ಎಲ್ಲರಿಗೂ ಕಾನೂನು ಅರಿವು ಅಗತ್ಯ: ನ್ಯಾ. ಶ್ಯಾಮಲ
ಕ.ಪ್ರ.ವಾರ್ತೆ ಮಾಗಡಿ ಜು. 18
ಪ್ರತಿಯೊಬ್ಬರೂ ದೇಶದಲ್ಲಿರುವ ಕಾನೂನುಗಳ ಬಗ್ಗೆ ಅರಿವು ಪಡೆದುಕೊಳ್ಳುವುದು ಕರ್ತವ್ಯಗಳಲ್ಲೊಂದಾಗಿದೆ ಎಂದು ಅಪರ ಸಿವಿಲ್ ನ್ಯಾಯಾಧೀಶೆ ಎಸ್. ಶ್ಯಾಮಲ ತಿಳಿಸಿದರು.
ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಮಾಗಡಿ ತಾಲೂಕು ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾರ್ಮಿಕ ಇಲಾಖೆ, ತಾಲೂಕು ಪಂಚಾಯಿತಿ ಆರೋಗ್ಯಾಧಿಕಾರಿಗಳ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿ, ಶಿಶು ಯೋಜನಾ ಅಭಿವೃದ್ಧಿ ಕಚೇರಿ ಸಂಯುಕ್ತಾಶ್ರಯದಲ್ಲಿ ಸಂಚಾರಿ ಲೋಕ ಅದಾಲತ್ ಮತ್ತು ಕಾನೂನು ಸಾಕ್ಷರತಾ ರಥ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಹಸಿರು ದ್ವಜ ತೋರಿಸುವ ಮೂಲಕ ಸಾಕ್ಷರತಾ ರಥಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಾನೂನು ಅರಿವಿದ್ದರೆ ವ್ಯಾಜ್ಯಗಳು ಕಡಿಮೆಯಾಗಿ ನ್ಯಾಯಾಲಯಗಳಿಗೆ ಅಲೆಯುವುದು ತಪ್ಪುತ್ತದೆ. ನ್ಯಾಯಾಲಯಗಳ ಮೇಲಿನ ಒತ್ತಡವೂ ಕಡಿಮೆಯಾಗುತ್ತದೆ. ತ್ವರಿತವಾಗಿ ನ್ಯಾಯದಾನ ಸಾಧ್ಯವಾಗುತ್ತದೆ. ಸಮಯ ಹಾಗೂ ಹಣದ ಉಳಿತಾಯವೂ ಆಗುತ್ತದೆ. ವೈಯಕ್ತಿಕವಾಗಿ ಆರ್ಥಿಕಾಭಿವೃದ್ಧಿ ಆಗುವ ಜತೆಗೆ ದೇಶದ ಅಭಿವೃದ್ಧಿಯೂ ಆಗುತ್ತದೆ ಎಂದು ಹೇಳಿದರು. ಇತ್ತೀಚಿನ ದಿನಗಳಲ್ಲಿ ವರದಕ್ಷಿಣೆ ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ. ವರದಕ್ಷಿಣೆ ಆಸೆಗಾಗಿ ಪತಿ ತನ್ನ ಪತ್ನಿಯನ್ನೇ ಅಮಾನುಷವಾಗಿ ಕೊಲೆ ಮಾಡುತ್ತಿರುವುದು ವಿಷಾದನೀಯ. ಈ ಅನಿಷ್ಟ ಪಿಡುಗಿನ ವಿರುದ್ಧ ಹೋರಾಟ ನಡೆಸಲು ಮಹಿಳೆಯರು ವರದಕ್ಷಿಣೆ ಕಾನೂನಿನ ಬಗ್ಗೆ ಅರಿವು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಜಿ.ಪಾಪಣ್ಣ ಮಾತನಾಡಿ, ಜ್ವಲಂತ ಸಮಸ್ಯೆಯಾಗಿ ಬೆಳೆದಿರುವ ಬಾಲಕಾರ್ಮಿಕ ಪದ್ಧತಿ ಮಾನವೀಯತೆಗೆ ಹಾಗೂ ಸಮಾಜಕ್ಕೆ ಕಳಂಕವಾಗಿದೆ. ಈ ಕೃತ್ಯದಲ್ಲಿ ಭಾಗಿಯಾಗುವ ತಂದೆ, ತಾಯಿಗಳು ಸೇರಿದಂತೆ ಎಲ್ಲರೂ ಅಪರಾಧಿಗಳಾಗುತ್ತಾರೆ. ಇದು ಹಲವಾರು ವರ್ಷದಿಂದ ಬಂದಿರುವ ಜಟಿಲ ಸಮಸ್ಯೆಯಾಗಿ ಬೆಳೆದು ಬಂದಿದ್ದು, ಜನರನ್ನು ಶಿಕ್ಷಿತರನ್ನಾಗಿಸುವ ಜಾಗೃತಿಗೊಳಿಸುವ ಕಾರ್ಯದಿಂದ ಮಾತ್ರ ನಿರ್ಮೂಲನೆ ಸಾಧ್ಯ ಎಂದರು. ಸಿಡಿಪಿಒ ಕೆಂಪಯ್ಯ, ಸಮಾಜ ಕಲ್ಯಣಾಧಿಕಾರಿ ರಾಜು, ಎಪಿಪಿಗಳಾದ ಲತಾ, ವಕೀಲರಾದ ಡಿ.ಎಚ್. ಮಲ್ಲಿಕಾರ್ಜುನಯ್ಯ, ಕೆ.ಎಸ್. ಪ್ರಕಾಶ್, ರಂಗಯ್ಯ, ರೇಣುಕಪ್ಪ ಇತರರು ಭಾಗವಹಿಸಿದ್ದರು.