'ಹೇಮಾವತಿ ನೀರಾವರಿ ಯೋಜನೆಗೆ ಹೆಚ್ಚುವರಿ ಹಣ ನೀಡಿ'
ಮಾಗಡಿ: ಹೇಮಾವತಿ ನೀರಾವರಿ ಯೋಜನೆಯ ಸರ್ವೆ ಕಾರ್ಯಬೇಡ, ಕೂಡಲೆ ಹೆಚ್ಚುವರಿ ಹಣ ಮಂಜೂರು ಮಾಡಬೇಕು. ಯೋಜನೆ ಅನುಷ್ಠಾನ ಗೊಳಿಸಲು ಕಾಮಗಾರಿಗೆ ಚಾಲನೆ ನೀಡುವಂತೆ ಹೇಮಾವತಿ ಶಾಶ್ವತ ನೀರಾವರಿ ಯೋಜನೆಯ ಹೋರಾಟ ಸಮಿತಿ ಅಧ್ಯಕ್ಷ ಹಾಗೂ ಕೆಪಿಸಿಸಿ ಸದಸ್ಯ ಎ.ಮಂಜು, ನೀರಾವರಿ ಸಚಿವ ಎಂ.ಬಿ.ಪಾಟೀಲ್ ಅವರಲ್ಲಿ ಮನವಿ ಮಾಡಿಕೊಂಡಿದ್ದಾಗಿ ತಿಳಿಸಿದರು.
ಅವರು ಸುದ್ದಿಗಾರರೊಂದಿಗೆ ಮಾತನಾಡಿ ಈಗಾಗಲೇ ಹೇಮಾವತಿ ನೀರಾವರಿ ಯೋಜನೆ ಕಾಮಗಾರಿಗೆ ಸರ್ವೆ ಕಾರ್ಯ ನಡೆದಿದೆ. ಡಿಪಿಆರ್ ಕಾರ್ಯ ಸಹ ಮುಗಿದಿದೆ. ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಲೇ 124 ಕೋಟಿ ಹಣ ಬಿಡುಗಡೆ ಮಾಡಿದ್ದರು. ಬಿಜೆಪಿ ಸರ್ಕಾರ ಸಹ 29 ಕೋಟಿ ಬಿಡುಗಡೆ ಮಾಡಿತ್ತು. ವಿಧಾನ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳುವ ಮೂಲಕ ನೀರಾವರಿ ಯೋಜನೆ ಅನುಷ್ಠಾನಕ್ಕೆ ಹೆಚ್ಚುವರಿ ಅನುದಾನದಲ್ಲಿ ಹಣ ಮಂಜೂರು ಮಾಡುವ ಮೂಲಕ ಕಾಮಗಾರಿಗೆ ಚಾಲನೆ ನೀಡುವಂತೆ ಮನವಿ ಮೇರೆಗೆ ನೀರಾವರಿ ಸಚಿವ ಪಾಟೀಲ್ ಒಪ್ಪಿಗೆ ಸೂಚಿಸಿದ್ದಾರೆ ಎಂದರು. ಮಾಜಿ ಸಚಿವ ಎಚ್.ಎಂ. ರೇವಣ್ಣ, ಪಿ.ಎಲ್.ಡಿ. ಬ್ಯಾಂಕ್ ಮಾಜಿ ಅಧ್ಯಕ್ಷ ಹುಳ್ಳೇನಹಳ್ಳಿ ಗಿರಿಯಣ್ಣ, ಚಿಗಳೂರು ಗಂಗಾಧರ್, ಜುಟ್ಟನಹಳ್ಳಿ ಗಂಗಾಧರ್ ಇತರರು ಇದ್ದರು.