ಇಂದು ವಾರ್ಷಿಕ ಸಭೆ
ನೆಲಮಂಗಲ: ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ನೆಲಮಂಗಲ ತಾಲೂಕು ಘಟಕದ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜು. 21ರ ಭಾನುವಾರ ಸಂಘದ ಅಧ್ಯಕ್ಷ ಬಿ.ಆರ್. ಭಾಸ್ಕರ್ಪ್ರಸಾದ್ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿದೆ. ಸರ್ವ ಸದಸ್ಯರು ತಪ್ಪದೆ ಹಾಜರಾಗುವಂತೆ ಸಂಚಾಲಕ ರಾಜು ತಿಳಿಸಿದ್ದಾರೆ.
ನಾಳೆ ಪ್ರತಿಭಟನೆ
ಕನಕಪುರ: ಇಲ್ಲಿನ ಸ್ವಾಭಿಮಾನಿ ಒಕ್ಕಲಿಗರ ವೇದಿಕೆ ವತಿಯಿಂದ ಬೆಂಗಳೂರಿನಲ್ಲಿ ಆದಿಚುಂಚನಗಿರಿ ಶಾಖಾಮಠಗಳು ಹಾಗೂ ಸಂಸ್ಥೆಗಳ ಮೇಲೆ ನಡೆದಿರುವ ಆದಾಯ ತೆರಿಗೆ ದಾಳಿ ಖಂಡಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಸಾರ್ವಜನಿಕ ಸಭೆ ಜು. 22 ರಂದು ಸೋಮವಾರ ಬೆಳಗ್ಗೆ ನಡೆಯಲಿದೆ. ಪ್ರತಿಭಟನಾ ಮೆರವಣಿಗೆ ನಂತರ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನಾ ಸಭೆ ನಡೆಯುತ್ತದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕೋರಲಾಗಿದೆ.
ಡಿಕ್ಕಿ: ವ್ಯಕ್ತಿ ಸಾವು
ಕನಕಪುರ: ಪಟ್ಟಣ ವ್ಯಾಪ್ತಿಯ ಪೇಟೆಕೆರೆ ಸಮೀಪದಲ್ಲಿ ಚಾಲಕನ ಅಜಾಗರೂಕತೆಯಿಂದ ರಸ್ತೆಬದಿಯ ಮರವೊಂದಕ್ಕೆ ಡಿಕ್ಕಿ ಹೊಡೆದ ಕಾರಣದಿಂದ ಕಾರಿನಲ್ಲಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಮೃತನನ್ನು ಸುನೀಲ್(22) ಎಂದು ಗುರುತಿಸಲಾಗಿದೆ. ಕನಕಪುರದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಟಾಟಾ ಇಂಡಿಕಾ ಕಾರಿನಲ್ಲಿ ಚಾಲಕನೂ ಸೇರಿದಂತೆ ನಾಲ್ಕು ಮಂದಿ ಇದ್ದು, ಪೇಟೆಕೆರೆ ಸಮೀಪ ಮರಕ್ಕೆ ವಾಹನವು ಡಿಕ್ಕಿ ಹೊಡೆದ ಕಾರಣದಿಂದ ವಾಹನದ ಮುಂಭಾಗದಲ್ಲಿ ಕುಳಿತಿದ್ದ ಸುನೀಲ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಚಾಲಕ ಹಾಗೂ ಇನ್ನಿಬ್ಬರು ಸಣ್ಣ- ಪುಟ್ಟ ಗಾಯಗಳೊಂದಿಗೆ ಬಚಾವಾಗಿದ್ದಾರೆ. ಕನಕಪುರ ಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕುಸಿದು ಬಿದ್ದು ಸಾವು
ನೆಲಮಂಗಲ: ಅಸ್ತಮಾ ರೋಗ ಉಲ್ಬಣಗೊಂಡು 25 ವರ್ಷದ ಮಹಿಳೆಯೊಬ್ಬರು ಮನೆಯಲ್ಲಿಯೇ ಕುಸಿದು ಬಿದ್ದು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ. ಮೃತರನ್ನು ಮಂಜು(25) ಎಂದು ಗುರುತಿಸಲಾಗಿದೆ. ಈಕೆ ಮೂಲತಃ ಬಿಹಾರ ಮೂಲದವರು. ಕಳೆದ 5 ವರ್ಷದ ಹಿಂದೆ ಮದುವೆಯಾಗಿದ್ದು, 3 ವರ್ಷದ ಹಿಂದೆ ಗಂಡನಿಂದ ದೂರ ಇದ್ದರು. ಈಕೆಗೆ 4 ವರ್ಷದ ಗಂಡು ಮಗುವಿದೆ. ಈಕೆ ಕಳೆದ 3 ದಿನದ ಹಿಂದೆ ಅಕ್ಕನ ಮನೆಯಾದ ದಾಬಸ್ಪೇಟೆಗೆ ತಾಯಿ ಸಮೇತ ಬಂದಿದ್ದಾರೆ. ಅಕ್ಕನ ಮನೆಯಲ್ಲಿದ್ದಾಗ ಅಸ್ತಮ ರೋಗ ಉಲ್ಬಣಗೊಂಡು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ.
ಅನುಮಾನಾಸ್ಪದ ಸಾವು: ಮತ್ತೊಂದು ಪ್ರಕರಣ ಕೆ.ಕೆ.ನೂರು ಗ್ರಾಮ ಬಳಿ ಇರುವ ಕೋಳಿ ಫಾರಂ ನೆಡೆಸುತ್ತಿದ್ದ ಶೋಭ(26) ಎಂಬವರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ ಎಂದು ಆಕೆಯ ಗಂಡ ಪೊಲೀಸರಿಗೆ ದೂರು ನೀಡಿದ್ದಾರೆ. ಕೋಳಿ ಫಾರಂ ಮೇಲ್ವಿಚಾರಕನಾದ ಸಿದ್ದರಾಜು ಎಂಬವರು ನನ್ನ ಹೆಂಡತಿಯನ್ನು ಕೊಲೆ ಮಾಡಿರುವುದಾಗಿ ಆರೋಪಿಸಿ ದೂರು ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವುದಾಗಿ ಸಬ್ಇನ್ಸ್ಪೆಕ್ಟರ್ ರವಿ ತಿಳಿಸಿದ್ದಾರೆ.