ಪೊಲೀಸ್ ಕಸ್ಟಡಿಯಿಂದ ನ್ಯಾಯಾಂಗ ವಶಕ್ಕೆ
ರಾಮನಗರ: ಮುಡಾ ಮತ್ತು ರಾ- ಚ ಪ್ರಾಧಿಕಾರದ ಬಹುಕೋಟಿ ಹಗರಣದಲ್ಲಿ ಸಿಕ್ಕಿಬಿದ್ದಿರುವ ವಂಚಕರ ಜಾಲದ ರೂವಾರಿಗಳು ಮಂಡ್ಯ ಪೊಲೀಸರ ಕಸ್ಟಡಿಯಿಂದ ನ್ಯಾಯಾಂಗ ವಶಕ್ಕೆ ಹೋಗಿದ್ದಾರೆ. ಅವರನ್ನು ಕಸ್ಟಡಿಗೆ ತೆಗೆದುಕೊಳ್ಳುವ ಸರದಿ ಈಗ ರಾಮನಗರ ಪೊಲೀಸರದ್ದಾಗಿದೆ.
ಹಗರಣದ ರೂವಾರಿ ಕೆಬ್ಬಳ್ಳಿ ಆನಂದ, ಸಹಚರ ನಾಗಲಿಂಗಸ್ವಾಮಿಯನ್ನು ಕಸ್ಟಡಿಗೆ ಪಡೆದು, ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದ ಮಂಡ್ಯ ಪೊಲೀಸರು ತಮ್ಮ ಅವಧಿ ಮೀರಿದ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಪೊಲೀಸ್ ಕಸ್ಟಡಿ ಅವಧಿ ಮುಂದುವರಿಸುವಂತೆ ಅಲ್ಲಿನ ತನಿಖಾಧಿಕಾರಿಗಳು ಕೋರಿಕೆ ಸಲ್ಲಿಸದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ನೀಡಿರುವರು. ಈ ಬೆನ್ನಲ್ಲೆ ಇಬ್ಬರೂ ಆರೋಪಿಗಳನ್ನು ಮಂಡ್ಯ ಉಪ ಕಾರಾಗೃಹಕ್ಕೆ ಕಳುಹಿಸಲಾಗಿದೆ.
ಇದೀಗ ರಾಮನಗರ ಪೊಲೀಸರು ಬಾಡಿ ವಾರೆಂಟ್ ಸಿದ್ಧಪಡಿಸಿಕೊಂಡು, ಇಬ್ಬರೂ ಆರೋಪಿಗಳನ್ನು ತಮ್ಮ ಕಸ್ಟಡಿಗೆ ನೀಡುವಂತೆ ಜು. 24ರಂದು ಮಂಡ್ಯ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲು ತಯಾರಿ ನಡೆಸಿದ್ದಾರೆ. ಈ ವಿಷಯವನ್ನು ತನಿಖಾಧಿಕಾರಿಯಾದ ಡಿವೈಎಸ್ಪಿ ರಾಮಲಿಂಗಪ್ಪ ಕನ್ನಡಪ್ರಭಕ್ಕೆ ಸ್ಪಷ್ಟಪಡಿಸಿದ್ದಾರೆ.
ಆಸ್ತಿ ಮುಟ್ಟುಗೋಲು: ವಂಚಕರ ಜಾಲದ ರೂವಾರಿ ಕೆಬ್ಬಳ್ಳಿ ಆನಂದ, ಬಂಧಿತ ಸಹಚರ ನಾಗಲಿಂಗಸ್ವಾಮಿ, ನಾಪತ್ತೆಯಾಗಿರುವ ಹೆಮ್ಮನಹಳ್ಳಿ ಚಂದ್ರಶೇಖರ್ ಹಾಗೂ ನಿಕಟವರ್ತಿಗಳ ಬ್ಯಾಂಕ್ ಖಾತೆಗಳನ್ನು ಪೊಲೀಸರ ಸೂಚನೆ ಮೇರೆಗೆ ಈಗಾಗಲೇ ಸ್ಥಗಿತಗೊಳಿಸಲಾಗಿದೆ.
ಇದೀಗ ವಂಚಕರು ಹೂಡಿಕೆ ಮಾಡಿರುವ ಸ್ತಿರ, ಚರಾಸ್ತಿಗಳ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ. ಲೂಟಿ ಮಾಡಿದ ಹಣ, ಗಳಿಸಿರುವ ಎಲ್ಲ ಆಸ್ತಿಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ನಿಟ್ಟಿನಲ್ಲಿ ಅಗತ್ಯ ಕ್ರಮ ಜರುಗಿಸುವ ಪ್ರಕ್ರಿಯೆ ಉಭಯ ಜಿಲ್ಲೆ ಪೊಲೀಸರಿಂದ ಪ್ರಾರಂಭವಾಗಿದೆ.
