ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ರೈತರ ಮೇಲೆ ನಿರಂತರ ದಬ್ಬಾಳಿಕೆ, ದೌರ್ಜನ್ಯ

Rashmi Kasaragodu
Updated On : 22 Jul 2013, 1:21 am

ಕ.ಪ್ರ.ವಾರ್ತೆ   ರಾಮನಗರ   ಜು. 21
ರೈತರ ಅಭಿವೃದ್ಧಿ ಹೆಸರಿನಲ್ಲಿ ಓಟು ಗಿಟ್ಟಿಸಿ ಅಧಿಕಾರಕ್ಕೆ ಬಂದ ಸರ್ಕಾರಗಳೇ ರೈತರ ಮೇಲೆ ನಿರಂತರವಾಗಿ
ದಬ್ಬಾಳಿಕೆ, ದೌರ್ಜನ್ಯ ನಡೆಸುತ್ತಿವೆ ಎಂದು ಬಿಟಿ ತಳಿ ವಿರುದ್ಧದ ಹೋರಾಟಗಾರ ವೀರಭದ್ರಪ್ಪ ಬಿಸಿಲೇಹಳ್ಳಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಭಾನುವಾರ ನಡೆದ ರೈತ ಹುತಾತ್ಮ ದಿನಾಚರಣೆ ಮತ್ತು ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತನಿಗೆ ದಬ್ಬಾಳಿಕೆಯನ್ನು ವಿರೋಧಿಸಿ ಬೆಳೆಯುವ ಶಕ್ತಿ ಇದೆ ಎಂದರು.
ದೇಶದಲ್ಲಿ ಹಿಂದೆ ಇದ್ದ ರಾಜಪ್ರಭುತ್ವ, ಬ್ರಿಟೀಷರ ಆಳ್ವಿಕೆಯನ್ನು ವಿರೋಧಿಸಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಂದಿದ್ದೇವೆ. ಇಂದಿನ ಸರ್ಕಾರಗಳು ಪೊಲೀಸರಿಂದ ರೈತರನ್ನು ಗುಂಡಿಕ್ಕಿ ಕೊಲ್ಲಿಸುವ ಕೀಳು ಮಟ್ಟಕ್ಕಿಳಿದಿವೆ. ಆದರೆ, ಗುಂಡಿಟ್ಟ ಕೈಗಳಿಗೆ ಅನ್ನ ನೀಡುವ ಸೌಜನ್ಯ ರೈತನಿಗಿದೆ ಎಂದು ತಿಳಿಸಿದರು.
ಸ್ವಾತಂತ್ರ್ಯಾನಂತರದಲ್ಲಿ ದೇಶದಲ್ಲಿ ಸುಮಾರು 3 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿತ್ತನೆ ಬೀಜ, ರಸಗೊಬ್ಬರ ಕೇಳಲು ಹೋದ ರೈತರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಇಂತಹ ಕೊಲೆಗಡುಕ ಸರ್ಕಾರಗಳ ವಿರುದ್ಧ ಹೋರಾಟ ಮಾಡಬೇಕಿದೆ ಎಂದು ಹೇಳಿದರು.
ನಿಲುಕದ ಅಚಾತುರ್ಯ: ಕೇಂದ್ರ ಸರ್ಕಾರವು ಚಿಲ್ಲರೆ ವ್ಯಾಪಾರದಲ್ಲಿ ವಿದೇಶೀ ನೇರ ಬಂಡವಾಳ ಹೂಡಿಕೆಗೆ ಅವಕಾಶ ನೀಡಿರುವುದು ನಮ್ಮೆಲ್ಲರ ಮಿತಿಗೆ ನಿಲುಕದ ಅಚಾತುರ್ಯವಾಗಿದೆ. ಸುಮಾರು ರು.8 ಸಾವಿರ ಕೋಟಿ ಮಿಲಿಯನ್ ಡಾಲರ್ ದೇಶಕ್ಕೆ ಹರಿದು ಬರಲಿದೆ. ಇದು ನಮ್ಮ ಅರ್ಥ ವ್ಯವಸ್ಥೆಯನ್ನೇ ಬುಡಮೇಲು ಮಾಡಲಿದೆ ಎಂದರು.
ಎಫ್ಡಿಐನಿಂದ ದೇಶದ ಕೃಷಿ ವ್ಯವಸ್ಥೆ ಮೇಲೆ ದುಷ್ಪರಿಣಾಮ ಉಂಟಾಗಲಿದೆ. ಜೀವ ವೈವಿಧ್ಯದ ಜತೆಗೆ ನಮ್ಮ ಸಂಸ್ಕೃತಿಯೂ ಹಾಳಾಗಲಿದೆ. ಶ್ರೀಮಂತ ರಾಷ್ಟ್ರಗಳು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಕತ್ತು ಹಿಚುಕುವ ಕೆಲಸ ಮಾಡುತ್ತಿವೆ. ಇದಕ್ಕೆ ಅನುಮತಿ ನೀಡಿರುವುದು ಒಂದು ದುರಂತವಾಗಿದೆ ಎಂದರು.
