ಸಂಭ್ರಮದ ಲಕ್ಷ್ಮಿ ವೆಂಕಟೇಶ್ವರ ಬ್ರಹ್ಮರಥೋತ್ಸವ
ಕ.ಪ್ರ.ವಾರ್ತೆ ಚನ್ನಪಟ್ಟಣ ಜು.20
ಆಷಾಢದ ಜಾತ್ರೆ ಎಂದೇ ಪ್ರಸಿದ್ಧಿ ಪಡೆದಿರುವ ತಾಲೂಕಿನ ದೇವರಹೊಸಹಳ್ಳಿ ಗ್ರಾಮದ ಲಕ್ಷ್ಮಿ ವೆಂಕಟೇಶ್ವರ ಬ್ರಹ್ಮರಥೋತ್ಸವ ಶನಿವಾರ ವಿಜೃಂಭಣೆಯಿಂದ ಜರುಗಿತು.
ಕ್ಷೇತ್ರದ ಶಾಸಕ ಸಿ.ಪಿ.ಯೋಗೇಶ್ವರ್ ರಥೋತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಡಾ. ದಯಾನಂದ್ ಸೇರಿದಂತೆ ಮುಜರಾಯಿ ಇಲಾಖೆಯ ಅಧಿಕಾರಿಗಳು ದೇವಾಲಯದ ಅರ್ಚಕರು ಮತ್ತು ಗ್ರಾಮದ ಪ್ರಮುಖರು ಸೇರಿದಂತೆ ಸಹಸ್ರಾರು ಭಕ್ತಾದಿಗಳು ಸಾಕ್ಷಿಯಾದರು. ದೇವರಹೊಸಹಳ್ಳಿ ಗ್ರಾಮದಲ್ಲಿ ಪ್ರತಿ ವರ್ಷ ಆಷಾಢ ಮಾಸದ ದ್ವಾದಶಿಯಂದು ನಡೆಯುವ ಜಾತ್ರಾ ಮಹೋತ್ಸವದಲ್ಲಿ ಆಗಷ್ಟೇ ನವ ಜೀವನಕ್ಕೆ ಕಾಲಿರಿಸಿದ ನವದಂಪತಿಗಳದ್ದೇ ಕಾರುಬಾರು.
ಆಷಾಢ ಮಾಸದಲ್ಲಿ ಹೊಸದಾಗಿ ಮದುವೆಯಾದವರು ಪತ್ನಿಯನ್ನು ತವರು ಮನೆಗೆ ಕಳುಹಿಸುವುದು ವಾಡಿಕೆ. ಅಂತೆಯೇ ಉಪವಾಸದ ಹಬ್ಬಕ್ಕೆ ಅಳಿಯ ಮಾವನ ಮನೆಗೆ ಬಂದು ತನ್ನ ಪತ್ನಿಯೊಂದಿಗೆ ಜಾತ್ರೆಗೆ ಆಗಮಿಸಿ ಸಂಜೀವರಾಯ ಸ್ವಾಮಿ ದೇವರ ದರ್ಶನ ಪಡೆದರೆ ಅವರ ದಾಂಪತ್ಯ ಗಟ್ಟಿಯಾಗಿರುತ್ತದೆಂಬುದು ಇಲ್ಲಿನ ಜನತೆಯ ನಂಬಿಕೆಯಾಗಿದೆ.
ಸರತಿಯ ಸಾಲಿನಲ್ಲಿ ನಿಂತು ಭಕ್ತಾದಿಗಳು ದೇವರ ದರ್ಶನಪಡೆದರು. 2 ಕಿಮೀಗೂ ಉದ್ದದ ಸಾಲು ದೇವರ ದರ್ಶನಕ್ಕೆ ನಿರ್ಮಾಣ ಗೊಂಡಿದ್ದರು. ಭಕ್ತಾದಿಗಳು ಬೆಳಗ್ಗಿನಿಂದಲೇ ಸಾಲಿನಲ್ಲಿ ನಿಂತಿದ್ದು ಕಂಡು ಬಂದಿತು.