ದೊಡ್ಡಬಳ್ಳಾಪುರದ ರಾಜಕಾರಣಿಗಳೇ ಜಿಲ್ಲಾ ಹೋರಾಟಕ್ಕೆ ಧುಮುಕಿ...
ಕ.ಪ್ರ. ವಾರ್ತ್ಣೆ ದೊಡ್ಡಬಳ್ಳಾಪುರು ಜು.30
ಹಾಲಿ ಮತ್ತು ಮಾಜಿ ರಾಜಕಾರಣಿಗಳೇ...ಕೂಡಲೇ ಜಿಲ್ಲಾ ಕೇಂದ್ರ ಹೋರಾಟಕ್ಕೆ ಧುಮುಕಿ. ರಾಜಕೀಯ ಭವಿಷ್ಯತ್ತನ್ನು ಕಟ್ಟಿಕೊಟ್ಟ ದೊಡ್ಡಬಳ್ಳಾಪುರವನ್ನು ಜಿಲ್ಲಾಕೇಂದ್ರವಾಗಿ ಘೋಷಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಿ. ಸಂಘಟನೆಗಳ ನೇತೃತ್ವದಲ್ಲಿ ಆರಂಭವಾಗಿರುವ ಹೋರಾಟ ಫಲದಾಯಕವಾಗಲು ಎಲ್ಲರೂ ಸಹಕರಿಸಿ. ದೊಡ್ಡಬಳ್ಳಾಪುರದಲ್ಲಿ ಸದ್ಯಕ್ಕೆ ಬಹುತೇಕ ಜನರ ಬಾಯಿಂದ ಹೊರಹೊಮ್ಮುತ್ತಿರುವ ಅಭಿಪ್ರಾಯವಿದು.
ಈಗಾಗಲೇ ದೊಡ್ಡಬಳ್ಳಾಪುರದಲ್ಲಿ ಹೋರಾಟ ಆರಂಭವಾಗಿದೆ. ಶಾಸಕ ಟಿ.ವೆಂಕಟರಮಣಯ್ಯ, ಮಾಜಿ ಶಾಸಕ ಆರ್.ಜಿ.ವೆಂಕಟಾಚಲಯ್ಯ, ಜೆ.ನರಸಿಂಹಸ್ವಾಮಿ ಸೇರಿದಂತೆ ಹಲವು ರಾಜಕಾರಣಿಗಳು ಹೋರಾಟದಲ್ಲಿ ಗುರುತಿಸಿಕೊಂಡಿದ್ದಾರೆ. ಬಹುಮುಖ್ಯವಾಗಿ ದೊಡ್ಡಬಳ್ಳಾಪುರದ ಎಲ್ಲ ಸಂಘಟನೆಗಳು ಸಕ್ರಿಯವಾಗಿ ಹೋರಾಟದಲ್ಲಿ ಪಾಲ್ಗೊಳ್ಳುವ ಮೂಲಕ ಬೃಹತ್ ಚಳವಳಿಯ ಮುನ್ನೆಚ್ಚರಿಕೆ ನೀಡಿವೆ. ಆದಾಗ್ಯೂ ಹಲವು ಮಂದಿ ರಾಜಕಾರಣಿಗಳು ಹೋರಾಟದಲ್ಲಿ ಇನ್ನೂ ತೊಡಗಿಕೊಂಡಿಲ್ಲ. ಈ ಬಗ್ಗೆ ಯಾರೂ ಔತಣ ನೀಡಿ ಹೋರಾಟಕ್ಕೆ ಕರೆಯಬೇಕಾದ ಅಗತ್ಯವೂ ಇಲ್ಲ. ಇದು ದೊಡ್ಡಬಳ್ಳಾಪುರದಲ್ಲಿ ನೆಲೆ ಕಂಡುಕೊಳ್ಳುವ ಉತ್ಸಾಹ ತೋರಿದ್ದ ಎಲ್ಲ ರಾಜಕಾರಣಿಗಳ ಹೊಣೆಯಾಧಾರಿತ ಕರ್ತವ್ಯವಾಗಬೇಕು ಎಂಬುದು ಜನರ ಮಾತು.
