27ರಂದು ಪ್ರತಿಭಾ ಪುರಸ್ಕಾರ
ರಾಮನಗರ: ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಮತ್ತು ತಾಲೂಕು ಘಟಕದಿಂದ ನಗರದ ಬಸವೇಶ್ವರ ಪ್ರಾರ್ಥನಾ ಮಂದಿರದಲ್ಲಿ ಜು. 27ರಂದು ಸಂಜೆ 3ಕ್ಕೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವೀರಶೈವ ಲಿಂಗಾಯತ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಗುವುದು. ಹೆಚ್ಚು ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳು ಆಯಾ ತಾಲೂಕು ಘಟಕಗಳಲ್ಲಿ ಜು. 20ರೊಳಗೆ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಜಿಲ್ಲಾ ಘಟಕದ ಅಧ್ಯಕ್ಷ ಚಿಕ್ಕಹೊನ್ನಯ್ಯ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ. 9902640521, 9008083999 ಸಂಪರ್ಕಿಸಬಹುದು.
ನಾಗರಿಕ ಬಂದೂಕು ತರಬೇತಿ
ರಾಮನಗರ: ಜಿಲ್ಲಾ ಪೊಲೀಸ್ ಘಟಕದಿಂದ ತಾಲೂಕಿನ 100 ಮಂದಿ ನಾಗರಿಕರಿಗೆ ಆತ್ಮರಕ್ಷಣೆಗಾಗಿ ನಾಗರಿಕ ಬಂದೂಕು ತರಬೇತಿ ಶಿಬಿರವನ್ನು ರಾಮನಗರ ಜಿಲ್ಲಾ ಕ್ರೀಡಾಂಗಣದಲ್ಲಿ ಆ.1 ರಿಂದ 7ರವರೆಗೆ ಉಚಿತವಾಗಿ ಆಯೋಜಿಸಲಾಗಿದೆ. ಆತ್ಮರಕ್ಷಣೆ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣದ ಸಲುವಾಗಿ ನಡೆಸುತ್ತಿರುವ ಈ ತರಬೇತಿ ಅವಧಿಯಲ್ಲಿ ಪೊಲೀಸ್ ಇಲಾಖೆ ನೀಡುವ 15 ರೌಂಡ್ಸ್ ಬುಲೆಟ್ಗಳಿಗೆ ತಗಲುವ ವೆಚ್ಚ, ಮಾಹಿತಿ ಪುಸ್ತಕ ಹಾಗೂ ಇತರೆ ಸಾಮಗ್ರಿಗಳಿಗೆ 300 ಹಣ ಭರಿಸಬೇಕಾಗಿರುತ್ತದೆ. ಮುಂಜಾನೆಯ ವ್ಯಾಯಾಮದ ವೇಳೆಯಲ್ಲಿ ತಮ್ಮ ದಿನ ನಿತ್ಯದ ಚಟುವಟಿಕೆಗಳಿಗೆ ಭಂಗ ಬಾರದಂತೆ ಬೆಳಗ್ಗೆ 7 ರಿಂದ 9ರವರೆಗೆ 7 ದಿನ ತರಬೇತಿ ನಡೆಯಲಿದ್ದು, ಜಿಲ್ಲಾ ರಕ್ಷಣಾಧಿಕಾರಿಗಳು ತರಬೇತಿ ಪತ್ರ ನೀಡುವರು.
ಕೆಂಪೇಗೌಡ ಹೆಸರು: ಸ್ವಾಗತ
ರಾಮನಗರ: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಲು ನಿರ್ಧರಿಸಿರುವ ಕೇಂದ್ರ ಸರ್ಕಾರವನ್ನು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕ ಅಭಿನಂದಿಸಿದೆ. ನಾಡಪ್ರಭು ಕೆಂಪೇಗೌಡರು ಬೆಂಗಳೂರುನಗರ ನಿರ್ಮಿಸಲು ಅಪಾರ ತ್ಯಾಗ, ಬಲಿದಾನ ಮಾಡಿದ್ದರು. ಅವರ ಹೆಸರನ್ನು ಅಜರಾಮರಗೊಳಿಸುವ ಸದುದ್ದೇಶದಿಂದ ಅವರ ಹೆಸರನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕಿಡುವಂತೆ ಕರವೇ ಹತ್ತಾರು ಬಾರಿ ಹೋರಾಟ ಹಮ್ಮಿಕೊಂಡಿತ್ತು. ಕೇಂದ್ರ ಸರ್ಕಾರ ಈಗ ಸಮ್ಮತಿಸಿರುವುದು ಸಂತಸದ ವಿಚಾರ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಬಿ. ಶ್ರೀಧರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.