ದೇವನಹಳ್ಳಿ ಜಿಲ್ಲಾ ಕೇಂದ್ರವನ್ನಾಗಿಸಲು ಪರಿಶೀಲನೆ: ಸಿಎಂ
ದೇವನಹಳ್ಳಿ: ತಾಲೂಕಿನ ಹಲವಾರು ಸಂಘ- ಸಂಸ್ಥೆಗಳ ಬಹಳ ದಿನಗಳ ಬೇಡಿಕೆ ಅಲ್ಲದೆ ತಾಲೂಕು ವಕೀಲರ ಸಂಘದಿಂದಲೂ ಬೇಡಿಕೆ ಬಂದಿರುವಂತೆ ದೇವನಹಳ್ಳಿ ತಾಲೂಕು ಜಿಲ್ಲಾ ಕೇಂದ್ರವನ್ನಾಗಿ ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಶನಿವಾರ ಇಲ್ಲಿನ ವಕೀಲರ ಸಂಘದ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಅವರ ಕನಸು ಹಾಗೂ ಬಯಲು ಸೀಮೆ ಜಿಲ್ಲೆಗಳ ರೈತರ ಬಹಳ ದಿನಗಳ ಬೇಡಿಕೆಯಂತೆ ಶಾಶ್ವತ ನೀರಾವರಿ ಯೋಜನೆಗಾಗಿ ಈ ಬಾರಿಯ ಬಜೆಟ್ನಲ್ಲಿ ಒಂದು ಸಾವಿರ ಕೋಟಿ ರು. ಮಂಜೂರು ಮಾಡಲಾಗಿದೆ. ಅಲ್ಲದೆ, ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಶೀಘ್ರದಲ್ಲಿ ಕಾವಗಾರಿಗೆ ಚಾಲನೆ ನೀಡಲಾಗುವುದು ಎಂದರು.
ದಾನಿಗಳು ಹಾಗೂ ಸಮಾಜ ಸೇವಕರಾದ ರೊನಾಲ್ಡ್ ಕೊಲಾಸೊ ಅವರು 80 ಲಕ್ಷ ವೆಚ್ಚದಲ್ಲಿ ಇಲ್ಲಿನ ನ್ಯಾಯಾಲಯ ಆವರಣದಲ್ಲಿ ವಕೀಲರ ಸಂಘದ ಕಟ್ಟಡ ಕಟ್ಟಿಸಿಕೊಟ್ಟಿರುವುದಕ್ಕೆ ಕೊಲಾಸೊ ಕುಟುಂಬದವರನ್ನು ಮುಖ್ಯಮಂತ್ರಿಗಳು ಅಭಿನಂದಿಸಿದರಲ್ಲದೆ ಇಲ್ಲಿನ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರನ್ನು ಇಡಲು ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಂಡಿರುವುದಕ್ಕೂ ಎಂ. ವೀರಪ್ಪ ಮೊಯ್ಲಿ ಹಾಗೂ ಇತರ ಸಂಸದರನ್ನು ಅಭಿನಂದಿಸಿದರು.
ಕೇಂದ್ರ ಪೆಟ್ರೋಲಿಯಂ ಸಚಿವ ಎಂ.ವೀರಪ್ಪ ಮೊಯ್ಲಿ ಅವರು ವಕೀಲರ ಸಂಘದ ಪ್ರಥಮ ಅಂತಸ್ತಿನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದರು. ಅಧ್ಯಕ್ಷತೆಯನ್ನು ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ದಿಲೀಪ್ ಬೌಸ್ಲೆ ವಹಿಸಿದ್ದರು. ಹೈಕೋರ್ಟ್ ನ್ಯಾಯಾಧೀಶ ರಾಮ್ಮೋಹನ ರೆಡ್ಡಿ, ಕಾನೂನು ಸಚಿವ ಟಿ.ಬಿ. ಜಯಚಂದ್ರ, ಶಾಸಕರಾದ ಪಿಳ್ಳಮುನಿಶಾಮಪ್ಪ ಮಾತನಾಡಿದರು.
ನ್ಯಾಯಾಲಯ ಕಟ್ಟಡದ ಮೊದಲ ಅಂತಸ್ತಿನ ಕಟ್ಟಡದ ಉದ್ಘಾಟನೆಯನ್ನು ಹೈಕೋರ್ಟ್ ನ್ಯಾಧೀಶರಾದ ಕೆ.ಎಲ್. ಮಂಜುನಾಥ್ ಅವರು ನೆರವೇರಿಸಿ ಮಾತನಾಡಿದರು. ಕೃಷಿ ಸಚಿವ ಕೃಷ್ಣ ಬೈರೇಗೌಡ, ಜಿಲ್ಲಾಧಿಕಾರಿ ಶಂಕರ್, ಕರ್ನಾಟಕ ಬಾರ್ ಕೌನ್ಸಿಲ್ ಅಧ್ಯಕ್ಷ ಮುನಿಯಪ್ಪ, ವಕೀಲರ ಸಂಘದ ಅಧ್ಯಕ್ಷ ಆರ್. ಮಾರೇಗೌಡ, ಕಾರ್ಯದರ್ಶಿ ಮುನಿರಾಜು ಉಪಸ್ಥಿತರಿದ್ದರು.