30 ಕೋಟಿಗೂ ಅಧಿಕ ಹಣ ಬಳಸಿದ್ದ ಚಿದಾನಂದ!
ಟಿ ಕೆ.ಎನ್. ರವಿ/ ಮತ್ತೀಕೆರೆ ಜಯರಾಮ್
ಮಂಡ್ಯ/ರಾಮನಗರ: ರಾ-ಚ ಪ್ರಾಧಿಕಾರದ ಆಯುಕ್ತ ಚಿದಾನಂದ ಭಾರಿ ಪ್ರಳಯಾಂತಕ, ಪ್ರಾಧಿಕಾರದ ಲಾಸ್ ತುಂಬಲು ಹೊಸ ಬಡಾವಣೆಗಳನ್ನು ನಿರ್ಮಾಣ ಮಾಡಿ, ದುಡ್ಡು ಬಾಚಿದ ನಂತರ ದೋಚಿದ್ದು ಹೇಗೆ ಎಂಬುದನ್ನು ಈ ಸ್ಟೋರಿ ಸಾರ್ವಜನಿಕರಿಗೆ ಸಮಗ್ರ ಮಾಹಿತಿ ನೀಡುತ್ತಾ ಹೋಗುತ್ತದೆ.
ಕಳೆದ 3 ವರ್ಷಗಳಿಂದಲೂ ರಾಮನಗರ ಬಿಟ್ಟು, ಮಂಡ್ಯದ ವಿವಿಧ ಬ್ಯಾಂಕ್ಗಳಿಗೆ ಮಾತ್ರ ಠೇವಣಿ ನೀಡುವ ಹೆಸರಿನಲ್ಲಿ ವಂಚಕರ ಜಾಲಕ್ಕೆ ಹಣ ಸರಬರಾಜು ಆಗುತ್ತಿತ್ತು ಎಂಬುದಂತೂ ನಿಜ. ಪ್ರಾಧಿಕಾರದ ಹಣದ ಬಡ್ಡಿ ಹಾಗೂ ಆಮಿಷದ ಆಸೆಗಾಗಿ ರಾಮನಗರ- ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಚಿದಾನಂದ ಒಂದು ಅಂದಾಜಿ ಪ್ರಕಾರ 30 ಕೋಟಿಗಳಿಗೂ ಅಧಿಕ ಹಣ ಯೂ ಟರ್ನ್ ರೀತಿಯಲ್ಲಿ ಬಳಕೆ ಮಾಡಿಕೊಂಡಿದ್ದಾರೆ. ಈಗ ಕೆಲವು ಕೋಟಿಗಳಷ್ಟು ಹಣ ಮಂಗಮಾಯವಾಗಿದೆ ಎಂದು ಗೊತ್ತಾಗಿದೆ.
ಮಂಡ್ಯದ ಇಂಡಿಯನ್ ಬ್ಯಾಂಕ್ ಹೆಸರಿನಲ್ಲಿ 9.90 ಕೋಟಿ ಮಾತ್ರ ದುರುಪಯೋಗವಾಗಿದೆ ಎಂದು ಭಾವಿಸಿದ್ದ ಪೊಲೀಸರಿಗೆ ತನಿಖೆಯಿಂದ ಮತ್ತೊಂದು ಆಘಾತ ಕಾದಿತ್ತು. ವಂಚಕರ ಜಾಲ ಪ್ರಾಧಿಕಾರಕ್ಕೆ 16.50 ಕೋಟಿ ಹಣಕ್ಕೆ ಪಂಗನಾಮ ಹಾಕಿದೆ ಎಂದು ಗೊತ್ತಾಯಿತು. ಆದರೆ, ತನಿಖೆ ಸಂದರ್ಭ ಆಯುಕ್ತ ಚಿದಾನಂದ 2010 ರಿಂದಲೇ ಮಂಡ್ಯದ ವಿವಿಧ ಬ್ಯಾಂಕ್ಗಳಲ್ಲಿ ಠೇವಣಿ ಇಟ್ಟಿರುವುದಾಗಿ ತೋರಿಸಿ, ನಕಲಿ ಬಾಂಡ್ ಸೃಷ್ಟಿ ಮಾಡಿ ಖದೀಮರ ಜಾಲಕ್ಕೆ ಹಣ ನೀಡಿ ನಂತರ ಬಡ್ಡಿ ಹಾಗೂ ಆಮಿಷವನ್ನು ಪೂರೈಸಿಕೊಳ್ಳುತ್ತಿದ್ದರು ಎಂಬ ಅಂಶ ಬಯಲಾಗಿದೆ. ಮಂಡ್ಯದ ವಿಶ್ವೇಶ್ವರಯ್ಯ ಗ್ರಾಮೀಣ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಬ್ಯಾಂಕ್ ಆಫ್ ಇಂಡಿಯಾ ಹೆಸರಿನಲ್ಲಿ ನಕಲಿ ಬಾಂಡ್ಗಳನ್ನು ಸೃಷ್ಟಿಸಿ 6.50 ಕೋಟಿ ಗುಳುಂ ಮಾಡಿದ್ದಾರೆ. ಮಂಡ್ಯದ ಬಹುತೇಕ ಬ್ಯಾಂಕ್ಗಳ ನಕಲಿ ಬಾಂಡ್ಗಳನ್ನು ಸೃಷ್ಟಿ ಮಾಡಿ ಹಿಂದಿನಿಂದಲೂ ಈ ಜಾಲ ದಂಧೆ ಮಾಡುತ್ತಿದೆ ಎಂಬುದನ್ನು ಮಂಡ್ಯ ಮತ್ತು ರಾಮನಗರ ಪೊಲೀಸರು ಜಂಟಿಯಾಗಿ ಪತ್ತೆ ಹಚ್ಚಿದ್ದಾರೆ. ಮಂಡ್ಯದ ವಿಶ್ವೇಶ್ವರಯ್ಯ ಗ್ರಾಮೀಣ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಬ್ಯಾಂಕ್ ಆಫ್ ಇಂಡಿಯಾ ಮಾತ್ರವಲ್ಲದೇ ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಎಚ್ಡಿಎಫ್ಸಿ ಸೇರಿದಂತೆ ಅನೇಕ ಬ್ಯಾಂಕ್ಗಳಿಗೆ ಶನಿವಾರ ರಾಮನಗರ ಪೊಲೀಸರು ಭೇಟಿ ನೀಡಿ ತನಿಖೆ ಆರಂಭಿಸಿದರು. ಈ ಎಲ್ಲಾ ಬ್ಯಾಂಕ್ಗಳಲ್ಲಿ ವಂಚಕರ ಜಾಲ ಖಾತೆಗಳನ್ನು ಹೊಂದಿದೆಯೇ ಠೇವಣಿ ಹೆಸರಿನಲ್ಲಿ ಯಾವ ರೀತಿ ನಕಲಿ ಬಾಂಡ್ಗಳನ್ನು ನೀಡಿದ್ದಾರೆ. ಬ್ಯಾಂಕ್ ಅಧಿಕಾರಿಗಳ ಪಾತ್ರ ಏನು ಯಾವಾಗ ಠೇವಣಿ ಇಟ್ಟಿದ್ದರು ಮತ್ತು ಯಾವಾಗ ಹಣ ಹಿಂದಕ್ಕೆ ಪಡೆದಿದ್ದಾರೆ ಎಂಬುದನ್ನು ಪೊಲೀಸರು ಕೆಲವು ಬ್ಯಾಂಕ್ಗಳಲ್ಲಿ ಕೂಲಂಕಷ ತನಿಖೆ ಮಾಡಿದ ಸಂದರ್ಭದಲ್ಲಿ ಭಯಂಕರ ಮಾಹಿತಿಗಳು ಬಹಿರಂಗಗೊಂಡಿವೆ ಎಂದು ಹೇಳಲಾಗುತ್ತಿದೆ.
ದುಡ್ಡು ಬಾಚಿದರು, ನಂತರ ದೋಚಿದರು: 'ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ' ಅನ್ನುವ ರೀತಿಯಲ್ಲಿ ವಂಚಕರ ಜೊತೆ ಸೇರಿಕೊಂಡು ದುಡ್ಡನ್ನು ಯಾವ ರೀತಿ ಮಜಾ ಮಾಡಬೇಕು ಎನ್ನುವುದಕ್ಕೆ ಮಂಡ್ಯ-ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತರು ಉದಾಹರಣೆಗಳಾಗಿ ನಿಲ್ಲುತ್ತಾರೆ.
