ಠೇವಣಿ ಅವಧಿ ಮೀರಿದ್ದರೂ ಹಣ ಮರು ಪಾವತಿಸದ ಹಿನ್ನೆಲೆ ಆಕ್ರೋಶ
ಕ.ಪ್ರ.ವಾರ್ತೆ , ರಾಮನಗರ , ಜು.30
ಠೇವಣಿ ಅವಧಿ ಮೀರಿದ್ದರೂ ಹಣ ಮರು ಪಾವತಿಸದ ಹಿನ್ನೆಲೆಯಲ್ಲಿ ಗ್ರಾಹಕರ ಗುಂಪು ಗುರು ಟೀಕ್ ಇನ್ವೆಸ್ಟ್ಮೆಂಟ್ ಕಚೇರಿಯಲ್ಲಿ ಪ್ರತಿಭಟಿಸಿ, ಆಕ್ರೋಶ ವ್ಯಕ್ತಪಡಿಸಿದ ಘಟನೆ ನಗರದಲ್ಲಿ ಮಂಗಳವಾರ ನಡೆದಿದೆ.
ಠೇವಣಿಯ ಬಾಂಡ್ ಹಿಡಿದು ಗುರು ಟೀಕ್ ಕಚೇರಿಗೆ ಆಗಮಿಸಿದ್ದ ನೂರಾರು ಗ್ರಾಹಕರು ತಮಗೆ ಹಣ ಸಂದಾಯ ಮಾಡಬೇಕು ಎಂದು ಪಟ್ಟು ಹಿಡಿದು, ಸಂಸ್ಥೆಯ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ರು.10 ಸಾವಿರದಿಂದ ರು.1 ಲಕ್ಷದವರೆಗೆ ಉಳಿತಾಯ ಮಾಡಿದ್ದ ಹಲವಾರು ಗ್ರಾಹಕರು ಪ್ರತಿಭಟನೆಯಲ್ಲಿ ತೊಡಗಿದ್ದರು. ತಾವು ಇಟ್ಟಿದ್ದ ಠೇವಣಿ ಹಣ ನೀಡದ ಹೊರತು ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ನೀಡಿದರು.
ಸಾರ್ವಜನಿಕರ ಹಣ ವಸೂಲಿ ಮಾಡುವ ಹಣಕಾಸು ಸಂಸ್ಥೆಗಳು ಸೆಬಿಯಿಂದ ಅನುಮತಿ ಪಡೆಯುವುದು ಕಡ್ಡಾಯ. ಆದರೆ, 2003-04ರಲ್ಲಿ ಗುರು ಟೀಕ್ ಸಂಸ್ಥೆಗೆ ಅವಕಾಶ ನಿರಾಕರಿಸಲಾಗಿದೆ. ಹೀಗಾಗಿ ಅಲ್ಲಿಂದ ಹಣ ಸಂಗ್ರಹ ಸ್ಥಗಿತಗೊಳಿಸಲಾಗಿದೆ ಎಂದು ಸಂಸ್ಥೆ ಅಧಿಕಾರಿಗಳು ವಿವರಿಸಿದರು.
ಗ್ರಾಹಕರಿಂದ ಸಂಗ್ರಹಿಸಿರುವ ಮೊತ್ತವನ್ನು ವಿವಿಧೆಡೆ ಹೂಡಿಕೆ ಮಾಡಲಾಗಿದೆ. ಸೆಬಿ ಆದೇಶದ ಹಿನ್ನೆಲೆಯಲ್ಲಿ ಆಸ್ತಿಪಾಸ್ತಿಯನ್ನು ಮಾರಾಟ ಮಾಡುವಂತಿಲ್ಲ. ಮಾರಾಟದ ಬಳಿಕವಷ್ಟೇ ಗ್ರಾಹಕರ ಎಲ್ಲ ಬಾಕಿ ಪಾವತಿಸುವುದಾಗಿ ಸ್ಪಷ್ಟನೆ ನೀಡಿದರು.
ಪಟ್ಟು: ಇದರಿಂದ ತೃಪ್ತರಾಗದ ಗ್ರಾಹಕರು ತಮಗೆ ಈಗಲೇ ಹಣ ಸಂದಾಯ ಮಾಡಬೇಕು ಎಂದು ಪಟ್ಟು ಹಿಡಿದರು. ಹೀಗೆ 3 ತಾಸಿನವರೆಗೂ ಪರಸ್ಪರ ಮಾತಿನ ಚಕಮಕಿ ನಡೆಯಿತು. ಕಡೆಗೆ, ಗ್ರಾಹಕರು ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದರು.
ಗ್ರಾಹಕರು ತಮಗೆ ಆಗಿರುವ ಅನ್ಯಾಯ ಸರಿಪಡಿಸಿ, ಹಣ ಸಂದಾಯ ಮಾಡಿಕೊಡಬೇಕು ಎಂದು ಐಜೂರು ಪೊಲೀಸರಿಗೆ ದೂರು ನೀಡಿದ್ದಾರೆ. ಸಂಸ್ಥೆಯೊಂದಿಗೆ ಮಾತುಕತೆ ನಡೆಸಿ, ಸಮಸ್ಯೆ ಇತ್ಯರ್ಥಪಡಿಸುವುದಾಗಿ ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದ ಬಳಿಕ ಗ್ರಾಹಕರು ನಿರ್ಗಮಿಸಿದ್ದಾರೆ.