ಪರಂಪರೆಯಲ್ಲಿ ಗುರುವಿಗೆ ಉನ್ನತ ಸ್ಥಾನ: ರುದ್ರಮುನಿ ಶ್ರೀ
ಕನ್ನಡಪ್ರಭ ವಾರ್ತೆ, ನೆಲಮಂಗಲ, ಜು.23
ಭಾರತೀಯ ಪರಂಪರೆ ಮತ್ತು ಸಂಸ್ಕೃತಿಯಲ್ಲಿ ಗುರುವಿಗೆ ಉನ್ನತ ಸ್ಥಾನ ನೀಡಿ ಗೌರವಿಸಿದೆ ಎಂದು ಹೊನ್ನಮ್ಮಗವಿ ಮಠದ ಪೀಠಾಧ್ಯಕ್ಷ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಶಿವಗಂಗೆಯಲ್ಲಿ ಹೊನ್ನಮ್ಮಗವಿ ಮಠದಲ್ಲಿ ನಡೆದ ಹೊಂಬೆಳಕು ಸಂಸ್ಥೆಯ 7ನೇ ವಾರ್ಷಿಕೋತ್ಸವದಲ್ಲಿ ಅಭಿನಂದನಾ ಸಮಾರಂಭ, ಗಣ್ಯರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರದಲ್ಲಿ ಮಾತನಾಡಿ, ದೇವರ ರೂಪದಲ್ಲಿ ಗುರುಗಳು ನಮಗೆ ಲಭ್ಯವಾಗಿದ್ದಾರೆ. ಅಂತಹ ಸ್ಥಾನದಲ್ಲಿರುವವರು ಜನರ ನಂಬಿಕೆಯನ್ನು ಎಂದಿಗೂ ಹುಸಿಗೊಳಿಸಬಾರದು. ನಮ್ಮೆಲ್ಲರ ಅಜ್ಞಾನ, ಅಂಧಕಾರ, ಮೂಢನಂಬಿಕೆ ಅಳಿಸಿ ಜ್ಞಾನವೆಂಬ ಜ್ಯೋತಿಯ ಬೆಳಕನ್ನು ನೀಡುವವನೆ ಗುರು. 12ನೇ ಶತಮಾನದಲ್ಲಿ ಬಸವಣ್ಣನವರು ನಮ್ಮಲ್ಲಿದ್ದ ಜಾತಿ, ಅಸ್ಪೃಶ್ಯತೆ ತೊಡೆದು ಹಾಕಿ ವೈಚಾರಿಕತೆಯನ್ನು ಬೆಳೆಸಿದರು ಎಂದರು.
ವಿದ್ಯೆ ಯಾರು ಕದಿಯಲಾಗದ ಅಮೂಲ್ಯ ಭಂಡಾರ. ಉತ್ತಮ ಗುಣಮಟ್ಟದ ಶಿಕ್ಷಣ ಪಡೆದು ಸಮಾಜಕ್ಕೆ ಕೊಡುಗೆ ನೀಡಿ ಎಂದು. ತಂದೆ- ತಾಯಿಗಳು ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಉತ್ತಮ ಶಿಕ್ಷಣ ನೀಡುವ ಮೂಲಕ ಅವರನ್ನೆ ಆಸ್ತಿಯನ್ನಾಗಿ ಮಾಡಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಎಂಸಿಎ ಮಾಜಿ ಅಧ್ಯಕ್ಷ ಮರಿಸ್ವಾಮಿ ಮಾತನಾಡಿ, ದೇಶವನ್ನು ಚೀನಾ, ಪಾಕಿಸ್ತಾನ ದೇಶಗಳು ಸುತ್ತುವರಿದಿವೆ. ಅಲ್ಲದೆ, ಭಯೋತ್ಪಾದನೆಯೂ ಹೆಚ್ಚಾಗುತ್ತಿದೆ. ಇದರಿಂದ ಭಯದ ವಾತಾವರಣ ನಿರ್ಮಾಣಗೊಂಡಿದೆ. ಈ ಎಲ್ಲಾ ಕಾರಣಗಳಿಂದ ನಮ್ಮ ದೇಶದ ಸಂಸ್ಕೃತಿ ಹಾಳಾಗುತ್ತಿದೆ. ಇವೆಲ್ಲವನ್ನು ನಾವು ಸಂರಕ್ಷಿಸಬೇಕಾದರೆ ದೇಶಕ್ಕೆ ಸಮರ್ಥ ನಾಯಕನ ಅವಶ್ಯಕತೆ ಇದೆ ಎಂದು ಹೇಳಿದರು.
ಕಂಬಾಳು ಸಂಸ್ಥಾನ ಮಠದ ಚನ್ನವೀರ ಶಿವಾಚಾರ್ಯ ಸ್ವಾಮೀಜಿ, ಕಂಠೀರವ ಸ್ಟುಡಿಯೋ ಮಾಜಿ ಅಧ್ಯಕ್ಷ ಎಂ.ರುದ್ರೇಶ್, ಎನ್.ಪಿ.ಎ.ಅಧ್ಯಕ್ಷ ಆನಂದ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಲುವರಾಜು ಇದ್ದರು.