ಸರ್ಕಾರಿ ಶಾಲೆ ಮೂಲಭೂತ ಸೌಕರ್ಯಕ್ಕೆ ಆದ್ಯತೆ: ಕೃಷ್ಣಪ್ಪ
ಆನೇಕಲ್: ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳಿದ್ದು ಇಸ್ಕಾನ್ ವತಿಯಿಂದ ಮಧ್ಯಾಹ್ನದ ಊಟ ಪೂರೈಕೆಯಿದೆ. ಮುಂದಿನ ದಿನಗಳಲ್ಲಿ ಜಿಗಣಿ ಹೋಬಳಿಯ ಎಲ್ಲ ಶಾಲೆಗಳಲ್ಲೂ ಮೂಲಭೂತ ಸೌಲಭ್ಯಗಳ ಕೊರತೆ ಇಲ್ಲದಂತೆ ಎಚ್ಚರಿಕೆ ವಹಿಸಬೇಕೆಂದು ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಶಾಸಕ ಎಂ. ಕೃಷ್ಣಪ್ಪ ಸೂಚನೆ ನೀಡಿದ್ದಾರೆ. ಅವರು ತಮ್ಮ 50ನೆಯ ಹುಟ್ಟು ಹಬ್ಬದ ಪ್ರಯುಕ್ತ ಕ್ಷೇತ್ರದ ಎಲ್ಲ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಿಸಿದ ನಂತರ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಸಮಸ್ಯೆಗಳನ್ನು ಪ್ರತ್ಯೇಕವಾಗಿ ಆಲಿಸಿದರು. ಹಾರಗದ್ದೆ ಸರ್ಕಾರಿ ಪ್ರೌಢಶಾಲೆಯ ಹೆಣ್ಣು ಮಕ್ಕಳು ಶಾಲೆಯಲ್ಲಿ ನೀರು ಪೂರೈಕೆಯಿಲ್ಲದೆ ಸಮಸ್ಯೆಯಿದೆ ಎಂದಾಗ ಕೂಡಲೇ ಗ್ರಾಮ ಪಂಚಾಯ್ತಿ ಹಾಗೂ ಶಾಲಾ ಅಭಿವೃದ್ಧಿ ಸಮತಿಯಿ ಅಧ್ಯಕ್ಷರಿಗೆ ಶಾಲಾ ಆವರಣದಲ್ಲಿ ಪ್ರತ್ಯೇಕ ಕೊಳವೆ ಬಾವಿಯನ್ನು ಕೊರೆಸಲು ತಿಳಿಸಿದರು. ಹುಟ್ಟು ಹಬ್ಬದ ನೆನಪಿನಲ್ಲಿ ಶುದ್ಧ ಕುಡಿಯುವ ನೀರಿಗಾಗಿ ಫಿಲ್ಟರ್ ಅಳವಡಿಸುವುದಾಗಿ ವಾಗ್ದಾನ ಮಾಡಿದರು. ವಿದ್ಯಾರ್ಥಿಗಳ ಆಟದ ಸಾಮಗ್ರಿಗಳ ಬಗ್ಗೆ ಮನವಿ ಮಾಡಿದಾಗಿ 1 ವಾರದಲ್ಲಿ 25 ಸಹಸ್ರ ರು.ಗಳ ಆಟದ ಸಾಮಗ್ರಿಗಳನ್ನು ನೀಡುವುದಾಗಿ ತಿಳಿಸಿದರು. ಶಾಲಾ ಮೈದಾನಕ್ಕೆ ಕಾಂಪೌಂಡ್, ಶೌಚಾಲಯಕ್ಕೆ ಪ್ರತ್ಯೇಕ ನೀರಿನ ಟ್ಯಾಂಕ್ ಬಗ್ಗೆ ಸೂಚನೆ ನೀಡಿದರು. ದೈಹಿಕ ಶಿಕ್ಷಕರ ಕೊರತೆಯನ್ನು ನೀಗಿಸಲು ಕ್ಷೇತ್ರ ಶಿಕ್ಷಣಾಧಿಕಾರಿ ಜೊತೆ ಮಾತುಕತೆ ನಡೆಸಿದರು.