ರಾಜಕೀಯ ಬದ್ಧತೆ ಮುಖ್ಯ: ಜಿಲ್ಲಾ ಕೇಂದ್ರಕ್ಕೆ ಒತ್ತಾಯಿಸಿ ಎಷ್ಟೇ ಹೋರಾಟಗಳು ನಡೆದರೂ ಸರ್ಕಾರದ ಮೇಲೆ ಪ್ರಭಾವ ಬೀರುವ ಮೂಲಕ ಚಳವಳಿಯ ಯಶಸ್ಸಿಗೆ ಸಹಕರಿಸಬೇಕಾದ್ದು ಕೆಲವೇ ಆಡಳಿತ ಶಕ್ತಿಗಳ ಕರ್ತವ್ಯ. ಆ ಶಕ್ತಿ ಕೇಂದ್ರಗಳು ಪ್ರಭಾವಯುತವಾಗಿ ಕೆಲಸ ಮಾಡಬೇಕಿದೆ. ಚುನಾವಣೆಗಳಿಗೆ ಮುನ್ನ ಓತಪ್ರೋತವಾಗಿ ಭರವಸೆಗಳ ಸುರಿಮಳೆ ಸುರಿಸುವ ಗಣ್ಯ ರಾಜಕಾರಣಿಗಳು ಈ ಸಂದರ್ಭದಲ್ಲಿ ಜನತೆಗೆ ಕೊಟ್ಟ ಮಾತಿಗೆ ಪೂರಕವಾಗಿ ನಡೆದುಕೊಳ್ಳಬೇಕಿದೆ.
ಸಂಘಟನೆಗಳು ಬೀದಿಗಿಳಿದು ಪ್ರತಿಭಟಿಸುವುದು, ಚಳವಳಿಗಳನ್ನು ರೂಪಿಸುವುದು, ಸರ್ಕಾರದ ಗಮನ ಸೆಳೆಯುವುದು ಒಂದು ಹಂತದ ಹೋರಾಟವಾದರೆ, ಅದಕ್ಕೆ ಪೂರಕವಾಗಿ ಆಡಳಿತದ ಶಕ್ತಿ ಕೇಂದ್ರದಲ್ಲಿ ಕಾನೂನುಗಳನ್ನು ರೂಪಿಸುವ ಜನರ ಓಲೈಕೆ ಮತ್ತು ನ್ಯಾಯಬದ್ಧ ಹೋರಾಟದ ದನಿಯನ್ನು ಸಂಬಂಧಪಟ್ಟವರಿಗೆ ಮುಟ್ಟಿಸುವ ಕೆಲಸವನ್ನೂ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ದಶಕಗಳ ಕಾಲ ರಾಜಕೀಯ ನೆಲೆ ಕಂಡುಕೊಂಡ ಜನರು, ಹಾಲಿ-ಮಾಜಿ ರಾಜಕಾರಣಿಗಳು ಹೋರಾಟಕ್ಕೆ ಧುಮುಕಬೇಕಿದೆ. ಕ್ಷೇತ್ರದ ಅಭಿವೃದ್ಧಿಯ ಹಿತಾಸಕ್ತಿ ಹೊಂದಿರುವ ಪ್ರತಿಯೊಬ್ಬ ನಾಗರಿಕರ ಮೊದಲ ಆದ್ಯತೆಯಾಗಿ ಜಿಲ್ಲಾ ಕೇಂದ್ರದ ಹೋರಾಟ ರೂಪಿಸಬೇಕು ಎಂಬುದು ಹೋರಾಟಗಾರರ ಆಶಾವಾದ.
ನಾಳೆ ಬೆಂಗಳೂರಿನತ್ತ ಹೋರಾಟ: ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರದ ಹೋರಾಟ ಆ.1ರಂದು ಬೆಂಗಳೂರಿನತ್ತ ಮುಖ ಮಾಡಿದೆ. ಗುರುವಾರ ಬೆಳಗ್ಗೆ 8 ಗಂಟೆಗೆ ಹೊರಡುವ 150ಕ್ಕೂ ಹೆಚ್ಚು ಜನರ ನಿಯೋಗ ಜಿಲ್ಲಾಧಿಕಾರಿಗಳು, ಕಂದಾಯ ಮಂತ್ರಿಗಳು, ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಸರ್ಕಾರದ ಮುಖ್ಯಕಾರ್ಯದರ್ಶಿಗಳು ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಿದೆ.
