ಜಿಪಂ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ
ಮತ್ತೀಕೆರೆ ಜಯರಾಮ್
ಕ.ಪ್ರ.ವಾರ್ತೆ ರಾಮನಗರ ಜು.19
ತೆರವಾಗಿರುವ ಜಿ.ಪಂ. ಅಧ್ಯಕ್ಷ ಸ್ಥಾನಕ್ಕೆ ನಾಳೆ (ಜು.20) ಚುನಾವಣೆ ನಡೆಯಲಿದೆ. ಜೆಡಿಎಸ್ ಅಭ್ಯರ್ಥಿಯಾಗಿ ಕೈಲಾಂಚ ಕ್ಷೇತ್ರದ ಸದಸ್ಯ ಎಚ್.ಸಿ.ರಾಜು ಕಣಕ್ಕೆ ಇಳಿಯಲಿದ್ದು, ಅವರ ಗೆಲವು ನಿರಾತಂಕ ಎನ್ನುವ ವಾತಾವರಣ ನಿರ್ಮಾಣವಾಗಿದೆ.
ಜೆಡಿಎಸ್ ವರಿಷ್ಠರ ಸಮ್ಮುಖದಲ್ಲಿ ಆಗಿದ್ದ ಒಡಂಬಡಿಕೆಯಂತೆ ಎರಡನೇ 20 ತಿಂಗಳ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಮುದ್ದುರಾಜ್ ಯಾದವ್ ರಾಜಿನಾಮೆ ಸಲ್ಲಿಸಿದ್ದರು. ಇದೀಗ ರಾಜು ಪಟ್ಟಾಭಿಷೇಕಕ್ಕೆ ಜೆಡಿಎಸ್ ಪಾಳಯದಲ್ಲಿ ಸಕಲ ಸಿದ್ಧತೆ ನಡೆದಿದೆ.
ಗೋವಾ ಯಾತ್ರೆ: ಈ ಚುನಾವಣೆ ಹಿನ್ನೆಲೆಯಲ್ಲಿ ಒಗ್ಗಟ್ಟು ಕಾಯ್ದುಕೊಳ್ಳಲು ಜೆಡಿಎಸ್ ಸದಸ್ಯರು ಮತ್ತು ಕುಟುಂಬದವರಿಗೆ ಗೋವಾ ಪ್ರವಾಸವನ್ನು ಆಯೋಜಿಸಲಾಗಿತ್ತು. 8 ದಿನದ ಹಿಂದೆ 8 ಸದಸ್ಯರ ಮೊದಲ ತಂಡ ಪ್ರವಾಸಕ್ಕೆ ಹೊರಟಿತ್ತು.
ಕಡೆಗೆ 11 ಸದಸ್ಯರು ತಂಡವನ್ನು ಕೂಡಿಕೊಂಡರು. ಶುಕ್ರವಾರ ಸಂಜೆ ವೇಳೆಗೆ ಶಿವನಸಮುದ್ರ ಬಳಿಯ ಗಗನ ಚುಕ್ಕಿ, ಭರಚುಕ್ಕಿ ವೀಕ್ಷಿಸಿದ ಸದಸ್ಯರ ತಂಡವು ಮೈಸೂರಿನಲ್ಲಿ ವಾಸ್ತವ್ಯ ಹೂಡಿದೆ. ಪ್ರವಾಸಕ್ಕೆ ತೆರಳದಿದ್ದ ಏಕೈಕ ಸದಸ್ಯೆ ನಾಗೇಶ್ವರಿ ಅವರು ಪತಿ ರಾಮಚಂದ್ರ ಸಮೇತ ತಂಡಕ್ಕೆ ಸೇರಿದ್ದಾರೆ.
