ದೇಶದಲ್ಲಿ ಶೇ. 80 ಮಹಿಳೆಯರಿಗೆ ರಕ್ತಹೀನತೆ
ಕ.ಪ್ರ.ವಾರ್ತೆ ರಾಮನಗರ ಜು.17
ದೇಶದಲ್ಲಿ ಗರ್ಭಿಣಿಯರೂ ಸೇರಿದಂತೆ ಶೇ. 70 ರಿಂದ 80 ರಷ್ಟು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಅಪೌಷ್ಟಿಕತೆಯೇ ಕಾರಣ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ ಶಾಲಾ ಮಕ್ಕಳಿಗೆ ಕಬ್ಬಿಣಾಂಶ ಮಾತ್ರೆ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಹದಲ್ಲಿ ಕಬ್ಬಿಣಾಂಶದ ಕೊರತೆಗೆ ಅಪೌಷ್ಟಿಕತೆ ಹಾಗೂ ಸಾಂಕ್ರಾಮಿಕ ರೋಗಗಳು ಕಾರಣವಾಗಿವೆ. ಒಬ್ಬ ವ್ಯಕ್ತಿಯು ಏಕಾಗ್ರತೆ ಸಾಧಿಸಲು, ಉತ್ತಮ ಚಿಂತನೆ ಬೆಳೆಸಿಕೊಳ್ಳಲು ಹಾಗೂ ಚಟುವಟಿಕೆಯಿಂದ ಮಾನಸಿಕ ಸಮತೋಲನ ಕಾಪಾಡಿಕೊಳ್ಳಲು ದೇಹಾರೋಗ್ಯ ಮುಖ್ಯವಾಗಿದೆ ಎಂದರು.
ಜಿಲ್ಲೆಯಲ್ಲಿ ಶೇಕಡಾ 50ರಷ್ಟು ಗರ್ಭಿಣಿಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಇದರಿಂದ ಜನಿಸುವ ಮಕ್ಕಳ ಮಾನಸಿಕ ಹಾಗು ದೈಹಿಕ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗಲಿದೆ. ಇಂತಹ ಮಕ್ಕಳು ಚಟುವಟಿಕೆಯಿಂದ ಇರದೆ ಮಂದಗತಿಯಲ್ಲಿರುವುದರಿಂದ ಬೇರೆ ಮಕ್ಕಳೊಂದಿಗೆ ಸ್ಪರ್ಧಾತ್ಮಕವಾಗಿ ಹಿಂದುಳಿದು, ಪ್ರಗತಿಯಲ್ಲಿ ಕುಂಠಿತಗೊಳ್ಳುವವು ಎಂದು ಹೇಳಿದರು.
ಸುಧಾರಿಸಲು ಸಾಧ್ಯ: ಈ ಸಮಸ್ಯೆಗಳನ್ನು ಮನಗಂಡ ಕೇಂದ್ರ ಹಾಗೂ ರಾಜ್ಯ ಸರ್ಕಾರವು 10 ರಿಂದ 19 ವರ್ಷದೊಳಗಿನ ಹದಿಹರೆಯದ ಮಕ್ಕಳಿಗೆ ವಾರಕ್ಕೊಮ್ಮೆ ಕಬ್ಬಿಣಾಂಶ ಮಾತ್ರೆಯನ್ನು ಪ್ರತಿ ಸೋಮವಾರ ಊಟದ ನಂತರ ನೀಡುವ ಮೂಲಕ ರಕ್ತದಲ್ಲಿನ ಕಬ್ಬಿಣಾಂಶವನ್ನು ಹೆಚ್ಚಿಸುವ ಕಾರ್ಯಕ್ರಮವನ್ನು ಜಾರಿಗೆ ತಂದಿದೆ ಎಂದರು.
ಕೆಂಪು ಕಣದಲ್ಲಿರುವ ಹಿಮೋಗ್ಲೋಬಿನ್ ಅಂಶವು ಆಮ್ಲಜನಕವನ್ನು ದೇಹದ ಎಲ್ಲಾ ಭಾಗಕ್ಕೂ ಪೂರೈಸಲಿದ್ದು, ಹೀಮೋಗ್ಲೋಬಿನ್ ಕಾರ್ಯ ನಿರ್ವಹಣೆಗೆ ಕಬ್ಬಿಣಾಂಶ ಪ್ರಮುಖವಾದದ್ದು, ಇದರ ಅಭಾವದಿಂದ ಸುಸ್ತು ಹಾಗೂ ಚಟುವಟಿಕೆ ಇಲ್ಲದಿರುವುದು ಕಾಣಬಹುದು ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ರಘುನಾಥ್ ತಿಳಿಸಿದರು.
