ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕಾಡಾನೆಗಳಿಂದ ತೆಂಗು, ಬಾಳೆ ನಾಶ

Vishwanath S
Updated On : 31 Jul 2013, 12:41 pm

ಕನಕಪುರ: ಕನಕಪುರ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಕಾಡಾನೆಗಳ ಹಿಂಡು ದಾಳಿನಡೆಸಿ ಲಕ್ಷಾಂತರ ಬೆಲೆಬಾಳುವ ಬಾಳೆ ತೆಂಗಿನ ತೋಟವನ್ನು ಹಾಳುಗೆಡವಿದೆ. ಎಕರೆಗಟ್ಟಲೆ ಪ್ರದೇಶದಲ್ಲಿ ಬೆಳೆದ ಸೀಮೇಹುಲ್ಲನ್ನು ನಾಶಮಾಡಿವೆ. ಸಮೀಪದ ಕಾಳೇಗೌಡನ ಒಡ್ಡು ಪ್ರದೇಶದಲ್ಲಿ ಏಳು ಆನೆಗಳ ಹಿಂಡು ಅನೇಕ ದಿನಗಳಿಂದ ಬೀಡುಬಿಟ್ಟಿದ್ದು ಆಹಾರಕ್ಕಾಗಿ ಪದೇಪದೇ ಗ್ರಾಮದ ಮೇಲೆ ದಾಳಿ ನಡೆಸುತ್ತಿವೆ.
  ಕಳೆದ ವರ್ಷವೂ ಇದೇರೀತಿಯಾಗಿದ್ದು ಅನೇಕ ರೈತರು ನಷ್ಟ ಅನುಭವಿಸಿದ್ದರು. ಸರ್ಕಾರ ನಾಮಮಾತ್ರ ಪರಿಹಾರ ನೀಡಿ ಕೈತೊಳೆದುಕೊಂಡಿದೆ. ಅರಣ್ಯಇಲಾಖೆ ಆನೆಗಳ ನಿಯಂತ್ರಣಕ್ಕೆ ಯಾವುದೇ ಪರಿಣಾಮಕಾರಿಯಾದ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಪಂ ಅಧ್ಯಕ್ಷ ರಾಜು, ಮಾಜಿ ಅಧ್ಯಕ್ಷರುಗಳಾದ ನಿಡಗಲ್ಲು ಗುರುರಾಜ್, ಶಿವನೇಗೌಡ ಮೊದಲಾದವರು ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.

ವಿದ್ಯಾರ್ಥಿಗಳಿಬ್ಬರು ರಾಜ್ಯ ಮಟ್ಟಕ್ಕೆ ಆಯ್ಕೆ
ರಾಮನಗರ: ಸಾರ್ವಜನಿಕ ಶಿಕ್ಷಣ ಇಲಾಖೆ ಜು.26 ಮತ್ತು 27ರಂದು ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ (ಇನ್‌ಸ್ಪೈರ್ ಅವಾರ್ಡ್) ಭಾಗವಹಿಸಿದ್ದ ನಗರದ 2 ಶಾಲೆಗಳ ಇಬ್ಬರು ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಾಂತಿನಿಕೇತನ ಶಾಲೆಯ ವಿದ್ಯಾರ್ಥಿನಿ ಸ್ಪಂದನ ರೂಪಿಸಿದ್ದ ಗಾಳಿಯಿಂದ ತಿರುಗುವ ಚಕ್ರದ ಸಹಾಯದಿಂದ ನೀರೆತ್ತುವ ಯಂತ್ರದ ಮಾದರಿ ಮತ್ತು ಅತ್ಯುತ್ತಮ ನಿರೂಪಣೆಗಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಹೋಲಿ ಕ್ರೆಸೆಂಟ್ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಆರ್. ಯಶಸ್ವಿನಿ ಸಿದ್ಧಪಡಿಸಿದ್ದ ಓಜೋನ್ ಪದರದ ಕ್ಷೀಣತೆ ಮಾದರಿ ಪ್ರದರ್ಶನಕ್ಕಾಗಿ ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಲಾಗಿದೆ. ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳನ್ನು ಶಾಲೆಯ ಆಡಳಿತ ಮಂಡಳಿಗಳು ಹಾಗೂ ಶಿಕ್ಷಕ ವೃಂದ ಅಭಿನಂದಿಸಿದೆ.

ಕಾರ್ಯಕ್ರಮ ಮುಂದೂಡಿಕೆ
ರಾಮನಗರ: ಜಿಲ್ಲೆಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ಜು.31ರಂದು ನಡೆಯಬೇಕಿದ್ದ ಭೌತಶಾಸ್ತ್ರ ವಿಷಯದ ಉಪಗ್ರಹ ಆಧಾರಿತ ದೂರಸಂಪರ್ಕ ಕಾರ್ಯಕ್ರಮವು ಆ.19ಕ್ಕೆ ಹಾಗೂ ಆ.16ರಂದು ನಡೆಯಬೇಕಿದ್ದ ಸಂಸ್ಕೃತ ಭಾಷಾ ವಿಷಯದ ಕಾರ್ಯಕ್ರಮವನ್ನು ಆ.17ಕ್ಕೆ ಮುಂದೂಡಲಾಗಿದೆ.

ವಿ-ಸಾಟ್ ಇಂದು ಉದ್ಘಾಟನೆ
ದೊಡ್ಡಬಳ್ಳಾಪುರ: ವೃತ್ತಿಪರ ಪ್ರವೇಶ ಪರೀಕ್ಷೆಯ ವಿ-ಸಾಟ್ ಉದ್ಘಾಟನಾ ಸಮಾರಂಭ ಇಲ್ಲಿನ ದೇವರಾಜ ಅರಸ್ ಪ.ಪೂ.ಕಾಲೇಜಿನ ಸಭಾಂಗಣದಲ್ಲಿ ಜು.31ರ ಬುಧವಾರ ಬೆಳಗ್ಗೆ 11.30ಕ್ಕೆ ನಡೆಯಲಿದೆ.