ಕೆಬ್ಬಳ್ಳಿ ಆನಂದ, ನಾಗಲಿಂಗಸ್ವಾಮಿ ಅವರಿಬ್ಬರ ಮಾಲೀಕತ್ವದ ಮತ್ತು ಪಾಲುದಾರಿಕೆಯ ಸಂಸ್ಥೆಗಳು, ಆಸ್ತಿಪಾಸ್ತಿಯ ಸಮಗ್ರ ವಿವರ ಪೊಲೀಸರ ಬಳಿಯಿದೆ. ಸಂಸ್ಥೆಗಳ ಮೇಲೆ ಈಗಾಗಲೇ ದಾಳಿ ನಡೆಸಿ, ಕಂಪ್ಯೂಟರ್ ಸಹಿತ ಕಡತ ವಶಪಡಿಸಿಕೊಳ್ಳಲಾಗಿದೆ. ಕೆಬ್ಬಳ್ಳಿ ಆನಂದ್ ಹೂಡಿಕೆ ವಿದೇಶದಲ್ಲೂ ಇದ್ದು, ಅಲ್ಲಿನ ಪರಿಶೀಲನೆಗೆ ಇಂಟರ್ ಪೊಲೀಸರನ್ನು ಈಗಾಗಲೇ ಸಂಪರ್ಕಿಸಲಾಗಿದೆ.
ಮುಡಾ ಆಯುಕ್ತ ಡಾ. ಶಿವರಾಮ್ ಹಾಗೂ ರಾ-ಚ ಪ್ರಾಧಿಕಾರದ ಆಯುಕ್ತ ಚಿದಾನಂದ್ ಅವರ ಕಚೇರಿ, ಮನೆಗಳ ಮೇಲೂ ದಾಳಿಯಾಗಿದೆ. ಬಹುಕೋಟಿ ಹಗರಣದಲ್ಲಿ ತನ್ನ ಪಾತ್ರ ಇರುವುದನ್ನು ಶಿವರಾಮ್ ಅವರಂತೆಯೇ ಚಿದಾನಂದ ಕೂಡ ಪೊಲೀಸ್ ತನಿಖೆ ವೇಳೆ ಒಪ್ಪಿಕೊಂಡಿದ್ದೂ ಆಗಿದೆ.
ಕಡತ ಯಜ್ಞ ಮುಂದುವರಿಕೆ: ಮಂಡ್ಯ ಜಿಲ್ಲಾ ಪೊಲೀಸ್ ಭವನದಲ್ಲಿ ಉಭಯ ಪ್ರಾಧಿಕಾರಗಳ ಹಗರಣ ಕುರಿತಾಗಿ ಜಂಟಿ ತನಿಖಾ ತಂಡದಿಂದ ಕಡತ ಯಜ್ಞ ಪ್ರಕ್ರಿಯೆ ಮಂಗಳವಾರವೂ ಮುಂದುವರಿದಿದೆ. ಶೋಧಿಸುತ್ತಾ ಹೋದಂತೆಲ್ಲಾ ಹಗರಣದ ಮತ್ತಷ್ಟು ಅಂಶಗಳು ಹೊರ ಬೀಳುತ್ತಲೇ ಇವೆ ಎನ್ನಲಾಗಿದೆ.
ಸಾಕಷ್ಟು ಆಳಕ್ಕೆ ಇಳಿದಿರುವ ಬೇರುಗಳನ್ನು ಶೋಧಿಸುವ ಕೆಲಸದಲ್ಲಿ ಪೊಲೀಸರು ನಿರತರಾಗಿದ್ದಾರೆ. ಬಂಧಿತ ವಂಚಕರು ತಮ್ಮೆಲ್ಲಾ ವ್ಯವಹಾರದ ಗುಟ್ಟುಗಳನ್ನು ಅನಿವಾರ್ಯ ಸ್ಥಿತಿಯಲ್ಲಿ ಪೊಲೀಸರಿಗೆ ಬಿಟ್ಟುಕೊಟ್ಟಿದ್ದಾರೆ. ಇದನ್ನಾಧರಿಸಿ ತನಿಖಾ ತಂಡ ಹಲವರ ಬೆನ್ನು ಹತ್ತಿದೆ.
ಇನ್ನೂ ಬಾರದ ಅಮಾನತು ಆದೇಶ
ಮುಡಾ ಆಯುಕ್ತ ಡಾ.ಎಚ್.ಎಸ್. ಶಿವರಾಮ್ ಬಂಧನವಾದ 48 ತಾಸಿನಲ್ಲೇ ಸೇವೆಯಿಂದ ಅಮಾನತುಗೊಂಡಿದ್ದಾರೆ. ಆದರೆ, ರಾ- ಚ ಪ್ರಾಧಿಕಾರದ ಆಯುಕ್ತ ಚಿದಾನಂದ್ ಅಮಾನತು ಕುರಿತು ಸರ್ಕಾರದ ನಿರ್ಧಾರವಿನ್ನೂ ಪ್ರಕಟವಾಗಿಲ್ಲ. ಚಿದಾನಂದ್ ಅಮಾನತು ಸಂಬಂಧ ಆದೇಶ ಮಂಗಳವಾರ ಸಂಜೆಯಾದರೂ ಜಿಲ್ಲಾಡಳಿತಕ್ಕೆ ತಲುಪಿಯೇ ಇಲ್ಲ ಎನ್ನುವುದನ್ನು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
-ಮತ್ತೀಕೆರೆ ಜಯರಾಮ್