ಗ್ರಾಮೀಣ ಪ್ರದೇಶದ ರೈತರು ನಗರ ಪ್ರದೇಶಗಳಿಗೆ ವಲಸೆ ಹೋಗುವಂತ ಪರಿಸ್ಥಿತಿಯನ್ನು ಸರ್ಕಾರಗಳೇ ನಿರ್ಮಾಣ ಮಾಡುತ್ತಿವೆ. ರೈತರ, ಶ್ರಮಿಕರ, ಕಾರ್ಮಿಕರ ಶ್ರಮದ ಫಲವನ್ನು ಕಸಿದುಕೊಂಡು ಕುಬೇರರಾಗಿರುವ ಕಾರ್ಪೊರೇಟ್ ಕಂಪೆನಿಗಳ ಪರ ಸರ್ಕಾರಗಳು ವಕಾಲತ್ತು ವಹಿಸುತ್ತಿವೆ ಎಂದು ಕರ್ನಾಟಕ ಶ್ರಮಿಕ ಶಕ್ತಿ ಸಂಘಟನೆ ಅಧ್ಯಕ್ಷ ಡಾ.ವಾಸು ತಿಳಿಸಿದರು.
ರೈತರು ಹಿಂದೆ ನಡೆಸುತ್ತಿದ್ದ ಹೋರಾಟಗಳಿಗೂ ಇಂದಿನ ಹೋರಾಟಗಳಿಗೂ ಸಾಕಷ್ಟು ವ್ಯತ್ಯಾಸಗಳಿವೆ.
ಬೇಡಿಕೆಗಳೂ ಬದಲಾಗಿವೆ. ಆದರೆ ಸಮಸ್ಯೆಗಳು ಮಾತ್ರ ದ್ವಿಗುಣಗೊಂಡಿವೆ. ರೈತರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳದ ಹೊರತು ಸೂಕ್ತ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ ಎಂದರು.
ಬೆಳೆ ಬೆಳೆಯುವ ಯಂತ್ರ: ಭೂಮಿಯನ್ನು ಬೆಳೆ ಬೆಳೆಯುವ ಯಂತ್ರವನ್ನಾಗಿ ಮಾಡಿಕೊಳ್ಳಲಾಗಿದೆ. ರೈತ ಯಾವ ಬೆಳೆ ಬೆಳೆಯಬೇಕು ಎಂಬುದನ್ನು ಮಾರುಕಟ್ಟೆ ನಿರ್ಧರಿಸುತ್ತಿದೆ. ಅವೈಜ್ಞಾನಿಕ ಬೆಳೆ ಪದ್ಧತಿಯಿಂದ ಭೂಮಿ ಫಲವತ್ತತೆ ಕಳೆದುಕೊಂಡು ಬರಡಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಬೆಂಗಳೂರು ಇಂದು ಮಹಾನಗರವಾಗಿ ಬೆಳೆಯಲು ಸುತ್ತಮುತ್ತಲ ಜಿಲ್ಲೆಗಳ ಅಂತಃಸತ್ವವನ್ನು ಬಳಸಿಕೊಂಡಿದೆ. ಬೆಂಗಳೂರಿನಲ್ಲಿ ಒಂದು ಬಡಾವಣೆ ನಿರ್ಮಾಣವಾಗುತ್ತಿದೆ ಎಂದರೆ 100 ಕಿ.ಮೀ. ಒಳಗಿನ ಒಂದು ಪ್ರದೇಶದಲ್ಲಿ ಅಂತರ್ಜಲ ಬರಿದಾಗುತ್ತಿದೆ ಎಂದರ್ಥ. ಕಟ್ಟಡ ನಿರ್ಮಾಣಕ್ಕೆ ಮರಳು ತೆಗೆಯುವುದರಿಂದ ಅಂತರ್ಜಲ ಬರಿದಾಗುತ್ತಿದೆ ಎಂದರು. ನಾವು ನೀಡಿದ ತೆರಿಗೆ ಹಣದಿಂದ ಬಡವರಿಗೆ ಅಕ್ಕಿ ನೀಡಲು, ರೈತರಿಗೆ ಸಬ್ಸಿಡಿ ನೀಡಲಾಗುತ್ತಿದೆ ಎಂದು ಬಡಬಡಾಯಿಸುವ ಐಟಿ-ಬಿಟಿ ಕಂಪೆನಿ ಉದ್ಯೋಗಿಗಳು ರೈತ ಬೆಳೆದ ಉತ್ಪನ್ನಗಳು ಸಿಗದಿದ್ದರೆ ಬದುಕಲು ಹೇಗೆ ಸಾಧ್ಯ ಎಂದು ಹೇಳಿದರು.
ಬಮೂಲ್ ನಿರ್ದೇಶಕರಾದ ಪಿ.ನಾಗರಾಜು, ಲಿಂಗೇಶ್ಕುಮರ್, ಡಾ.ನಾಗೇಶ್, ವರದರಾಜು, ವಿನಯ್ಕುಮಾರ್, ರೈತ ಮುಖಂಡರಾದ ಸಿ.ಪುಟ್ಟಸ್ವಾಮಿ, ಕೆ.ಎಸ್.ಲಕ್ಷ್ಮಣಸ್ವಾಮಿ, ಸಂಪತ್ಕುಮಾರ್, ಹೊಂಬಾಳೇಗೌಡ, ಬೈರೇಗೌಡ, ಎಂ.ಪುಟ್ಟಸ್ವಾಮಿ, ಸೀಬಕಟ್ಟೆಕೃಷ್ಣಪ್ಪ, ಚಲುವಯ್ಯ, ಶಿವಸ್ವಾಮಿ, ಬಿ.ಕೆ.ವೆಂಕಟೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement