ಜಿಲ್ಲಾ ಕೇಂದ್ರಕ್ಕಾಗಿ ಬೃಹತ್ ಹೋರಾಟಕ್ಕೆ ಸಜ್ಜು
ಕ.ಪ್ರ. ವಾರ್ತೆ , ದೊಡ್ಡಬಳ್ಳಾಪುರ , ಜು.23
ದೊಡ್ಡಬಳ್ಳಾಪುರವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೇಂದ್ರವನ್ನಾಗಿ ಘೋಷಣೆ ಮಾಡಬೇಕು ಎಂಬ ಆಗ್ರಹ ಈಗ ಹೋರಾಟದ ರೂಪ ಪಡೆದಿದೆ. ಹಂತ- ಹಂತವಾಗಿ ಹೋರಾಟ ನಡೆಸುವ ಕುರಿತು ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರ ಹೋರಾಟ ಸಮಿತಿ ನಿರ್ಧಾರ ಕೈಗೊಂಡಿದೆ.
ಮಂಗಳವಾರ ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಟಿ. ವೆಂಕಟರಮಣಯ್ಯ ಅಧ್ಯಕ್ಷತೆಯಲ್ಲಿ ನಡೆದ ಹೋರಾಟ ಸಮಿತಿ ಸಭೆಯಲ್ಲಿ ಹೋರಾಟದ ರೂಪರೇಷೆಗಳ ಕುರಿತು ಗಂಭೀರ ಚರ್ಚೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಿವಿಧ ಸಂಘಟನೆಗಳ ಮುಖಂಡರು, ದೊಡ್ಡಬಳ್ಳಾಪುರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಲು ಇರುವ ಅರ್ಹತೆಗಳು ಮತ್ತು ನ್ಯಾಯಬದ್ಧ ಆಲೋಚನೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕು. ಈ ಬಗ್ಗೆ ತಾಲೂಕಿನ ಪ್ರತಿಯೊಬ್ಬ ನಾಗರಿಕನಿಗೂ ಮುಟ್ಟುವ ರೀತಿಯಲ್ಲಿ ಮಾಹಿತಿ ವಿನಿಮಯ ನಡೆಯಬೇಕು. ದೊಡ್ಡಬಳ್ಳಾಪುರ ಮತ್ತು ಇತರ ತಾಲೂಕುಗಳ ವಿಸ್ತೀರ್ಣ, ಜನಸಂಖ್ಯೆ, ಕಂದಾಯ ಸಂಗ್ರಹ, ಹೆದ್ದಾರಿ, ಶಿಕ್ಷಣ, ಸಾಮಾಜಿಕ ಸ್ಥಿತಿಗತಿ, ಆರ್ಥಿಕ ಸ್ಥಿತಿಗತಿ, ಉದ್ಯೋಗಾವಕಾಶಗಳ ಲಭ್ಯತೆ, ಸಂಪರ್ಕ, ಪಂಚಾಯತ್ರಾಜ್ ವ್ಯವಸ್ಥೆ, ಉಪವಿಭಾಗ, ನಗರಸಭಾ ಕೇಂದ್ರ ಸೇರಿದಂತೆ ಅಂಕಿ- ಅಂಶಗಳ ಮಾಹಿತಿ ಸಂಗ್ರಹ ಮತ್ತು ಅವುಗಳ ಸಾಮಾಜಿಕ ಚರ್ಚೆಗೆ ಅವಕಾಶ ನೀಡುವ ನಿಟ್ಟಿನಲ್ಲಿ ಮಾಹಿತಿ ಮುದ್ರಿಸಿ ಹಂಚುವ ಕೆಲಸ ನಡೆಯಬೇಕು. ಅದರ ಜೊತೆಗೆ ತಾಲೂಕಿನ ಎಲ್ಲ ಸಂಘಟನೆಗಳ ನೇತೃತ್ವದಲ್ಲಿ ಹೋರಾಟವನ್ನು ರೂಪಿಸಬೇಕು ಎಂಬ ಸಲಹೆ ನೀಡಿದರು.
