ಫುಟ್ಪಾತ್ ಒತ್ತುವರಿ ತೆರವು ಕಾರ್ಯಾಚರಣೆ
ಕನ್ನಡಪ್ರಭ ವಾರ್ತೆ ಚನ್ನಪಟ್ಟಣ ಜು.19
ಪಟ್ಟಣದ ಫುಟ್ಪಾತ್ ಒತ್ತುವರಿ ತೆರವು ಕಾರ್ಯಕ್ಕೆ ಕೊನೆಗೂ ನಗರಸಭೆ ಮುಂದಾಗಿದ್ದು, ಗುರುವಾರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡಗಳು, ಫುಟ್ಪಾತ್ನಲ್ಲಿದ್ದ ಅಂಗಡಿಗಳನ್ನು ತೆರವು ಗೊಳಿಸಲಾಯಿತು.
ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ನಗರಸಭೆ ಸಿಬ್ಬಂದಿ ಪೊಲೀಸರ ಬೆಂಗಾವಲಿನೊಂದಿಗೆ ಗುರುವಾರ ಮುಂಜಾನೆ ಕಾರ್ಯಾಚರಣೆ ಆರಂಭಿಸಿ ಅಕ್ರಮವಾಗಿ ತಲೆ ಎತ್ತಿದ್ದ ರಸ್ತೆಬದಿ ಅಂಗಡಿಗಳು, ಪಾದಚಾರಿ ಮಾರ್ಗದಲ್ಲಿದ್ದ ಫುಟ್ಪಾತ್ ವ್ಯಾಪಾರಿಗಳನ್ನು ತೆರವುಗೊಳಿಸಿದರು.
ಪಟ್ಟಣದ ಎಂ.ಜಿ ರಸ್ತೆ, ಜೆಸಿ ರಸ್ತೆ, ರೇಲ್ವೆ ನಿಲ್ದಾಣದ ರಸ್ತೆ, ಚರ್ಚ್ ರಸ್ತೆ, ಬಿಎಂ ರಸ್ತೆಗಳಲ್ಲಿ ಫುಟ್ಪಾತ್ ತೆರವು ಕಾರ್ಯಾಚರಣೆ ನಡೆಸಿ, ತಮ್ಮ ಜಾಗವನ್ನೂ ಮೀರಿ ಕೆಲ ವರ್ತಕರು ರಸ್ತೆಯಲ್ಲಿ ನಿರ್ಮಿಸಿಕೊಂಡಿದ್ದ ರಸ್ತೆಗೆ ಸೇರಿದಂತೆ ಹಾಕಲಾಗಿದ್ದ ಮೆಟ್ಟಿಲುಗಳನ್ನು ತೆರವುಗೊಳಿಸಿ ರಸ್ತೆಯನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿಸಲಾಯಿತು.
ಕೆಲ ಅಂಗಡಿ ಮಾಲೀಕರು ತೆರವು ಕಾರ್ಯಾಚರಣೆಗೆ ಪ್ರತಿರೋಧ ವ್ಯಕ್ತಪಡಿಸಿದರಾದರೂ ಇದಕ್ಕೆ ಆಸ್ಪದ ನೀಡದ ನಗರಸಭೆ ಅಧಿಕಾರಿಗಳು ಜೆಸಿಬಿ ಮೂಲಕ ಅಕ್ರಮವಾಗಿ ನಿರ್ಮಾಣಗೊಂಡಿದ್ದ ಕಟ್ಟಡವನ್ನು ತೆರವು ಗೊಳಿಸುವಲ್ಲಿ ಸಫಲರಾದರು.
ಕೊನೆಗೂ ದೊರೆತ ಮುಕ್ತಿ: ಹಲವಾರು ವರ್ಷದಿಂದ ಪಟ್ಟಣದಲ್ಲಿ ಫುಟ್ಪಾತ್ ವ್ಯಾಪಾರದಿಂದಾಗಿ ಪ್ರಯಾಣಿಕರು ರಸ್ತೆಯಲ್ಲಿ ತಿರುಗಾಡಲಾಗದೆ ಪರದಾಡುವಂತಾಗಿತ್ತು. ಪಾದಚಾರಿಗಳ ಸಂಚಾರಕ್ಕೆಂದು ಎಂ.ಜಿ ರಸ್ತೆಯಲ್ಲಿ ಫುಟ್ಪಾತ್ ನಿರ್ಮಾಣ ಮಾಡಲಾಗಿತ್ತಾದರೂ ಫುಟ್ಪಾತ್ ವ್ಯಾಪಾರ ನಡೆಯುತ್ತಿದ್ದರಿಂದ ಪಾದಚಾರಿಗಳು ಮತ್ತು ವಾಹನಗಳು ರಸ್ತೆಯಲ್ಲೇ ಸಂಚರಿಸಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿತ್ತು.
