ಬೆಂ.ಹಾಲು ಒಕ್ಕೂಟಕ್ಕೆ ನಿತ್ಯ 15 ಲಕ್ಷ ನಷ್ಟ
ಚನ್ನಪಟ್ಟಣ: ಬೆಂಗಳೂರು ಹಾಲು ಒಕ್ಕೂಟಕ್ಕೆ ಪ್ರತಿದಿನ ಸಂಗ್ರಹಣೆಯಾದ ಹಾಲಿನಲ್ಲಿ 3.50 ಲಕ್ಷ ಲೀಟರ್ ಹಾಲು ಉಳಿಕೆಯಾಗುತಿದ್ದು ಇದರಿಂದಾಗಿ ಒಕ್ಕೂಟಕ್ಕೆ ಪ್ರತಿದಿನ 15 ಲಕ್ಷ ರು. ನಷ್ಟ ವಾಗುತ್ತಿದೆ ಎಂದು ಬಮೂಲ್ ನಿರ್ದೇಶಕ ಎಸ್.ಲಿಂಗೇಶ್ ಕುಮಾರ್ ತಿಳಿಸಿದರು.
ಇಲ್ಲಿನ ಶಿಬಿರ ಕಚೇರಿಯಲ್ಲಿ ಮೃತ ರಾಸುಗಳ ಮಾಲೀಕರಿಗೆ ವಿಮಾ ಚೆಕ್ ವಿತರಣೆ ಮಾಡಿ ಮಾತನಾಡಿ, ಮಾರಾಟವಾಗದೆ ಉಳಿಯುವ ಹಾಲನ್ನು ಹಾಲಿನ ಪುಡಿಯಾಗಿ ಪರಿವರ್ತಿಸಲು ಸೇಲಂ ಮತ್ತು ಡೆಂಪೋ ಡೈರಿಗೆ ಕಳುಹಿಸುತ್ತಿದ್ದು ಇದರಿಂದಾಗಿ ಒಕ್ಕೂಟಕ್ಕೆ ಹೆಚ್ಚಿನ ಹೊರೆಯಾಗುತ್ತಿದೆ ಎಂದರು.
ಒಕ್ಕೂಟ ಎಷ್ಟೇ ಸಂಕಷ್ಟ ಎದುರಿಸುತ್ತಿದ್ದರೂ ಬರದಿಂದ ಕಂಗಾಲಾಗಿರುವ ರೈತರಿಗೆ ಸಮಸ್ಯೆಯಾಗ ಬಾರದೆಂಬ ಕಾರಣಕ್ಕೆ ಹಾಲಿನ ದರವನ್ನು ಇಳಿಕೆ ಮಾಡುತ್ತಿಲ್ಲ, ನಮ್ಮ ಒಕ್ಕೂಟ ಎಂತಹುದೇ ಪರಿಸ್ಥಿತಿಯಲ್ಲೂ ರೈತರ ಪರ ನಿಲ್ಲುತ್ತದೆ ಎಂದರು.
ಸರ್ಕಾರದ ನೆರವು ಅಗತ್ಯ: ರಾಜ್ಯದಲ್ಲೆ ನಮ್ಮ ಒಕ್ಕೂಟ ಮಾದರಿ ಒಕ್ಕೂಟ ವೆನಿಸಿದ್ದು ರೈತರಿಗೆ ಗರಿಷ್ಠ ಪ್ರಮಾಣದ ಸೌಲಭ್ಯ ನೀಡುತ್ತಿದ್ದು ನಮ್ಮ ಒಕ್ಕೂಟಕ್ಕೆ ಸರ್ಕಾರ ಸಹಾಯ ಹಸ್ತ ಚಾಚಿದಲ್ಲಿ ಒಕ್ಕೂಟವನ್ನು ಇನ್ನಷ್ಟು ಅಭಿವೃದ್ಧಿ ಪಡಿಸಬಹುದೆಂದು ಅಭಿಪ್ರಾಯ ಪಟ್ಟರು.
ಒಕ್ಕೂಟ ಸ್ವಂತ ಹಾಲಿನ ಪುಡಿ ಘಟಕವನ್ನು ಸ್ಥಾಪಿಸಿದ್ದೇ ಆದಲ್ಲಿ ಹೊರರಾಜ್ಯಗಳಿಗೆ ಹಾಲನ್ನು ಕಳುಹಿಸಿ ಪುಡಿಮಾಡಲು ತಗಲುತ್ತಿರುವ ವೆಚ್ಚ ಉಳಿತಾಯವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಪ್ರಸ್ಥಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ರೈತಪರ ಯೋಜನೆಗಳ ಅನುಷ್ಠಾನ: ನಮ್ಮ ಒಕ್ಕೂಟದ ವತಿಯಿಂದ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸಾಕಷ್ಟು ಸವಲತ್ತುಗಳನ್ನು ನೀಡಲಾಗುತ್ತಿದ್ದು ರಾಸುಗಳಿಗೆ ಕಡಿಮೆ ಖರ್ಚಿನಲ್ಲಿ ವಿಮೆ ಮಾಡಿಸಲಾಗುತ್ತಿದೆ. ಇದರಿಂದಾಗಿ ಹಸುಗಳನ್ನೇ ನಂಬಿ ಜೀವನ ನಡೆಸುತ್ತಿರುವ ರೈತರಿಗೆ ಆರ್ಥಿಕ ಭದ್ರತೆ ಕಲ್ಪಿಸಿದಂತಾಗಿದೆ ಎಂದರು.
ಹಾಲು ಉತ್ಪಾದಕರು ಒಕ್ಕೂಟದ ವತಿಯಿಂದ ಸಿಗುತ್ತಿರುವ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ಇತ್ತ ಅವರು ರೈತರ ಆಶಾಕಿರಣವಾಗಿರುವ ಜನಶ್ರೀ ಯೋಜನೆಗೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ನೋಂದಣಿ ಮಾಡಿಸಿಕೊಳ್ಳುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ 80 ಮೃತ ರಾಸುಗಳಿಗೆ 25 ಲಕ್ಷ ರು. ಮೌಲ್ಯದ ಚೆಕ್ ಅನ್ನು ವಿತರಣೆ ಮಾಡಲಾಯಿತು. ಶಿಬಿರದ ಉಪ ವ್ಯವಸ್ಥಾಪಕ ಡಾ.ಶ್ರೀಧರ್, ವಿಸ್ತರಣಾಧಿಕಾರಿಗಳಾದ ಮಹದೇವೇಗೌಡ, ಶಿವಪ್ರಸನ್ನ, ಅಮಿತಾಹೆಗಡೆ, ಅರುಣಣ್ಕುಮಾರ್, ಫರಾಜಬೀನ್ ಆಡಳಿತ ಸಹಾಯಕ ಪುಟ್ಟಸ್ವಾಮಿ ಗೌಡ ಮುಂತಾದವರು ಉಪಸ್ಥಿತರಿದ್ದರು.