ಜೆಡಿಎಸ್ ಪಕ್ಷದ ಎಲ್ಲ 12 ಸದಸ್ಯರು ಮೈಸೂರಿನಲ್ಲಿ ಒಗ್ಗಟ್ಟಿನ ಪ್ರತಿಜ್ಞೆ ಮಾಡಿದ್ದಾರೆ. ಇದರೊಂದಿಗೆ ಎದುರಾಳಿ ಪಕ್ಷದಿಂದ ಕುದುರೆ ವ್ಯಾಪಾರ ನಡೆಯಬಹುದು ಎನ್ನುವ ಬಗ್ಗೆ ದಳ ಪಾಳಯದಲ್ಲಿದ್ದ ಆತಂಕವೂ ನಿವಾರಣೆಯಾಗಿದೆ.
ಕಾಂಗ್ರೆಸ್ ಕಸರತ್ತು: 22 ಸದಸ್ಯ ಬಲದ ಜಿ.ಪಂ.ನಲ್ಲಿ ಜೆಡಿಎಸ್ 12 ಸದಸ್ಯರೊಂದಿಗೆ ಸ್ಪಷ್ಟ ಬಹುಮತ ಹೊಂದಿದೆ. 10 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ಪಕ್ಷವು ಆಕಸ್ಮಿಕವಾಗಷ್ಟೇ ಸಿಗಬಹುದಾದ ಲಾಭ ಪಡೆದುಕೊಳ್ಳುವ ಹವಣಿಕೆಯಲ್ಲಿದೆ.
ಆಡಳಿತ ಪಕ್ಷದಲ್ಲಿ ಹೇಗೂ ಗುಂಪುಗಾರಿಕೆ ಇದ್ದೇ ಇದೆ. ಯಾವುದಾದರೂ ಸಣ್ಣಪುಟ್ಟ ಭಿನ್ನಾಭಿಪ್ರಾಯ ತಲೆದೋರಿ, ಒಡಕು ಮೂಡಿದರೆ ಪರಿಸ್ಥಿತಿಯನ್ನು ಬಳಸಿಕೊಂಡು ಕುರ್ಚಿ ಹಿಡಿಯಬೇಕು ಎನ್ನುವ ಇರಾದೆಯಲ್ಲಿ ಕೈ ಪಾಳಯ ಕಡೆ ಗಳಿಗೆವರೆಗೂ ಹೋರಾಟ ಮುಂದುವರೆಸಿದೆ.
ಅಧ್ಯಕ್ಷ ಸ್ಥಾನವು ಹಿಂದುಳಿದ ಅ ವರ್ಗಕ್ಕೆ ಮೀಸಲಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಗಣಿ ಉದ್ಯಮಿ ಇಕ್ಬಾಲ್ ಹುಸೇನ್ ಅಧ್ಯಕ್ಷ ಸ್ಥಾನಾಕಾಂಕ್ಷಿ. ಬಂಡವಾಳ ಎಷ್ಟಾದರೂ ಸರಿಯೇ ಗದ್ದುಗೆ ಏರಬೇಕೆನ್ನುವ ಅವರ ಆಸೆಗೆ ಜೆಡಿಎಸ್ ಪಕ್ಷದಲ್ಲಿ ಮೂಡಿರುವ ಒಗ್ಗಟ್ಟು ತಣ್ಣೀರೆರೆಚಿದೆ.
ಸಂಪರ್ಕಿಸಲು ಯತ್ನ: ಬುಟ್ಟಿಗೆ ಬೀಳಬಹುದು ಎನ್ನುವಂತೆ ಗೋಚರಿಸಿರುವ ಒಂದಿಬ್ಬರು ಜೆಡಿಎಸ್ ಸದಸ್ಯರನ್ನು ಸಂಪರ್ಕಿಸಲು ಕಾಂಗ್ರೆಸ್ ಪಕ್ಷದಿಂದ ನಿರಂತರ ಪ್ರಯತ್ನ ಮುಂದುವರೆದಿದೆ. ಪ್ರವಾಸದಲ್ಲಿರುವ ಸದಸ್ಯರೊಬ್ಬರ ಪುತ್ರನನ್ನು ಸಂಪರ್ಕಿಸಿದ ಕಾಂಗ್ರೆಸಿಗರು ನಡೆಸಿದ ಮಾತುಕತೆ ಫಲಪ್ರದವಾಗಿಲ್ಲ ಎನ್ನಲಾಗಿದೆ.