ಪಾದಚಾರಿಗೆ ಲಾರಿ ಡಿಕ್ಕಿ: ಸಾವು
ಕ.ಪ್ರ.ವಾರ್ತೆ ,  ರಾಮನಗರ ,  ಜು.30
ರಸ್ತೆ ದಾಟುತ್ತಿದ್ದ ಪಾದಚಾರಿಗೆ ಲಾರಿ ಡಿಕ್ಕಿಹೊಡೆದ ಪರಿಣಾಮ ವ್ಯಕ್ತಿ ಮೃತಪಟ್ಟ ಘಟನೆ ನಗರದ ಐಜೂರು ವೃತ್ತದಲ್ಲಿ ಸೋಮವಾರ ನಡೆದಿದೆ.
ಬೆಂಗಳೂರು ಮೂಲದ ಕರಿಯಪ್ಪ (65) ಮೃತಪಟ್ಟ ದುರ್ದೈವಿ. ಇವರು ನಗರದಲ್ಲಿರುವ ಮಗಳ ಮನೆಗೆ ಆಗಮಿಸಿದ್ದರು.
ಮಧ್ಯಾಹ್ನ ಸುಮಾರು 2 ಗಂಟೆ ಸಮಯದ ಸಿಗ್ನಲ್ ಸರ್ಕಲ್‌ನಲ್ಲಿ ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದ್ದು, ತೀವ್ರ ರಕ್ತಗಾಯಗಳಾಗಿವೆ.
 ಗಾಯಾಳು ಕರಿಯಪ್ಪ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಸಂಬಂಧ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಚಿನ್ನದ ನೆಕ್ಲೆಸ್ ಕಸಿದು ಪರಾರಿ
ರಾಮನಗರ: ಬೈಕ್‌ನಲ್ಲಿ ತೆರಳುತ್ತಿದ್ದ ಮಹಿಳೆಯನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಆಕೆಯ ಕತ್ತಿನಲ್ಲಿದ್ದ ರು.1 ಲಕ್ಷ ಬೆಲೆ  ಬಾಳುವ 40 ಗ್ರಾಂ ಚಿನ್ನದ ನೆಕ್ಲೆಸ್ ಕಸಿದು ಪರಾರಿಯಾಗಿರುವ ಘಟನೆ ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು ಮೂಲದ ಲೀಲೋದಯ ಕುಮಾರಿ ನೆಕ್ಲೆಸ್ ಕಳೆದುಕೊಂಡವರು. ಈಕೆ ಮಧ್ಯಾಹ್ನ 12ರ ಸಮಯದಲ್ಲಿ ತನ್ನ ತಾಯಿ ಮತ್ತು ಮಗುವಿನೊಂದಿಗೆ ಸ್ಕೂಟರ್‌ನಲ್ಲಿ ಇಟ್ಟಮಡು ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಪಲ್ಸರ್ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ನೆಕ್ಲೆಸ್ ಕಸಿದು ಪರಾರಿಯಾಗಿದ್ದಾರೆ. ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಅಡ್ಡಗಟ್ಟಿ ಚಿನ್ನ ಕಸಿದು ಪರಾರಿ
ರಾಮನಗರ: ಬೈಕ್‌ನಲ್ಲಿ ತೆರಳುತ್ತಿದ್ದ ದಂಪತಿಯನ್ನು ಅಡ್ಡಗಟ್ಟಿ, ಮಾರಕಾಸ್ತ್ರಗಳಿಂದ ಬೆದರಿಸಿ ರು.3.33ಲಕ್ಷ ಬೆಲೆ ಬಾಳುವ 109 ಗ್ರಾಂ. ತೂಕದ ಚಿನ್ನಾಭರಣ ಸುಲಿಗೆ ಮಾಡಿರುವ ಘಟನೆ ಕುಂಬಳಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು ಮೂಲದ ಶ್ವೇತ ಚಿನ್ನಾಭರಣ ಕಳೆದುಕೊಂಡವರು. ಈಕೆ ಭಾನುವಾರ ರಾತ್ರಿ ಸುಮಾರು 11ರ ವೇಳೆಯಲ್ಲಿ ಮಾರುತಿ ನಗರದ ಸೊಣ್ಣೇನಹಳ್ಳಿ ಬಳಿ ತನ್ನ ಪತಿ ಕೃಷ್ಣ ಅವರೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಟಾಟಾ ಇಂಡಿಕಾ ಕಾರಿನಲ್ಲಿ ಬಂದ 4 ಮಂದಿ ದುಷ್ಕರ್ಮಿಗಳು ಬೈಕ್ ಅಡ್ಡಗಟ್ಟಿ, ಮಾರಕಾಸ್ತ್ರಗಳಿಂದ ಬೆದರಿಸಿ ಶ್ವೇತಾ ಅವರ ಬಳಿ ಇದ್ದ 44 ಗ್ರಾಂ. ತೂಕದ ಮಾಂಗಲ್ಯ ಸರ ಮತ್ತು 65 ಗ್ರಾಂ. ತೂಕದ 2 ಎಳೆ ಚಿನ್ನದ ಸರ ಕಸಿದು ಪರಾರಿಯಾಗಿದ್ದಾರೆ. ಈ ಸಂಬಂಧ ಕುಂಬಳಗೋಡು ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement