ಹೋರಾಟ ಅನಿವಾರ್ಯ: ಜಿಲ್ಲಾ ಸಮಿತಿ ಎಚ್ಚರಿಕೆ
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರವನ್ನು ಜಿಲ್ಲಾ ಕೇಂದ್ರ ಮಾಡುವ ವಿಚಾರದಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಇಚ್ಛಾಶಕ್ತಿ ಪ್ರದರ್ಶಿಸಲು ವಿಫಲವಾಗಿವೆ. ಜನರನ್ನು ನಂಬಿಸಿ ವಂಚಿಸಿವೆ. ಕೂಡಲೇ ದೊಡ್ಡಬಳ್ಳಾಪುರದ ಶಾಸಕರು, ಮಾಜಿ ಶಾಸಕರು ಸೇರಿದಂತೆ ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಹೋರಾಟದ ರೂಪರೇಷೆ ಸಿದ್ಧಪಡಿಸಬೇಕು. ಹಾಲಿ ಶಾಸಕರು ಸರ್ಕಾರದ ಮೇಲೆ ಪ್ರಭಾವ ಬೀರುವ ಮೂಲಕ ದೊಡ್ಡಬಳ್ಳಾಪುರ ಮತ್ತು ಈ ಭಾಗದ ಜನರ ಬೇಡಿಕೆಗೆ ಸ್ಪಂದಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಹೋರಾಟ ಸಮಿತಿ ಒತ್ತಾಯ ಮಾಡಿದೆ.
ಸರ್ಕಾರ ಈ ಬಗ್ಗೆ ಗಂಭೀರ ಕ್ರಮ ಕೈಗೊಳ್ಳದಿದ್ದರೆ ಜನ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯ. ಇಂತಹ ಘಟನೆಗಳಿಗೆ ಅವಕಾಶ ಕೊಡದೇ ಇಲ್ಲಿನ ಜನರ ನ್ಯಾಯಯುತ ಬೇಡಿಕೆಯನ್ನು ತಕ್ಷಣ ಈಡೇರಿಸಬೇಕಿದೆ. ದೊಡ್ಡಬಳ್ಳಾಪುರವನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸಲು ಒತ್ತಡ ಹೇರಲು ಎಲ್ಲ ಸಂಘಟನೆಗಳು, ರಾಜಕೀಯ ಪಕ್ಷಗಳು, ಅಧಿಕಾರಿಗಳು, ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಎಲ್ಲ ಸಾರ್ವಜನಿಕರನ್ನೊಳಗೊಂಡ ಬೃಹತ್ ಸಭೆ ಆಯೋಜಿಸಿ ಹೋರಾಟದ ರೂಪರೇಷೆ ಚರ್ಚಿಸಲಾಗುವುದು ಎಂದು ಹೋರಾಟ ಸಮಿತಿ ಮುಖಂಡರು ತಿಳಿಸಿದ್ದಾರೆ.
ಇವರೇನಂತಾರೆ?
ದೊಡ್ಡಬಳ್ಳಾಪುರ ನಗರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಕೇಂದ್ರವಾಗಬೇಕು. ಜಿಲ್ಲೆಯಾಗಲು ಎಲ್ಲ ಅರ್ಹತೆ ಹೊಂದಿದ್ದು, 4 ತಾಲೂಕುಗಳಿಗೂ ಕೇಂದ್ರ ಸ್ಥಾನದಲ್ಲಿರುವ ದೊಡ್ಡಬಳ್ಳಾಪುರವನ್ನು 2008ರಲ್ಲೇ ಜಿಲ್ಲೆಯಾಗಿ ಘೋಷಿಸಬೇಕಿತ್ತು. ಈಗಲಾದರೂ ಸರ್ಕಾರ ಎಚ್ಚೆತ್ತುಕೊಳ್ಳಲಿ.
ಟಿ ಎಚ್.ಎಸ್. ನಾಗೇಶ್, ಅಧ್ಯಕ್ಷರು, ಸಂಸ್ಕೃತಿ ಟ್ರಸ್ಟ್
ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರವಾಗಬೇಕು ಎಂಬ ನ್ಯಾಯಯುತ ಬೇಡಿಕೆ ಈಡೇರದಿದ್ದರೆ ಹೋರಾಟ ಅನಿವಾರ್ಯ. ಎಲ್ಲ ಸಂಘಟನೆಗಳ ನೇತೃತ್ವದಲ್ಲಿ ಜಿಲ್ಲಾ ಹೋರಾಟ ಸಮಿತಿಯ ಒಕ್ಕೊರಲ ಹೋರಾಟಕ್ಕೆ ಭೂಮಿಕೆ ಸಿದ್ಧವಾಗುತ್ತಿದೆ.
ಟಿ ತೂಬಗೆರೆ ಷರೀಫ್, ಜಿಲ್ಲಾ ಹೋರಾಟ ಸಮಿತಿ ಮುಖಂಡರು.
ಜಿಲ್ಲಾ ಕೇಂದ್ರ ಘೋಷಣೆ ವಿಚಾರದಲ್ಲಿ ಸರ್ಕಾರ ಪಕ್ಷಪಾತ, ರಾಜಕೀಯ ಲೆಕ್ಕಾಚಾರಕ್ಕೆ ಬೆಲೆ ಕೊಟ್ಟರೆ ಪರಿಣಾಮ ನೆಟ್ಟಗಿರದು. ಎಲ್ಲ ರೀತಿಯಲ್ಲೂ ಸೂಕ್ತ ಎನಿಸಿರುವ ದೊಡ್ಡಬಳ್ಳಾಪುರವನ್ನೆ ಜಿಲ್ಲಾ ಕೇಂದ್ರವಾಗಿ ಘೋಷಿಸಬೇಕು.
ಟಿ ಎಂ.ಜೆ.ರಾಜಶೇಖರಶೆಟ್ಟಿ, ಸಂಚಾಲಕರು, ದೊಡ್ಡಬಳ್ಳಾಪುರ ಮಿತ್ರ ಬಳಗ
ಜಿಲ್ಲೆಯ ಏಕೈಕ ಉಪವಿಭಾಗ ಕೇಂದ್ರ, ಏಕೈಕ ನಗರಸಭೆಯಾಗಿರುವ ದೊಡ್ಡಬಳ್ಳಾಪುರ ಭೌಗೋಳಿಕ ವಿಸ್ತೀರ್ಣ ಮತ್ತು ಜನಸಂಖ್ಯೆ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಗಳಲ್ಲಿ ಇತರ ತಾಲೂಕುಗಳಿಗಿಂತ ಮುಂದಿದೆ. ಈ ಎಲ್ಲ ಮಾನದಂಡ ಅನುಸರಿಸಿ ಇದನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸಿ.
ಟಿ ರವಿಕಿರಣ್, ಅಧ್ಯಕ್ಷ, ತಾ.ಕಸಾಪ.
ಬೆಂ.ಗ್ರಾ. ಜಿಲ್ಲೆಯ ಕೇಂದ್ರವಾಗಿ ದೊಡ್ಡಬಳ್ಳಾಪುರವನ್ನು ಘೋಷಣೆ ಮಾಡಲಿ. ಇದರಿಂದ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಬೆಂಗಳೂರಿನ ಮೇಲೆ ಅವಲಂಬನೆ ತಪ್ಪುತ್ತದೆ.
ಟಿ ರಾಜು ಸಣ್ಣಕ್ಕಿ, ಸಂಚಾಲಕರು, ಕರ್ನಾಟಕ ದಲಿತ ಸಂಘರ್ಷ ಸಮಿತಿ