ಎಂಜಿ ರಸ್ತೆ ಮತ್ತು ಅಂಚೆ ಕಚೇರಿ ರಸ್ತೆಯಲ್ಲಿ ಫುಟ್ಪಾತ್ ವ್ಯಾಪಾರ ಹೆಚ್ಚಳಗೊಂಡಿದ್ದರಿಂದಾಗಿ ಈ ಮಾರ್ಗದಲ್ಲಿ ಪಾದಚಾರಿಗಳು ವಾಹನಗಳು ಸಂಚರಿಸಲು ಸಾಕಷ್ಟು ಪ್ರಯಾಸಪಡಬೇಕಿತ್ತು. ಕೊನೆಗೂ ಜಿಲ್ಲಾಡಳಿತ ಮತ್ತು ನಗರಸಭೆ ಫುಟ್ಪಾತ್ ತೆರವಿಗೆ ದಿಟ್ಟ ಕ್ರಮ ಕೈಗೊಳ್ಳುವ ಮೂಲಕ ಹಲವಾರು ವರ್ಷಗಳಿಂದ ಪಟ್ಟಣದ ಜನತೆ ಕಾಡುತ್ತಿದ್ದ ಸಮಸ್ಯೆಗೆ ಮುಕ್ತಿ ದೊರೆತಂತಾಗಿದೆ.
ಎರಡು ದಿನ ಕಾರ್ಯಾಚರಣೆ: ಪಟ್ಟಣದಲ್ಲಿ ಆರಂಭಗೊಂಡಿರುವ ಫುಟ್ಪಾತ್ ತೆರವು ಕಾರ್ಯಾರಚಣೆಯನ್ನು ಇನ್ನೂ ಎರಡು ದಿನ ಮುಂದುವರಿಸುವುದಾಗಿ ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ರಮವಾಗಿ ಅಂಗಡಿ ಮಳಿಗೆಗಳನ್ನು ರಸ್ತೆಯವರೆಗೆ ವಿಸ್ತರಿಸಿಕೊಂಡಿರುವ ವರ್ತಕರು ಸ್ವಪ್ರೇರಣೆಯಿಂದ ತೆರವುಗೊಳಿಸದಿದ್ದರೆ ನಗರಸಭೆ ಕಾರ್ಯಾಚರಣೆಗೆ ತಗಲುವ ಖರ್ಚಅನ್ನು ಸಮಬಂಧಿಸಿದ ವರ್ತಕರ ಮೇಲೆ ಹೊರಿಸುವುದಾಗಿ ನಗರಸಭೆ ಎಚ್ಚರಿಸಿದೆ.
ಹಳೇ ರಾಗ ಆಗದಿರಲಿ: ಈಹಿಂದೆ ಪಟ್ಟಣದ ಫುಟ್ಪಾತ್ ತೆರವು ಕಾರ್ಯಾಚರಣೆಯನ್ನು ನಗರಸಭೆ ಹಲವಾರು ಬಾರಿ ನಡೆಸಿತ್ತಾದರೂ ಫುಟ್ಪಾತ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ವಿಫಲಗೊಂಡಿದೆ.
ಕಾರ್ಯಾಚರಣೆ ಆರಂಭಿಸಿದಾಗ ರಾಜಕೀಯ ಮುಖಂಡರ ರಕ್ಷಣೆ ಪಡೆವ ವ್ಯಾಪಾರಿಗಳು ನಿರಾತಂಕವಾಗಿ ಫುಟ್ಪಾತ್ನಲ್ಲಿ ವ್ಯಾಪಾರ ಮುಂದುವರಿಸುವ ಜತೆಗೆ ರಸ್ತೆಯ ವರೆಗೆ ಅಂಗಡಿಗಳನ್ನು ವಿಸ್ತರಿಸುತ್ತಿದ್ದು, ಇದರಿಂದಾಗಿ ಸಮಸ್ಯೆಗೆ ಪರಿಹಾರವೇ ಇಲ್ಲದಂತಾಗಿದೆ.
ಜಿಲ್ಲಾಡಳಿತ ಈಬಾರಿ ಕೈಗೊಂಡಿರುವ ದಿಟ್ಟ ನಿರ್ಧಾರ ಇದೇ ರೀತಿ ಮುಂದುವರಿಯಲಿ, ರಾಜಕಾರಣಿಗಳ ಪ್ರಭಾವಕ್ಕೆ ಬಲಿಯಾಗಿ ಮತ್ತೆ ಫುಟ್ಪಾತ್ ವ್ಯಾಪಾರಕ್ಕೆ ಅನುಮತಿ ನೀಡದಿರಲಿ ಎಂಬುದು ಪಟ್ಟಣದ ಸಾರ್ವಜನಿಕರ ಆಗ್ರಹ.