ಎರಡನೇ ಬಾರಿ ಮರು ಚುನಾವಣೆ
ಕ.ಪ್ರ.ವಾರ್ತೆ , ರಾಮನಗರ , ಜು.30
ಕನಕಪುರ ಲೋಕಸಭಾ ಕ್ಷೇತ್ರವು ಕ್ಷೇತ್ರ ಮರು ವಿಂಗಡಣೆಯಲ್ಲಾದ ಸ್ವಲ್ಪ ಮಟ್ಟಿನ ಬದಲಾವಣೆಯೊಂದಿಗೆ 2009ರ ಸಾರ್ವತ್ರಿಕ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರವಾಗಿ ಅಸ್ತಿತ್ವ ಪಡೆದಿದೆ. ಈ ಕ್ಷೇತ್ರಕ್ಕೆ ಎರಡನೇ ಬಾರಿ ಮರು ಚುನಾವಣೆ ಎದುರಾಗಿದೆ.
2002ರಲ್ಲಿ ಆಗಿನ ಸಂಸದ ಎಂ.ವಿ.ಚಂದ್ರಶೇಖರಮೂರ್ತಿ ನಿಧನದಿಂದ ಮರು ಚುನಾವಣೆ ಎದುರಾಗಿದ್ದರೆ, ಈ ಬಾರಿ ಸಂಸದ ಸ್ಥಾನಕ್ಕೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಲ್ಲಿಸಿರುವ ರಾಜಿನಾಮೆ ಕಾರಣಕ್ಕೆ ಮತ್ತೊಂದು ಮರು ಚುನಾವಣೆ ಬಂದಿದೆ.
ಬದಲಾದ ಕ್ಷೇತ್ರ ವ್ಯಾಪ್ತಿ: ಕನಕಪುರ ಲೋಕಸಭಾ ಕ್ಷೇತ್ರಕ್ಕೆ ಅತಿ ದೊಡ್ಡ ವಿಧಾನಸಭಾ ಕ್ಷೇತ್ರವಾಗಿದ್ದ ಬೆಂಗಳೂರಿನ ಉತ್ತರಹಳ್ಳಿ, ಗ್ರಾಮಾಂತರದ ಆನೇಕಲ್, ರಾಮನಗರ ಜಿಲ್ಲೆಯ ಎಲ್ಲ 4 ಕ್ಷೇತ್ರಗಳ ಜತೆಗೆ ಮಂಡ್ಯ ಜಿಲ್ಲೆಯ ಮೀಸಲು ಕ್ಷೇತ್ರವಾದ ಮಳವಳ್ಳಿಯೂ ಸೇರ್ಪಡೆಯಾಗಿತ್ತು.
ಹೊಸ ರೂಪದೊಂದಿಗೆ ಅಸ್ತಿತ್ವಕ್ಕೆ ಬಂದಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ರಾಮನಗರ ಜಿಲ್ಲೆಯ 4 ಕ್ಷೇತ್ರಗಳು, ತುಮಕೂರಿನ ಕುಣಿಗಲ್, ಬೆಂಗಳೂರು ಗ್ರಾಮಾಂತರದ ಆನೇಕಲ್, ಬೆಂಗಳೂರು ನಗರ ಜಿಲ್ಲೆಯ ರಾಜರಾಜೇಶ್ವರಿ, ಬೆಂಗಳೂರು ದಕ್ಷಿಣ ಕ್ಷೇತ್ರಗಳು ಸೇರಿವೆ.
ಇದು 14ನೇ ಚುನಾವಣೆ: 1967ರಲ್ಲಿ ನಡೆದ ಕ್ಷೇತ್ರ ಮರು ವಿಂಗಡಣೆಯಲ್ಲಿ ಆಗಿನ ಮೈಸೂರು ರಾಜ್ಯದ ನೂತನ ಲೋಕಸಭಾ ಕ್ಷೇತ್ರವಾಗಿ ಕನಕಪುರ ಕ್ಷೇತ್ರ ಅಸ್ತಿತ್ವ ಪಡೆದುಕೊಂಡಿತ್ತು. ಈ ಕ್ಷೇತ್ರದಿಂದ ಚೊಚ್ಚಲ ಸಂಸದರಾಗಿ ಎಂ.ವಿ.ರಾಜಶೇಖರನ್ ಆಯ್ಕೆಯಾಗಿದ್ದರು. ಅದಾದ ಬಳಿಕ 1971ರಲ್ಲಿ ಸಿ.ಕೆ.ಜಾಫರ್ ಷರೀಫ್ ಈ ಕ್ಷೇತ್ರ ಪ್ರತಿನಿಧಿಸಿದ್ದರು. ಮೈಸೂರು ರಾಜ್ಯವು ಕರ್ನಾಟಕವಾಗಿ ನಾಮಕರಣಗೊಂಡ ನಂತರ 1977ರಲ್ಲಿ ನಡೆದ ಚುನಾವಣೆಯಲ್ಲಿ ಎಂ.ವಿ.ಚಂದ್ರಶೇಖರಮೂರ್ತಿ ಇಲ್ಲಿ ಗೆಲವು ಸಾಧಿಸಿದ್ದರು.
6 ಬಾರಿ ಒಬ್ಬರೇ ಸಂಸದ: ಕನಕಪುರ ಅರ್ಥಾತ್ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನು ಮಂಡ್ಯ ಜಿಲ್ಲೆಯವರಾದ ಎಂ.ವಿ.ಚಂದ್ರಶೇಖರಮೂರ್ತಿ ಅತಿ ಹೆಚ್ಚು ಎಂದರೆ 6 ಬಾರಿ ಪ್ರತಿನಿಧಿಸಿದ್ದರು. ಆ ಜಿಲ್ಲೆಯಿಂದ ಇಲ್ಲಿಗೆ ಸೇರಿದ್ದು ಒಂದೇ ವಿಧಾನಸಭಾ ಕ್ಷೇತ್ರವಾದರೂ ಚಂದ್ರಶೇಖರಮೂರ್ತಿ ಅವರಿಲ್ಲಿ ಹಿಡಿತ ಸಾಧಿಸಿದ್ದರು.
