ರಾಚ ಪ್ರಾಧಿಕಾರಕ್ಕೂ ಪಂಗನಾಮ!
ರಾಮನಗರ : ಇಂಡಿಯನ್ ಬ್ಯಾಂಕ್ ಸೇರಿದಂತೆ ಮೂರು ಬ್ಯಾಂಕ್ ಹೆಸರಿನಲ್ಲಿ ನಕಲಿ ಬಾಂಡ್ ನೀಡಿರುವ ಮಂಡ್ಯದ ವಂಚಕರ ಜಾಲವು ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರಕ್ಕೂ 9.99 ಕೋಟಿ ಪಂಗನಾಮ ಹಾಕಿರುವುದು ಬಯಲಾಗಿದೆ!
ಮಂಡ್ಯದ 'ಮುಡಾ'ದಲ್ಲಿ 5 ಕೋಟಿ ವಂಚನೆಯ ತನಿಖೆ ಹಂತದಲ್ಲಿ ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದ ಹಣ ಗುಳುಂ ಆಗಿರುವುದು ಬೆಳಕಿಗೆ ಬಂದಿದೆ. ಈ ಬೆನ್ನಲ್ಲೇ ನಗರಾಭಿವೃದ್ಧಿ ಕೋಶದ ನಿರ್ದೇಶಕಿ ವೈಶಾಲಿ ಅವರು ನಗರದ ಐಜೂರು ಪೊಲೀಸ್ ಠಾಣೆಯಲ್ಲಿ ಮಂಗಳವಾರ ರಾತ್ರಿ ದೂರು ದಾಖಲಿಸಿದ್ದಾರೆ.
ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಚಿದಾನಂದ್ ಹಾಗೂ ಇತರರ ಮೇಲೆ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲೂ ಮಂಡ್ಯದ ಜಾಲವೇ ಭಾಗಿಯಾಗಿದ್ದು, ಅಲ್ಲಿ ಈಗಾಗಲೇ ಬಂಧಿತರಾಗಿರುವ ಆರೋಪಿಗಳನ್ನು ರಾಮನಗರ ಪೊಲೀಸರು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಇಂಡಿಯನ್ ಬ್ಯಾಂಕ್ ಹೆಸರಿನಲ್ಲಿ ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದೊಂದಿಗೆ ವ್ಯವಹರಿಸಿರುವ ಮಂಡ್ಯದ ವಂಚಕರ ಜಾಲ, ತಲಾ 1 ಕೋಟಿ ಮೊತ್ತದ 9 ಹಾಗೂ 99 ಲಕ್ಷದ ನಕಲಿ ಬಾಂಡ್ ನೀಡಿ ಹಣ ಲಪಟಾಯಿಸಿದೆ.
ಕಿಕ್ಬ್ಯಾಕ್ ಆಸೆಗೆ ಬಲಿ ಬಿದ್ದರು: ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರವು ಮಂಡ್ಯದ ಮುಡಾಕ್ಕಿಂತ ಮುಂಚೆಯೇ ಹಣ ಹೂಡಿದೆ. ಕಿಕ್ಬ್ಯಾಕ್ ಆಸೆಗೆ ಬಿದ್ದ ಪ್ರಾಧಿಕಾರದ ಆಯುಕ್ತರು ಸಂಸ್ಥೆಗೆ ಭಾರಿ ನಷ್ಟ ಉಂಟು ಮಾಡಿದ್ದಾರೆ. ಮಂಡ್ಯದ ಹಗರಣ ಬಯಲಾಗದಿದ್ದರೆ ಈ ಪ್ರಾಧಿಕಾರದ ಅವ್ಯವಹಾರವೂ ಮುಚ್ಚಿ ಹೋಗುತ್ತಿತ್ತು. ಮಂಡ್ಯ ಮುಡಾಕ್ಕೆ ಇಂಡಿಯನ್ ಬ್ಯಾಂಕ್ ಹೆಸರಿನಲ್ಲಷ್ಟೇ ಬಾಂಡ್ ನೀಡಿರುವ ವಂಚಕರು ರಾಮನಗರ-ಚನ್ನಪಟ್ಟಣ ಪ್ರಾಧಿಕಾರಕ್ಕೆ ಇಂಡಿಯನ್ ಬ್ಯಾಂಕ್ ಸಹಿತ ಮೂರು ಪ್ರತ್ಯೇಕ ಬ್ಯಾಂಕುಗಳ ಬಾಂಡ್ಗಳನ್ನು ನೀಡಿದ್ದಾರೆ ಎನ್ನುವ ಬಗ್ಗೆ ಮಾಹಿತಿಗಳು ದೃಢಪಡಿಸಿವೆ.
ಆಯುಕ್ತರ ದೋಸ್ತಿ: ಮಂಡ್ಯ ಮುಡಾದ ಆಯುಕ್ತ ಡಾ.ಶಿವರಾಮ್ ಮತ್ತು ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಚಿದಾನಂದ್ ಅವರಿಬ್ಬರೂ ದೋಸ್ತಿಗಳು. ಶಿವರಾಮ್ ಈ ಹಿಂದೆ ರಾಮನಗರದಲ್ಲಿ ಹಿಂದುಳಿದ ವರ್ಗಗಳ ಇಲಾಖೆ ಜಿಲ್ಲಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದರು.
ಮುಡಾಕ್ಕೆ ವರ್ಗ ಮಾಡಿಸಿಕೊಳ್ಳಲು ಶಿವರಾಮ್ ಅವರಿಗೆ ಚಿದಾನಂದ ಅವರೇ ಪ್ರೇರಣೆಯಾಗಿದ್ದರು. ಬಿಜೆಪಿ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿದ್ದ ಒಬ್ಬರು ಮಂಡ್ಯ ಮುಡಾಕ್ಕೆ ಶಿವರಾಮ್ ಅವರನ್ನು ವರ್ಗ ಮಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದ 9.99 ಕೋಟಿ ಹಣವನ್ನು ವಿವಿಧ ಬ್ಯಾಂಕುಗಳ ನಕಲಿ ಬಾಂಡ್ ನೀಡಿ ಲಪಟಾಯಿಸಿರುವ ಕುರಿತು ನಗರಾಭಿವೃದ್ಧಿ ಕೋಶದಿಂದ ಐಜೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. .
- ಅನುಪಮ್ ಅಗ್ರವಾಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
- ಮತ್ತೀಕೆರೆ ಜಯರಾಮ್