ಹದಿಹರೆಯದಲ್ಲಿರುವ ಹೆಣ್ಣು ಮಕ್ಕಳು ಮದುವೆಯಾಗಿ ಮಕ್ಕಳಾದಾಗ ಕಬ್ಬಿಣಾಂಶದ ಕೊರತೆ ಹಾಗೂ ರಕ್ತಸ್ರಾವತೆಯಿಂದ ರಕ್ತಹೀನತೆ ಅನುಭವಿಸುತ್ತಿದ್ದಾರೆ. ಇದನ್ನು ಮನಗಂಡ ಸರ್ಕಾರವು ಸದರಿ ಯೋಜನೆಯನ್ನು ಜಾರಿಗೆ ತಂದಿದೆ. ಜಂತು ಹುಳುವು ರಕ್ತ ಹೀರುವುದರಿಂದ ಜಂತು ಹುಳುವಿನ ಮಾತ್ರೆಯನ್ನು ನೀಡಲಾಗುತ್ತಿದೆ ಎಂದರು.
ಸರ್ಕಾರಿ ಶಾಳೆಗಳಲ್ಲಿ: ಸರ್ಕಾರವು ಶಿಕ್ಷಣ ಮತ್ತು ಆರೋಗ್ಯಕ್ಕೆ ಪ್ರಾಮುಖ್ಯ ನೀಡುತ್ತಿದೆ. 6 ರಿಂದ 10ನೇ ತರಗತಿಯವರೆಗಿನ ಅನುದಾನಿತ ಹಾಗೂ ಸರ್ಕಾರಿ ಶಾಲೆಗಳಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿದೆ. ಮಕ್ಕಳು ತಪ್ಪದೆ ಪ್ರತಿ ಸೋಮವಾರ ಮಾತ್ರೆ ಸೇವಿಸುವಂತೆ ಶಿಕ್ಷಕರು ನೋಡಿಕೊಳ್ಳಬೇಕು. ಪ್ರತಿ ತಿಂಗಳು ಮಕ್ಕಳು ಸೇವಿಸುವ ಮಾತ್ರೆಯ ವಿವರವನ್ನು ಇಲಾಖೆಗೆ ಒದಗಿಸಬೇಕು ಎಂದು ಡಿಡಿಪಿಐ ಪ್ರಹ್ಲಾದಗೌಡ ಹೇಳಿದರು.
ನಗರದ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಚಂದನ ಕುಮಾರಿ ಮಾತನಾಡಿ, ಸರ್ಕಾರವು ಇದುವರೆಗೂ ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ, ಬಿಸಿಯೂಟ ನೀಡುತ್ತಿತ್ತು. ಈಗ ರಕ್ತ ಹೀನತೆಗೂ ಮಾತ್ರೆ ಒದಗಿಸುತ್ತಿರುವುದು ಉಪಯುಕ್ತವಾಗಿದೆ. ಹಿಂದಿನಿಂದಲೂ ಹೆಣ್ಣುಮಕ್ಕಳಲ್ಲಿ ಈ ಸಮಸ್ಯೆ ಇದ್ದು ಇದರ ನಿವಾರಣೆಗೆ ಸರ್ಕಾರ ಕಾರ್ಯಕ್ರಮ ಕೈಗೊಂಡಿರುವುದು ಸಂತಸದ ವಿಚಾರ ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಅಯಬ್ ಷರೀಫ್, ತಾಲೂಕು ಆರೋಗ್ಯಾಧಿಕಾರಿ ಡಾ.ಇಬ್ರಾಹಿಂ ಖಲೀಲ್, ಬಿಇಒ ಮುನಿಕೆಂಪೇಗೌಡ, ಶಾಲೆಯ ಮುಖ್ಯ ಶಿಕ್ಷಕಿ ಮಂಗಳ, ಆರ್ಸಿಎಚ್ ಅಧಿಕಾರಿ ಡಾ.ಸುಲೋಚನ, ಡಿಪಿಎಂಒ ಪ್ರಭುದೇವಗೌಡ ಭಾಗವಹಿಸಿದ್ದರು.