ಜೆಡಿಎಸ್ ಸದಸ್ಯರು ಪ್ರವಾಸದಿಂದ ವಾಪಸಾಗಿ ಚುನಾವಣೆಯಲ್ಲಿ ಪಾಲ್ಗೊಳ್ಳಲು ಜಿ.ಪಂ. ಸಭಾಂಗಣ ಪ್ರವೇಶ ಮಾಡುವವರೆಗೂ ಕಾಂಗ್ರೆಸ್ ಪ್ರಯತ್ನ ಇದ್ದೇ ಇದೆ. ಈ ಕಾರಣಕ್ಕಾಗಿಯೇ ಇಕ್ಬಾಲ್ ಹುಸೇನ್ ನಾಮಪತ್ರ ಸಲ್ಲಿಕೆಗೆ ಸಜ್ಜಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಿರುಗೇಟಿಗೆ ಹವಣಿಕೆ: ಜಿ.ಪಂ.ನಲ್ಲಿರುವ 3 ಸ್ಥಾಯಿ ಸಮಿತಿಗಳ ಪೈಕಿ ಪ್ರತಿಪಕ್ಷಕ್ಕೆ 1 ಸ್ಥಾಯಿ ಸಮಿತಿಯನ್ನು ನೀಡುವುದು ವಾಡಿಕೆ. ಆದರೆ, ಪ್ರಸಕ್ತ ಅವಧಿಯಲ್ಲಿ ಜೆಡಿಎಸ್ ಎಲ್ಲ 3 ಸಮಿತಿಗಳ ಅಧಿಕಾರ ಕಬಳಿಸಿದೆ. ಈ ಕಾರಣಕ್ಕೆ ಕುದಿಯುತ್ತಿರುವ ಕಾಂಗ್ರೆಸ್ ತಿರುಗೇಟು ನೀಡಲು ಹವಣಿಸುತ್ತಿರುವುದು ಸುಳ್ಳಲ್ಲ.
ಜೆಡಿಎಸ್ ಪಕ್ಷದಲ್ಲಿ ಬಹತೇಕರು ಅಧಿಕಾರ ಅನುಭವಿಸಿದ್ದಾರೆ. ಅಳಿದುಳಿದವರಿಗೂ ಅಧಿಕಾರದ ಆಶ್ವಾಸನೆ ನೀಡಲಾಗಿದೆ. ಒಂದೊಮ್ಮೆ ಈ ರಾಜಿ ಸೂತ್ರ ಜಾರಿ ಆಗದಿದ್ದರಷ್ಟೇ ಒಡಕು ಕಾಣಬಹುದು. ಸದ್ಯದ ಮಟ್ಟಿಗೆ ಕಾಂಗ್ರೆಸ್ ಕಸರತ್ತು ಫಲಿಸಿದರೆ ಪವಾಡವೇ ಸರಿ.
ಮತ್ತೊಂದು ಬದಲಾವಣೆ: ಅಧ್ಯಕ್ಷರ ಬದಲಾವಣೆ ಪರ್ವದ ಎರಡನೇ ಅಂಕಕ್ಕೆ ಈಗ ವೇದಿಕೆ ಸಜ್ಜಾಗಿದೆ. ಆರೇಳು ತಿಂಗಳಲ್ಲಿ ಮತ್ತೊಂದು ಬದಲಾವಣೆ ಇದ್ದೇ ಇದೆ. ಸದ್ಯ ಉಪಾಧ್ಯಕ್ಷರಿಗೆ ನೀಡಿರುವ ಅವಧಿ ಇನ್ನೊಂದು ತಿಂಗಳಲ್ಲಿ ಅಂತ್ಯವಾಗಲಿದ್ದು, ಈ ಸ್ಥಾನಕ್ಕೆ ಮತ್ತೊಂದು ಚುನಾವಣೆ ಎದುರು ನೋಡುವಂತಾಗಿದೆ.
