ಪಂಚಾಯ್ತಿ ವ್ಯಾಪ್ತಿ ಹಣ ಪೂರ್ಣ ಬಳಕೆಯಾಗಲಿ
ಆನೇಕಲ್ಲು: ರಾಜ್ಯ ಸರ್ಕಾರ ನೀಡುವ ಪಂಚಾಯ್ತಿ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡು ಅರ್ಹರಿಗೆ ಎಲ್ಲ ಯೋಜನೆಗಳನ್ನು ಪ್ರಾಮಾಣಿಕವಾಗಿ ತಲುಪಿಸಬೇಕೆಂದು ಲೆಕ್ಕ ಪರಿಶೋಧಾನಾಧಿಕಾರಿ ಲೋಕೇಶ್ ಗ್ಗೌಡ ತಿಳಿಸಿದ್ದಾರೆ.
ಅವರು ಗಡಿ ಗ್ರಾಮ ಬಳ್ಳೂರು ಪಂಚಾಯ್ತಿಯ ಲೆಕ್ಕ ಪರಿಶೋಧನ ನಂತರ ಮೆಚ್ಚುಗೆ ವ್ಯಕ್ತ ಪಡಿಸಿ ಮಾತನಾಡಿ ಸ್ವಚ್ಛತೆಗಾಗಿ ರಾಷ್ಟ್ರ ಮಟ್ಟದ ಬಹುಮಾನ ಪಡೆದಿರುವ ಕೀರ್ತಿ ಬಳ್ಳೂರಿಗೆ ಲಭಿಸಿರುವುದು ಸಂತಸ ತಂದಿದೆ. ಗ್ರಾಮದ ಪ್ರತಿ ಮನೆಗೂ ಕಡ್ಡಾಯ ಶೌಚಾಲಯ ವ್ಯವಸ್ಥೆ ನೀಡಲು ಪಂಚಾಯ್ತಿ ಮುಂದಾಗಬೇಕೆಂದರು. ಅರೆನೂರಿನಲ್ಲಿ ಬೆಳೆಸಿರುವ ಟೀಕ್ ಮರಗಳು ಪ್ರಗತಿಯ ಸಂಕೇತ. ಇತರ ಗ್ರಾಮಗಳೂ ಗಂಧ, ಬೇವು ಹಾಗೂ ಪ್ರಾಣಿ ಪಕ್ಷಿಗಳಿಗೆ ಉಪಯುಕ್ತವಾಗುವು ಹಣ್ಣಿನ ಗಿಡಗಳನ್ನು ಬೆಳೆಸುವ ಮೂಲಕ ಜೈವಿಕ ಸಮತೋಲನಕ್ಕೆ ಅವಕಾಶ ನೀಡಬೇಕೆಂದರು. ಅಭಿವೃದ್ಧಿ ನೆಪದಲ್ಲಿ ಕೈಗಾರಿಕೆಗಳು ತ್ಯಾಜ್ಯ ವಿಲೇ ಮಾಡಿದರೇ ರಸ್ತೆ ಅಭಿವೃದ್ಧಿ ನೆಪದಲ್ಲಿ ನೂರಾರು ವರ್ಷ ವಯಸ್ಸಿನ ವೃಕ್ಷಗಳು ನೆಲಕ್ಕೊರಗುತ್ತಿವೆ. ಮುಂದಿನ ಪೀಳಿಗೆಗಾಗಿ ಹಸಿರು ಬೆಳೆಸುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಪ್ರಶಂಸೆ: ಉಳಿದಂತೆ ಕೆರೆ ಸಂರಕ್ಷಣೆ, ಆಸ್ಪತ್ರೆ ನಿರ್ವಹಣೆ, ಶಾಲಾ ಕಟ್ಟಡ ಕಾಂಪೌಂಡ್ ಹಾಗೂ ಗ್ರಾಮಗಳಲ್ಲಿನ ಸಿಮೆಂಟ್ ಕಾಂಕ್ರಿಟ್ ರಸ್ತೆ ಪ್ರಗತಿಯ ಕೈಗನ್ನಡಿಯಾಗಿದೆ ಎಂದು ಪ್ರಶಂಸಿಸಿದರು. ಕೇಂದ್ರ ಸರ್ಕಾರದ ನರೇಗಾ ಯೋಜನೆಯ ಹಣ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಬೇಕು. ಮಂಜೂರಾಗಿರುವ ಹೆಚ್ಚಿನ ಮೊತ್ತ ಫಲಾನುಭವಿಗೆ ತಲುಪಬೇಕು. ಅರ್ಹರನ್ನು ಯೋಜನೆಗೆ ಸೇರ್ಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಗ್ರಾಪಂ ಅಧ್ಯಕ್ಷೆ ಮಂಜುಳಾ ವಿ. ರೆಡ್ಡಿ, ಮಧು ಪೂರ್ಣಿಮ, ಬಾಬೂರೆಡ್ಡಿ, ಪಿಡಿಒ ರಂಗಸ್ವಾಮಿ, ಸಂಜೀವಪ್ಪ, ಮಂಜುನಾಥರೆಡ್ಡಿ, ಚಂದ್ರಶೇಖರ್, ನಂಜಾರೆಡ್ಡಿ, ರಾಜಪ್ಪ, ವೇಣು, ವಸಂತ್ ಷರೀಷ್ ಇದ್ದರು.