ಐಟಿ ದಾಳಿ ಖಂಡಿಸಿ ಒಕ್ಕಲಿಗರ ಸಂಘ ಪ್ರತಿಭಟನೆ
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ಜು. 18
ಆದಿಚುಂಚನಗಿರಿ ಸಂಸ್ಥಾನದ ವಿಜಯನಗರ ಶಾಖಾ ಮಠದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿರುವುದನ್ನು ಖಂಡಿಸಿ ತಾಲೂಕು ಒಕ್ಕಲಿಗರ ಸಂಘದ ನೇತೃತ್ವದಲ್ಲಿ ಇಲ್ಲಿನ ಕೊಂಗಾಡಿಯಪ್ಪ ಕೇಂದ್ರ ಬಸ್ ನಿಲ್ದಾಣದ ಸಿದ್ಧಲಿಂಗಯ್ಯ ವೃತ್ತದಲ್ಲಿ ಗುರುವಾರ ಸಂಜೆ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಒಕ್ಕಲಿಗ ಮುಖಂಡರು, ರಾಜ್ಯದಲ್ಲಿ ಶೈಕ್ಷಣಿಕ, ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಮಠ- ಮಾನ್ಯಗಳ ಮೇಲೆ ಸರ್ಕಾರ ಈ ಬಗೆಯ ಧೋರಣೆ ಪ್ರದರ್ಶಿಸುವುದು ಸರಿಯಲ್ಲ. ಧಾರ್ಮಿಕ ಭಾವನೆಗಳಿಗೆ ಇದರಿಂದ ನೋವುಂಟಾಗುತ್ತದೆ. ಜನರ ಹಣವನ್ನು ಲೂಟಿ ಮಾಡುತ್ತಿರುವ ಬಹುರಾಷ್ಟ್ರೀಯ ಕಂಪನಿಗಳಿಗೆ ಕೆಂಪು ಹಾಸಿನ ಸ್ವಾಗತ ನೀಡುವ ಸರ್ಕಾರಗಳು ಸಮಾಜದ ಉದ್ಧಾರಕ್ಕಾಗಿ ನಿರಂತರ ಸೇವೆ ಮಾಡುತ್ತಿರುವ ಮಠ- ಮಾನ್ಯಗಳ ಮೇಲೆ ದಾಳಿ ನಡೆಸುವ ನೀಚ ಕೃತ್ಯ ನಡೆಸಬಾರದು ಎಂದು ಕಿಡಿಕಾರಿದರು.
ಇದು ಒಂದು ಸಮುದಾಯ ಗುರಿಯಾಗಿಟ್ಟುಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವ್ಯವಸ್ಥಿತವಾಗಿ ನಡೆಸಿರುವ ಪಿತೂರಿ. ಸೋನಿಯಾ ಗಾಂಧಿ ಮತ್ತು ಸಿದ್ದರಾಮಯ್ಯ ಈ ಬಗೆಯ ದ್ವೇಷದ ರಾಜಕಾರಣ ಮಾಡಬಾರದು. ಕೂಡಲೇ ಅವರು ಅಧಿಕಾರಿಗಳನ್ನು ಹಿಂದಕ್ಕೆ ಕರೆಸಿಕೊಂಡು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು. ಒಕ್ಕಲಿಗ ಮುಖಂಡರಾದ ಚುಂಚೇಗೌಡ, ವೆಂಕಟರಾಜು, ಶಿವಕುಮಾರ್, ಪದ್ಮನಾಭ, ಆರ್.ಕೆಂಪರಾಜು, ಅಶ್ವತ್ಥ್, ಆನಂದಗೌಡ, ಕುಮಾರ್, ಅರವಿಂದ್ ಮತ್ತಿತರರು ಭಾಗವಹಿಸಿದ್ದರು.