ಎಲ್ಲರೂ ಬನ್ನಿ: ಈ ಹೋರಾಟಕ್ಕೆ ದೊಡ್ಡಬಳ್ಳಾಪುರದ ಎಲ್ಲ ಸಂಘಟನೆಗಳ ಕಾರ್ಯಕರ್ತರು, ಮಹಿಳೆಯರು, ವಿದ್ಯಾರ್ಥಿಗಳು, ನಗರಸಭೆ ಸದಸ್ಯರು, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಸದಸ್ಯರು, ಶಾಸಕರಾದಿ ಎಲ್ಲ ಚುನಾಯಿತ ಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಮುಖಂಡರು ಭಾಗವಹಿಸುವಂತೆ ಜಿಲ್ಲಾ ಹೋರಾಟ ಸಮಿತಿ ಮನವಿ ಮಾಡಿದೆ.
ಹೋರಾಟಕ್ಕೆ ಬನ್ನಿ
ಕಳೆದ 4 ತಿಂಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಿದ್ದಾಜಿದ್ದಿನ ಅಖಾಡದಲ್ಲಿ ಗುರುತಿಸಿಕೊಂಡಿದ್ದ ಘಟಾನುಘಟಿ ರಾಜಕಾರಣಿಗಳ ಪೈಕಿ ಕೆಲವೇ ಮಂದಿ ಹೋರಾಟಕ್ಕೆ ಬಹಿರಂಗವಾಗಿ ಬೆಂಬಲ ಸೂಚಿಸಿದ್ದಾರೆ. ಆದರೆ ಇನ್ನೂ ಹಲವು ಮಂದಿ ಈ ಬಗ್ಗೆ ಕನಿಷ್ಠ ಹೇಳಿಕೆಯನ್ನೂ ನೀಡುವ ಹೊಣೆಗಾರಿಕೆ ಪ್ರದರ್ಶಿಸಿಲ್ಲ. ಇದು ಸಾರ್ವಜನಿಕರಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಸ್ಪರ್ಧಿಸಿ ತಲಾ 30 ಸಾವಿರಕ್ಕೂ ಅಧಿಕ ಮತ ಪಡೆದ ಇಬ್ಬರು ಹಿರಿಯ ರಾಜಕಾರಣಿಗಳು ಜಿಲ್ಲಾ ಕೇಂದ್ರದ ಹೋರಾಟದಿಂದ ಇನ್ನೂ ದೂರವೇ ಉಳಿದಿದ್ದಾರೆ. ಅದರೊಟ್ಟಿಗೆ ಸ್ಪರ್ಧಿಸಿದ್ದ 8 ಅಭ್ಯರ್ಥಿಗಳಲ್ಲಿ ಹೋರಾಟದಲ್ಲಿ ಕಾಣಿಸಿಕೊಂಡಿರುವುದು ಮೂವರು (ಟಿ.ವೆಂಕಟರಮಣಯ್ಯ, ಜೆ.ನರಸಿಂಹಸ್ವಾಮಿ, ಆರ್.ಚಂದ್ರತೇಜಸ್ವಿ)ಮಾತ್ರ. ಉಳಿದ 5 ಮಂದಿ ಕಾಣಿಸಿಕೊಂಡಿಲ್ಲ. ದೊಡ್ಡಬಳ್ಳಾಪುರ ಜನರ ಹಿತ ಮತ್ತು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡುವ ಬದ್ಧತೆ ಪ್ರದರ್ಶಿಸಬೇಕಾದ ಪ್ರಭಾವಿಗಳು ಚಳವಳಿಯಲ್ಲಿ ತೊಡಗಿಕೊಳ್ಳಬೇಕು ಎಂದು ಹಲವು ಸಂಘಟನೆಗಳು ಆಗ್ರಹಪಡಿಸಿವೆ.
-ಕೆ.ಆರ್. ರವಿಕಿರಣ್