ಇವರನ್ನು ಹೊರತುಪಡಿಸಿದರೆ, ಎಚ್.ಡಿ.ಕುಮಾರಸ್ವಾಮಿ 2 ಬಾರಿ ಕ್ಷೇತ್ರ ಪ್ರತಿನಿಧಿಸಿದ್ದಾರೆ. ಚಂದ್ರಶೇಖರಮೂರ್ತಿ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ 2002ರಲ್ಲಿ ನಡೆದ ಮರು ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆರಿಸಿ ಬಂದಿದ್ದರು.
ತಲಾ ಒಮ್ಮೆ ಆಯ್ಕೆ: ಈ ಕ್ಷೇತ್ರವು 1996ರವರೆಗೂ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಅದನ್ನು ಮುರಿದು, ಜನತಾ ಪರಿವಾರದ ತೆಕ್ಕೆಗೆ ತೆಗೆದುಕೊಂಡ ಸಾಧನೆಗೈದವರು ಎಚ್.ಡಿ.ಕುಮಾರಸ್ವಾಮಿ. ಇಲ್ಲಿ ಸ್ವತಃ ಕುಮಾರಸ್ವಾಮಿ, ದೇವೇಗೌಡರೂ ಸೋಲು-ಗೆಲವು ಎರಡನ್ನೂ ಅನುಭವಿಸಿದ್ದಾರೆ. 2004ರಲ್ಲಿ ತೇಜಸ್ವಿನಿ ಅವರು ದೇವೇಗೌಡರನ್ನೇ ಸೋಲಿಸಿ ಆಯ್ಕೆಯಾಗಿದ್ದರು. ಬಿಜೆಪಿಯ ಎಂ.ಶ್ರೀನಿವಾಸ್ ಈ ಕ್ಷೇತ್ರಕ್ಕೆ 1998 ರಿಂದ 1999ರವರೆಗೆ 1 ವರ್ಷದ ಸೀಮಿತ ಅವಧಿಗೆ ಸಂಸದ. 14 ಬಾರಿ ಚುನಾವಣೆ ನಡೆದಿದ್ದರೂ ಕ್ಷೇತ್ರ ಪ್ರತಿನಿಧಿಸಿದ ಸಂಸದರ ಸಂಖ್ಯೆ 7 ಮಾತ್ರವೇ. 8ನೇ ಸಂಸದ ಈಗ ನಿರ್ಧಾರವಾಗಬೇಕಿದೆ.
ಕ್ಷೇತ್ರ ಪ್ರತಿನಿಧಿಸಿದವರು
1967- ಎಂ.ವಿ.ರಾಜಶೇಖರನ್ (ಕಾಂಗ್ರೆಸ್)
1971- ಸಿ.ಕೆ.ಜಾಫರ್ ಷರೀಫ್ (ಕಾಂಗ್ರೆಸ್)
1977- ಎಂ.ವಿ.ಚಂದ್ರಶೇಖರಮೂರ್ತಿ(ಕಾಂಗ್ರೆಸ್)
1980- ಎಂ.ವಿ.ಚಂದ್ರಶೇಖರಮೂರ್ತಿ(ಕಾಂಗ್ರೆಸ್)
1984- ಎಂ.ವಿ.ಚಂದ್ರಶೇಖರಮೂರ್ತಿ(ಕಾಂಗ್ರೆಸ್)
1989- ಎಂ.ವಿ.ಚಂದ್ರಶೇಖರಮೂರ್ತಿ(ಕಾಂಗ್ರೆಸ್)
1991- ಎಂ.ವಿ.ಚಂದ್ರಶೇಖರಮೂರ್ತಿ(ಕಾಂಗ್ರೆಸ್)
1996- ಎಚ್.ಡಿ.ಕುಮಾರಸ್ವಾಮಿ(ಜನತಾದಳ)
1998- ಎಂ.ಶ್ರೀನಿವಾಸ್ (ಬಿಜೆಪಿ)
1999- ಎಂ.ವಿ.ಚಂದ್ರಶೇಖರಮೂರ್ತಿ(ಕಾಂಗ್ರೆಸ್)
2002- ಎಚ್.ಡಿ.ದೇವೇಗೌಡ(ಜೆಡಿಎಸ್)
2004- ತೇಜಸ್ವಿನಿ(ಕಾಂಗ್ರೆಸ್)
2009- ಎಚ್.ಡಿ.ಕುಮಾರಸ್ವಾಮಿ(ಜೆಡಿಎಸ್)
ಎರಡು ನಾಮಪತ್ರ ಸಲ್ಲಿಕೆ
ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮರು ಚುನಾವಣೆಗೆ ಸ್ಪರ್ಧೆ ಬಯಸಿ ಕಾಮರಾಜನ್ ದೇಶಿಯ ಪಕ್ಷದ ಅಭ್ಯರ್ಥಿ ಕೆ.ಎ.ಮೋಹನ್ ಅವರು ಮಂಗಳವಾರ ನಾಮಪತ್ರ ಸಲ್ಲಿಸಿದರು. ಇದರೊಂದಿಗೆ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ ಉಮೇದುವಾರರ ಸಂಖ್ಯೆ 2ಕ್ಕೇರಿದೆ.
-ಮತ್ತೀಕೆರೆ ಜಯರಾಮ್