ಬೆಂಗಳೂರಿನವರಲ್ಲ. ಹೊರಜಿಲ್ಲೆ ಹಾಗೂ ರಾಜ್ಯಗಳಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದರು. ಕೆಲವರು ಕೂಲಿ ಕಾರ್ಮಿಕರಾಗಿದ್ದು, ಇನ್ನು ಕೆಲವರು ತರಕಾರಿ ವ್ಯಾಪಾರ ನಡೆಸುತ್ತಿದ್ದರು.
ಮೃತ ಪುಷ್ಪಾರಾಣಿ ದಂಪತಿ ಮೂಲತಃ ತಮಿಳುನಾಡಿನವರಾಗಿದ್ದು, ಮಗನ ವಿವಾಹದ ಆಮಂತ್ರಣ ಪತ್ರಿಕೆ ಹಂಚಲು ಬೆಂಗಳೂರಿಗೆ ಬಂದಿದ್ದರು. ಅವರನ್ನು ವಾಪಸ್ ಕಳುಹಿಸಲು ಇಂದ್ರಾಣಿ ಹಾಗೂ ಇತರರು ಬಸ್ ನಿಲ್ದಾಣಕ್ಕೆ ಬಂದಿದ್ದರು.
ರಾಜಾನಾಯಕ್, ವಿಜಯ್‌ಕುಮಾರ್, ಹರೀಶ್ ಬಾಲ್ಯಸ್ನೇಹಿತರಾಗಿದ್ದು, ಮೂಲತಃ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನವರು. ಜಿಲ್ಲೆಯಲ್ಲಿ ಭೀಕರ ಬರಗಾಲ ಕಾಡುತ್ತಿದ್ದ ಹಾಗೂ ಸಕಾಲಕ್ಕೆ ಮಳೆ ಬರದ ಕಾರಣ ಎಲ್ಲರೂ ಊರು ತ್ಯಜಿಸಿ ಬೆಂಗಳೂರು ಸೇರಿದ್ದರು. ಹೊಟ್ಟೆಪಾಡಿಗಾಗಿ ವ್ಯಾಪಾರ, ಗೋಬಿಮಂಚೂರಿ, ಪಾನೀಪೂರಿ ಮಾರಾಟ, ಕೂಲಿ ಕೆಲಸ ಮಾಡುತ್ತಿದ್ದರು. ಚನ್ನಕೇಶವ ನಗರ ಸಮೀಪದಲ್ಲೇ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ವಿಜಯ್‌ಕುಮಾರ್ ಬಡಕುಟುಂಬದವರು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಕೂಲಿ, ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದರು. ಅಷ್ಟರಲ್ಲಿ ಈ ದುರಂತ ಸಂಭವಿಸಿದೆ ಎಂದು ವಿಜಯ್ ಸ್ನೇಹಿತರು ತಿಳಿಸಿದ್ದಾರೆ.
ಅಪಘಾತ ಸಂಭವಿಸಿದ ಸ್ಥಳದಲ್ಲಿ ನಾನು ಹಾಗೂ ನನ್ನ ಪತಿ ತರಕಾರಿ ವ್ಯಾಪಾರ ನಡೆಸುತ್ತೇವೆ. ರಾತ್ರಿ ವ್ಯಾಪಾರ ಮುಗಿಸಿ ಮನೆಗೆ ಹೊರಡಲು ಸಿದ್ಧರಾಗುತ್ತಿದ್ದೆವು. ಅಷ್ಟರಲ್ಲಿ ವೇಗವಾಗಿ ಬರುತ್ತಿದ್ದ ಕಾರನ್ನು ಗಮನಿಸಿದೆ, ಹಿಂದಕ್ಕೆ ಸರಿದೆವು. ಜೋರಾಗಿ ಬಂದ ಕಾರು ರಸ್ತೆ ಬಿಟ್ಟು ವ್ಯಾಪಾರಿಗಳಿದ್ದ ಸ್ಥಳಕ್ಕೆ ನುಗ್ಗಿತು.
ಟಿ ಲಲಿತಮ್ಮ, ಸ್ಥಳೀಯರು
ಮಾನಸಿಕ ಅಸ್ವಸ್ಥನಂತೆ
ಆರೋಪಿ ಕೃಷ್ಣಪ್ಪ 2002ರಲ್ಲಿ ನಗರಸಭೆ ಅಧ್ಯಕ್ಷರಾಗಿದ್ದರು. ಬಿಜೆಪಿಯಲ್ಲಿದ್ದ ಅವರು ಇತ್ತೀಚೆಗೆ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದರು.
ಈ ಹಿಂದೆ ವರದಕ್ಷಿಣೆ ಕಿರುಕುಳದಿಂದ ಇವರ ಸೊಸೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರಿಂದ ಕೋಪಗೊಂಡ ಸೊಸೆಯ ಕುಟುಂಬ ಸದಸ್ಯರು ಕೃಷ್ಣಪ್ಪ ಅವರ ಮನೆಗೆ ಬೆಂಕಿ ಹಾಕಿದ್ದರು. ಇದರಿಂದ ನೊಂದ ಅವರ ಪುತ್ರ ವಿಜಯ್‌ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದ.
ಇಷ್ಟೆಲ್ಲಾ ಘಟನೆ ನಡೆದ ನಂತರ ಕಾನೂನು ಕೈಯಿಂದ ತಪ್ಪಿಸಿಕೊಳ್ಳುವ ಉದ್ದಶದಿಂದ ಕೃಷ್ಣಪ್ಪ, ತಾನು ಹಾಗೂ ತನ್ನ ಪತ್ನಿ ಮಾನಸಿಕ ಅಸ್ವಸ್ಥರೆಂದು ಹೇಳಿಕೊಂಡು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಾಗಿದ್ದರು.