ಕಳೆದ 20 ತಿಂಗಳ ಅವಧಿಯ ಅಧ್ಯಕ್ಷ ಸ್ಥಾನವನ್ನು ಮೂವರಿಗೆ ಹಂಚಲಾಗಿತ್ತು. ಆದರೆ, ಹಂಸಕುಮಾರಿಗೆ ಸಿಕ್ಕಿದ್ದು ಒಂದೂವರೆ ತಿಂಗಳ ಸೀಮಿತ ಅವಧಿಯಷ್ಟೇ. ಅದನ್ನು ಸರಿದೂಗಿಸಲು ಇದೀಗ ಅವರಿಗೆ 10 ತಿಂಗಳವರೆಗೆ ಉಪಾಧ್ಯಕ್ಷ ಪಟ್ಟ ಕಟ್ಟಲಾಗುತ್ತಿದೆ.
ಬಾಲುಗೆ ಸಾರಥ್ಯ: ಜಿ.ಪಂ.ನಲ್ಲಿ ನಡೆಯುತ್ತಿರುವ ಅಧಿಕಾರ ಹಂಚಿಕೆ ಸೂತ್ರದ ಯಶಸ್ವಿ ಅನುಷ್ಠಾನದ ಹೊಣೆಯನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರಿಗೆ ವಹಿಸಿದ್ದಾರೆ. ಇವರಿಗೆ ಪಕ್ಷದ ಜಿಲ್ಲಾಧ್ಯಕ್ಷ ಕೆ.ರಾಜು ಸಾಥ್ ನೀಡುವರು.
ಮೈಸೂರಿನಿಂದ ಶನಿವಾರ ಬೆಳಗ್ಗೆಯೇ ರಾಮನಗರಕ್ಕೆ ಆಗಮಿಸುವ ಸ್ವಪಕ್ಷೀಯ ಸದಸ್ಯರೊಂದಿಗೆ ಬಾಲಕೃಷ್ಣ ಮತ್ತು ರಾಜು ಸಮಾಲೋಚನೆ ನಡೆಸಲಿದ್ದಾರೆ. ಪೂರ್ವ ನಿರ್ಧಾರದಂತೆ ಎಚ್.ಸಿ.ರಾಜು ನಾಮಪತ್ರ ಸಲ್ಲಿಸಲಿದ್ದಾರೆ.
ಡಿಕೆಶಿ ನಿರಾಸಕ್ತಿ: ಸಚಿವ ಸ್ಥಾನ ಕೈತಪ್ಪಿರುವುದರಿಂದ ಅಸಮಾಧಾನಗೊಂಡಿರುವ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರು ಪ್ರಸಕ್ತ ಜಿ.ಪಂ. ಅಧ್ಯಕ್ಷ ಸ್ಥಾನದ ಚುನಾವಣೆ ಬಗ್ಗೆ ಗಮನ ಕೇಂದ್ರೀಕರಿಸಿಲ್ಲ. ಹೀಗಾಗಿ ಜೆಡಿಎಸ್ ಹಾದಿ ಬಹುತೇಕ ಸುಗಮವಾದಂತಾಗಿದೆ.
ಒಂದೊಮ್ಮೆ ಜಿ.ಪಂ. ಆಡಳಿತವನ್ನು ಕೈವಶ ಮಾಡಿಕೊಳ್ಳಲೇಬೇಕೆಂದು ಶಿವಕುಮಾರ್ ಶತಾಯ ಗತಾಯ ಹೋರಾಟ ನಡೆಸಿದ್ದರೆ ಜೆಡಿಎಸ್ ಪಕ್ಷಕ್ಕೆ ಪ್ರಯಾಸವಾಗುತ್ತಿತ್ತು. ಕಾಂಗ್ರೆಸ್ ಪಕ್ಷದಲ್ಲಿ ರಾಜ್ಯ ಮಟ್ಟದ ಗೊಂದಲವು ಈ ಜಿಲ್ಲೆ ಮಟ್ಟಿಗೆ ಜೆಡಿಎಸ್ಗೆ ವರದಾನವೇ ಸರಿ.