ಆಯುಕ್ತ ಚಿದಾನಂದ, ಶೇಖರ 5 ದಿನ ಪೊಲೀಸ್ ಕಸ್ಟಡಿಗೆ
ರಾಮನಗರ: ರಾ-ಚ ಪ್ರಾಧಿಕಾರದ ಬಹುಕೋಟಿ ಹಗರಣದಲ್ಲಿ ಬಂಧಿತರಾಗಿರುವ ಸಂಸ್ಥೆಯ ಆಯುಕ್ತ ಚಿದಾನಂದ ಮತ್ತು ವಂಚಕರ ಜಾಲದ ಸದಸ್ಯ ಶೇಖರನನ್ನು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯವು ಶುಕ್ರವಾರ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಗುರುವಾರವಷ್ಟೇ ಇಬ್ಬರೂ ಆರೋಪಿಗಳನ್ನು ದಸ್ತಗಿರಿ ಮಾಡಿದ್ದ ಹಗರಣದ ತನಿಖಾ ತಂಡವು ಶುಕ್ರವಾರ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯಕ್ಕೆ ಹಾಜರುಪಡಿಸಿ, 14 ದಿನದವರೆಗೆ ತಮ್ಮ ಕಸ್ಟಡಿಗೆ ಒಪ್ಪಿಸುವಂತೆ ಕೋರಿಕೆ ಸಲ್ಲಿಸಿತು. ಪೊಲೀಸರ ಅರ್ಜಿ ಪರಿಶೀಲಿಸಿದ ನ್ಯಾಯಾಧೀಶ ಎಸ್.ಎಚ್.ಹೊಸಗೌಡರ, 1ನೇ ಆರೋಪಿ ಚಿದಾನಂದ ಅವರನ್ನು 8 ದಿನದವರೆಗೆ ಮತ್ತು ಮತ್ತೊಬ್ಬ ಆರೋಪಿ ಶೇಖರನನ್ನು 5 ದಿನದವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶಿಸಿದರು.