ವಿಜೃಂಭಣೆಯ ಬನ್ನಿಮಹಾಂಕಾಳಿ ಅಮ್ಮನವರ ಕರಗ
ಕ.ಪ್ರ.ವಾರ್ತೆ ರಾಮನಗರ ಜು. 18
ನಗರದ ಆದಿದೇವತೆ ಶ್ರೀ ಬನ್ನಿಮಹಾಂಕಾಳಿ ಅಮ್ಮನವರ ಕರಗ ಮತ್ತು ಅಗ್ನಿಕೊಂಡ ಮಹೋತ್ಸವವು ಸಾವಿರಾರು ಭಕ್ತರ ಸಮ್ಮಖದಲ್ಲಿ ಬುಧವಾರ ವಿಜೃಂಭಣೆಯಿಂದ ಜರುಗಿತು.
ಮಂಗಳವಾರ ಮುಂಜಾನೆಯಿಂದಲೇ ಬನ್ನಿ ಮಹಂಕಾಳಿ ದೇವಾಲಯದಲ್ಲಿ ಅಲಂಕೃತಗೊಂಡ ದೇವಿಗೆ ಪೂಜಾ ಕಾರ್ಯಕ್ರಮಗಳು ನಡೆದವು, ನಗರದ ವಿವಿಧ ಬಡಾವಣೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಮಹಿಳೆಯರು ತಂಬಿಟ್ಟಿನ ಆರತಿಗಳನ್ನು ತಂದು ಪೂಜೆ ಸಲ್ಲಿಸಿದರು, ಕೆಲವು ಭಕ್ತರು ಮಡಿಲು ತುಂಬುವ ಮೂಲಕ ಹರಕೆಗಳನ್ನು ಸಮರ್ಪಿಸಿದರು. ಸತತ ಒಂಬತ್ತನೇ ಬಾರಿಗೆ ಆರ್.ಎನ್. ಯೋಗೀಶ್ ಅವರು ಯಶಸ್ವಿ ಕರಗಧಾರಣೆ ಮಾಡಿದರು.
ಮಂಗಳವಾರ ರಾತ್ರಿ ಬನ್ನಿಮಹಾಂಕಾಳಿ ಅಮ್ಮನವರ ದೇವಾಲಯದಿಂದ ಹೊರಟ ಕರಗವು ಕರಗದಬೀದಿ ರಾಘವೇಂದ್ರ ಕಾಲೋನಿ, ಮೂಲಕ ಐಜೂರು ಬಡಾವಣೆ, ಅಗ್ರಹಾರ, ಕಾಯಿಸೊಪ್ಪಿನ ಬೀದಿ, ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ಮಂಗಳಾರತಿ ಸ್ವೀಕರಿಸಿತು. ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಎಂ.ಜಿ.ರಸ್ತೆ ಮೂಲಕ ಹಳೇ ಬಿ.ಎಂ ರಸ್ತೆ, ಟ್ರೂಪ್ಲೇನ್, ಬಾಲಗೇರಿ ಮುಖಾಂತರವಾಗಿ ಪುರ ಪೊಲೀಸ್ ಸ್ಟೇಷನ್ ಮಾರ್ಗವಾಗಿ ಆಗಮಿಸಿ ದೇವಾಲಯದ ಬಳಿ ಮಧ್ಯಾಹ್ನ 12.30ಕ್ಕೆ ಅಗ್ನಿಕುಂಡ ಪ್ರವೇಶಿಸಿತು. ಹಲವಾರು ಬಡಾವಣೆಗಳಲ್ಲಿ ಕರಗ ಸಂಚರಿಸುವ ಹಾದಿಯಲ್ಲಿ ಪುಷ್ಪಗಳನ್ನು ಹಾಸಿ ವಿಶೇಷವಾಗಿ ಅಲಂಕರಿಸಲಾಗಿತ್ತು. ಕರಗ ಮಹೋತ್ಸವದ ಅಂಗವಾಗಿ ನಗರದಲ್ಲಿ ಆಕರ್ಷಣೀಯ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.