ಪ್ರತಿಭಟನೆ: ಮೊದಲ ಹಂತವಾಗಿ ಜು. 29ರ ಸೋಮವಾರ ದೊಡ್ಡಬಳ್ಳಾಪುರ ನಗರದಲ್ಲಿ ಜಿಲ್ಲಾ ಕೇಂದ್ರ ಹೋರಾಟ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಬೃಹತ್ ಪ್ರತಿಭಟನಾ ಹೋರಾಟ ನಡೆಸಲು ಸಭೆ ತೀರ್ಮಾನಿಸಿತು. ಸಿದ್ಧಲಿಂಗಯ್ಯ ವೃತ್ತದಿಂದ ತಾಲೂಕು ಕಚೇರಿಯವರೆಗೆ ಮೆರವಣಿಗೆ ನಡೆಸಿ, ತಾಲೂಕು ಕಚೇರಿಗೆ ಮುತ್ತಿಗೆ ಹಾಕುವುದು ಮತ್ತು ತಹಸೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಬೇಕು. ಶಾಸಕ ಟಿ.ವೆಂಕಟರಮಣಯ್ಯ ನೇತೃತ್ವದಲ್ಲಿ ಈ ಹೋರಾಟ ನಡೆಯಬೇಕು ಎಂದು ಸಭೆ ತೀರ್ಮಾನಿಸಿತು.
ತೀವ್ರ ಹೋರಾಟ: ಸೋಮವಾರದ ನಂತರ ಹೋರಾಟದ ಮುಂದಿನ ಹಂತಗಳ ಕುರಿತು ನಿರ್ಧಾರ ಕೈಗೊಳ್ಳಲಾಗುವುದು. ಹೋರಾಟ ವೈಜ್ಞಾನಿಕವಾಗಿ ಮತ್ತು ನ್ಯಾಯಬದ್ಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಯಬೇಕು. ಇಲ್ಲಿ ವ್ಯಕ್ತಿ, ಪಕ್ಷ, ಸಂಘಟನೆ ಮುಖ್ಯವಲ್ಲ. ಹೋರಾಟದ ಗೊತ್ತು- ಗುರಿ ಮುಖ್ಯ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಜಿಲ್ಲಾ ಹೋರಾಟ ಸಮಿತಿ ಪ್ರಧಾನ ಸಂಚಾಲಕ ರಾಜೇಂದ್ರಕುಮಾರ್, ಸಂಚಾಲಕ ತೂಬಗೆರೆ ಷರೀಫ್, ಕೆ.ಆರ್. ರವಿಕಿರಣ್, ನಗರಸಭಾ ಸದಸ್ಯ ತ.ನ. ಪ್ರಭುದೇವ್, ಜಿಲ್ಲಾ ಕಸಾಪ ಅಧ್ಯಕ್ಷ ಹುಲಿಕಲ್ ನಟರಾಜ್, ರೈತಸಂಘದ ಜಿಲ್ಲಾ ಮುಖಂಡ ಡಾ.ಸಿ.ಎಸ್. ಶ್ರೀನಿವಾಸ್, ಕನ್ನಡಪಕ್ಷದ ಅಧ್ಯಕ್ಷ ಸಂಜೀವ ನಾಯಕ್, ಕರವೇ ಅಧ್ಯಕ್ಷ ಬಿ.ಎಸ್. ಚಂದ್ರಶೇಖರ್, ಕರವೇ ಜಿಲ್ಲಾ ಮುಖಂಡ ಟಿ.ಜಿ. ಮಂಜುನಾಥ್, ಮಹಿಳಾ ಸಮಾಜ ಕಾರ್ಯದರ್ಶಿ ವತ್ಸಲ, ಮಾಜಿ ಕಾರ್ಯದರ್ಶಿ ಎಚ್.ಎಸ್. ರೇವತಿ, ನಗರಸಭಾ ಮಾಜಿ ಸದಸ್ಯ ಎಸ್. ದಯಾನಂದ್, ನಗರಸಭಾ ಸದಸ್ಯ ಕೆ.ಜಿ. ರಘುರಾಂ, ಲೋಕೇಶ್ಬಾಬು ಸೇರಿದಂತೆ ಅನೇಕ ಸಂಘಟನೆಗಳ ಮುಖಂಡರು, ಜಿಲ್ಲಾ ಹೋರಾಟ ಸಂಚಾಲನಾ ಸಮಿತಿಯ ಸದಸ್ಯರು ಹಾಜರಿದ್ದರು.