ತನಿಖೆಗಿಳಿದ ಸಿಎ ಕಂ ಎಸ್ಪಿ ಅಗರವಾಲ್
ಮತ್ತೀಕೆರೆ ಜಯರಾಮ್
ರಾಮನಗರ: ಇಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗ್ರವಾಲ್ ಅವರು ಚಾರ್ಟೆಡ್ ಅಕೌಂಟೆಂಟ್ (ಸಿಎ) ಕೂಡ ಹೌದು. ಇದು, ರಾ-ಚ ನಗರಾಭಿವೃದ್ಧಿ ಪ್ರಾಧಿಕಾರದ ಬಹುಕೋಟಿ ಹಗರಣದ ತನಿಖೆಗೆ ಪೂರಕವಾದ ಅಂಶ.
16 ಕೋಟಿಯಷ್ಟು ಭಾರಿ ಮೊತ್ತದ ಅವ್ಯವಹಾರದ ತನಿಖೆ ನಡೆಸಲು ಪೊಲೀಸ್ ಇಲಾಖೆಗೆ ಆರ್ಥಿಕ ತಜ್ಞರ ಅಗತ್ಯವಿರುತ್ತದೆ. ಇಲ್ಲಿ ತನಿಖಾ ತಂಡದ ಮುಖ್ಯಸ್ಥರೇ ಸಿಎ ಆಗಿರುವುದರಿಂದ ಹಗರಣದ ಉದ್ದ, ಆಳವನ್ನು ಕಂಡುಕೊಳ್ಳಲು ನೆರವಾಗಿದೆ.
ಪ್ರಕರಣದ ಆರೋಪಿಗಳ ಪತ್ತೆ, ಪ್ರಾಥಮಿಕ ಹಂತದ ತನಿಖೆಗೆ ಡಿವೈಎಸ್ಪಿ ನೇತೃತ್ವದಲ್ಲಿ ಎರಡು ಪ್ರತ್ಯೇಕ ತಂಡಗಳನ್ನು ರಚಿಸಿರುವ ಅಗ್ರವಾಲ್ ಕಡತಗಳ ಪರಿಶೀಲನೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡು, ಮಹತ್ವದ ಮಾಹಿತಿ ಕಲೆ ಹಾಕುವಲ್ಲಿ ನಿರತರಾಗಿದ್ದಾರೆ.
ಇನ್ನಷ್ಟು ಕಡತ ವಶ: ರಾ-ಚ ಪ್ರಾಧಿಕಾರದ ಕಚೇರಿ ಮೇಲೆ ಶುಕ್ರವಾರವೂ ದಾಳಿ ಮುಂದುವರಿಸಿರುವ ಪೊಲೀಸರು ಹಣಕಾಸು ವಹಿವಾಟಿಗೆ ಸಂಬಂಧಿಸಿದಂತೆ ಮತ್ತಷ್ಟು ಮಹತ್ವದ ಕಡತಗಳನ್ನು ವಶಪಡಿಸಿಕೊಂಡಿದ್ದಾರೆ. ತಂಡದೊಂದಿಗೆ ಸತತ ಸಂಪರ್ಕದಲ್ಲಿದ್ದುಕೊಂಡು ನಿರ್ದಿಷ್ಟ ಕಡತಗಳ ವಶಕ್ಕೆ ಸ್ವತಃ ಎಸ್ಪಿಯೇ ಸೂಚಿಸುತ್ತಿದ್ದರು.
ರಾ-ಚ ಪ್ರಾಧಿಕಾರವು ವ್ಯವಹರಿಸಿದೆ ಎನ್ನಲಾಗಿರುವ ಮಂಡ್ಯದ ಇಂಡಿಯನ್ ಬ್ಯಾಂಕ್, ವಿಶ್ವೇಶ್ವರಯ್ಯ ಗ್ರಾಮೀಣ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಗಳಲ್ಲೂ ದಾಖಲೆಗಳ ಪರಿಶೀಲನೆಗೆ ಮತ್ತೊಂದು ತಂಡವನ್ನು ಕಳುಹಿಸಲಾಗಿದೆ. ಅಲ್ಲಿನ ತಂಡದೊಂದಿಗೂ ಎಸ್ಪಿ ನಿರಂತರ ಸಂಪರ್ಕದಲ್ಲಿದ್ದು, ಪ್ರತಿ ಮಾಹಿತಿಯನ್ನೂ ಕಲೆ ಹಾಕುತ್ತಿದ್ದಾರೆ.
ತಬ್ಬಿಬ್ಬಾದ ಆಯುಕ್ತ: ತಮ್ಮ ಪರ ವಕೀಲರೊಂದಿಗೆ ಗುರುವಾರ ಪೊಲೀಸರಿಗೆ ಶರಣಾದ ರಾ-ಚ ಪ್ರಾಧಿಕಾರದ ಆಯುಕ್ತ ಚಿದಾನಂದ ಅವರನ್ನು ಪೊಲೀಸ್ ಸಮವಸ್ತ್ರದಲ್ಲಿದ್ದ ಅಗ್ರವಾಲ್ ಅಪ್ಪಟ ಸಿಎಂ ರೀತಿಯಲ್ಲಿಯೇ ಪ್ರಶ್ನಿಸಲಾರಂಭಿಸಿದ್ದರು.
ಸುಮಾರು ಎರಡು ತಾಸಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿದ ಅಗ್ರವಾಲ್ ಅವರ ಪ್ರಶ್ನೆಗಳ ಸುರಿಮಳೆಗೆ ಚಿದಾನಂದ ತಬ್ಬಿಬ್ಬಾದರು. ಈ ವಿಚಾರಣೆ ಹಂತದಲ್ಲಿಯೇ ತಾವೊಬ್ಬ ಸಿಎಂಯೂ ಹೌದು ಎನ್ನುವುದನ್ನು ಎಸ್ಪಿ ಬಾಯಿ ಬಿಟ್ಟಿದ್ದಾರೆ.