ರಾಮನಗರ- ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರ 2008ರಲ್ಲಿ ಸಿಕ್ಕಾಪಟ್ಟೆ ಲಾಸ್ನಲ್ಲಿ ಇತ್ತು. ಇನ್ನೇನು ಪ್ರಾಧಿಕಾರ ಮುಚ್ಚಿ ಬಿಡಬೇಕು ಎನ್ನುವ ಹಂತಕ್ಕೆ ಬಂದಾಗ ತಕ್ಷಣಕ್ಕೆ ಹೊಳೆದಿದ್ದು, ಬಡಾವಣೆಗಳನ್ನು ನಿರ್ಮಾಣ ಮಾಡುವ ಹೊಸ ಐಡಿಯಾ. ಕೂಡಲೇ ರಾಮನಗರ ಹಾಗೂ ಚನ್ನಪಟ್ಟಣದಲ್ಲಿ ಹೆಲ್ತಿ ಸಿಟಿ, ಜೀಗೆನಹಳ್ಳಿ ಬಡಾವಣೆ ಹಾಗೂ ಕಣ್ವ ಬಡಾವಣೆ ನಿರ್ಮಾಣ ಮಾಡಿ ಸೈಟ್ ಹಂಚುವ ಪ್ಲಾನ್ ಕಾರ್ಯ ರೂಪಕ್ಕೆ ಬಂದದ್ದೇ ತಡ, ಬೆಂಗಳೂರು, ಮೈಸೂರು, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಸೇರಿದಂತೆ ರಾಜ್ಯದ ಅನೇಕ ಪಟ್ಟಣಗಳ ನಿವಾಸಿಗಳು ಈ ಎಲ್ಲಾ ಬಡಾವಣೆಗಳಲ್ಲಿ ನಿವೇಶನ ಹೊಂದುವ ಬಯಕೆ ಹೊಂದಿ ಅರ್ಜಿ ಹಾಕಿ, ಕ್ಯೂನಲ್ಲಿ ನಿಂತರು.
ಆ ಸಮಯದಲ್ಲೇ ರಾ-ಚ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹಣದ ಹೊಳೆ ಹರಿದು ಬಂತು. ಪ್ರಾಧಿಕಾರದ ಸಾಲ ತೀರಿಸಿದರು. ಪ್ರಾಧಿಕಾರವನ್ನು ಲಾಭದಲ್ಲಿ ತಂದು ನಿಲ್ಲಿಸಿದರು. ನಂತರ ಬಡಾವಣೆ ನಿರ್ಮಾಣಕ್ಕಾಗಿ ಅಗತ್ಯ ಜಮೀನು ಖರೀದಿ ಮಾಡಿದರು. 20 ಕೋಟಿಯಿಂದ 25 ಕೋಟಿ ಖರ್ಚು ಮಾಡಿ ಹೊಸದಾಗಿ 3 ಬಡಾವಣೆಗಳನ್ನು ನಿರ್ಮಿಸಿ, ಅಡಿಯೊಂದಕ್ಕೆ 500 ರಿಂದ 600 ದರ ನಿಗದಿ ಮಾಡಿ ನಿವೇಶನವನ್ನು ಹಂಚಿದರು. ಆಗ ಉಳಿದುಕೊಂಡಿದ್ದ 30 ಕೋಟಿ ವಂಚಕರೊಂದಿಗೆ ಸೇರಿಕೊಂಡ ಆಯುಕ್ತ ಚಿದಾನಂದ ಎಲ್ಲಮ್ಮನ ಜಾತ್ರೆ ಮಾಡಲು ಶುರು ಇಟ್ಟುಕೊಂಡರು ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದರು.
ಸಿಬಿಐ ತನಿಖೆ ಆರಂಭವಾದರೆ ಮತ್ತಷ್ಟು ಸತ್ಯಗಳು ಬೆಳಕಿಗೆ ಬರುತ್ತವೆ. ಇದುವರೆಗೂ ಎರಡೂ ಜಿಲ್ಲೆಗಳ ಸ್ಥಳೀಯ ಪೊಲೀಸರು ಸಾಕಷ್ಟು ಶ್ರಮ ವಹಿಸಿ ವಂಚಕರ ಬಣ್ಣ ಬಯಲು ಮಾಡಿದ್ದಾರೆ. ಆದರೆ, ಕಾಣದ ಕೈಗಳು ಹಾಗೂ ವಂಚಕರ ಜಾಲದೊಂದಿಗೆ ಸಂಬಂಧ ಇರಿಸಿಕೊಂಡ ಸಾಕಷ್ಟು ಮಂದಿ ಇನ್ನೂ ನಿಗೂಢವಾಗಿದ್ದಾರೆ. ಎಲ್ಲವನ್ನೂ ಬಯಲಿಗೆ ಎಳೆದರೆ ವಂಚಕರ ಜಾಲದ ಹಣೆಬರಹ ಬೆತ್ತಲಾತ್ತದೆ.