ಶಾಶ್ವತ ನೀರಾವರಿ ಹೋರಾಟ ಸಮಿತಿ ಸಂಘಟನೆಗೆ ಒತ್ತು
ಕ.ಪ್ರ.ವಾರ್ತೆ , ದೊಡ್ಡಬಳ್ಳಾಪುರ , ಜು.30
ಬಯಲುಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಒದಗಿಸುವ ಡಾ.ಪರಮಶಿವಯ್ಯ ವರದಿ ಜಾರಿಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ತಳಹಂತದಿಂದ ಸಂಘಟನೆ ಅಗತ್ಯವಿದ್ದು ವಿವಿಧ ಸಮಿತಿಗಳನ್ನು ರಚಿಸುವ ಮೂಲಕ ಹೋರಾಟವನ್ನು ವ್ಯವಸ್ಥಿತವಾಗಿ ನಡೆಸಲು ಹೋರಾಟ ಸಮಿತಿ ತೀರ್ಮಾನಿಸಿದೆ.
ಈ ವಿಚಾರವಾಗಿ ಇಲ್ಲಿನ ಕನ್ನಡ ಜಾಗೃತ ಭವನದಲ್ಲಿ ಸೋಮವಾರ ಸಂಜೆ ತಾಲೂಕು ಶಾಶ್ವತ ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ವಿವಿಧ ಸಂಘಟನೆಗಳ ಸಭೆಯಲ್ಲಿ ಬಂದ ಸಲಹೆಗಳ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈಗಾಗಲೇ ತಾಲೂಕಿನ ದೊಡ್ಡಬೆಳವಂಗಲ ಮತ್ತು ಮಧುರೆ ಹೋಬಳಿಗಳಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ ವ್ಯವಸ್ಥಿತವಾಗಿ ಸಂಘಟನೆಗೊಂಡಿದೆ. ಇದೇ ಮಾದರಿಯಲ್ಲಿ ಸಾಸಲು ಮತ್ತು ತೂಬಗೆರೆ ಹೋಬಳಿಗಳಲ್ಲಿ ಸಂಘಟನೆಗಳನ್ನು ರಚಿಸಬೇಕಿದೆ. ಹೋಬಳಿಗಳಲ್ಲಿ ಸಂಘಟನೆಯನ್ನು ಸದೃಢಗೊಳಿಸಿ, ದೊಡ್ಡಬಳ್ಳಾಪುರ ನಗರ ಮಟ್ಟದ ಸಮಿತಿಯನ್ನು ರಚಿಸಬೇಕು ಎಂದು ಸಭೆಯಲ್ಲಿ ಪ್ರಸ್ತಾಪವಾಯಿತು.
ಹಲವು ಹಂತಗಳಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿಗಳನ್ನು ಪುನರ್‌ರಚಿಸಿ ಹೋರಾಟವನ್ನು ತೀವ್ರಗೊಳಿಸಬೇಕು. ಸರ್ಕಾರದ ಆತುರದ ನಿರ್ಧಾರಗಳು, ಅವೈಜ್ಞಾನಿಕ ಯೋಜನೆಗಳ ಬಗ್ಗೆ ನಮ್ಮ ಗಂಭೀರ ಆಕ್ಷೇಪವಿದೆ. ಕೇವಲ ಚುನಾವಣೆ ವಿಚಾರದಲ್ಲಿ ಜನರನ್ನು ದಿಕ್ಕುತಪ್ಪಿಸುವ ಪ್ರಯತ್ನಗಳು ನಿರಂತರ ನಡೆಯುತ್ತಿರುವುದು ಸರಿಯಲ್ಲ. ಎತ್ತಿನಹೊಳೆ ಯೋಜನೆ ಅವೈಜ್ಞಾನಿಕ ಎಂದು ಗೊತ್ತಿದ್ದರೂ ಸರ್ಕಾರ ಶಾಶ್ವತ ನೀರಾವರಿ ಯೋಜನೆಗೆ ಮೊದಲ ಪ್ರಾಶಸ್ತ್ಯ ನೀಡದಿರುವುದು ಖಂಡನೀಯ. ಮುಂಬರುವ ದಿನಗಳಲ್ಲಿ ಬಯಲುಸೀಮೆ ಜಿಲ್ಲೆಗಳಲ್ಲಿನ ಎಲ್ಲ ಹೋರಾಟ ಸಮಿತಿಗಳ ಸಹಯೋಗದಲ್ಲಿ ಹೋರಾಟ ರೂಪಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ ತಾಲೂಕು ಮತ್ತು ಹೋಬಳಿ ಘಟಕಗಳ ಮುಖಂಡರು, ವಿವಿಧ ಸಂಘಟನೆಗಳ ಮುಖಂಡರು ಹಾಜರಿದ್ದರು.