ಕೆಂಪೇಗೌಡ ಕನ್ನಡ ಸೇನೆಯ ನೂತನ ಶಾಖೆ ಉದ್ಘಾಟನೆ
ವಿಜಯಪುರ: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರಿಡುವುದು ಸೂಕ್ತವಾಗಿದೆ ಎಂದು ಕೆಂಪೇಗೌಡ ಕನ್ನಡ ಸೇನೆಯ ಸಂಸ್ಥಾಪಕ ಬಿ.ಮುನೇಗೌಡ ತಿಳಿಸಿದರು.
ಅವರು ಪಟ್ಟಣ ಸಮೀಪದ ಕೋರಮಂಗಲ ಗ್ರಾಮದ ವೃತ್ತದಲ್ಲಿ ಜೇನುಗೂಡು ಗೆಳೆಯರ ಬಳಗದ ವತಿಯಿಂದ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡ ಕನ್ನಡ ಸೇನೆಯ ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ತಾಲೂಕು ಕಸಾಪ ಅಧ್ಯಕ್ಷ ರಾಜ್‌ಗೋಪಾಲ್ ಮಾತನಾಡಿ ಕನ್ನಡ ಸೇನೆಯ ನೂತನ ಶಾಖೆಯು ಸಮಾಜ ಅಭಿವೃದ್ಧಿಯನ್ನು ಮಾಡುವುದರ ಜೊತೆಗೆ ಎಲ್ಲರ ಅಭಿಮಾನವನ್ನು ಗಳಿಸುವಂತಾಗಲಿ ಎಂದು ಹಾರೈಸಿದರು.
ಕಾರ್ಯನಿರತ ಪತ್ರಕರ್ತ ಸಂಘದ ರಾಜ್ಯ ಉಪಾಧ್ಯಕ್ಷ ಮಂಡಿಬೆಲೆ ರಾಜಣ್ಣ ಮಾತನಾಡಿ ನಾಡಪ್ರಭು ಕೆಂಪೇಗೌಡರ ಕನ್ನಡ ಸೇನೆಯು ಬೇರೆಯ ಕನ್ನಡ ಸಂಘಗಳ ವೇದಿಕೆಗಳ ರೀತಿ ಕೆಲಸ ಮಾಡದೇ ವಿಭಿನ್ನ ರೀತಿಯಲ್ಲಿ ಯೋಜನೆಗಳ ಹಾಕಿಕೊಂಡಿದೆ. ಇದಕ್ಕೆ ಯುವ ಜನತೆ ಸಹಕರಿಸಬೇಕು ಎಂದರು. ನೂತನ ಶಾಖೆಯನ್ನು ಬಸವ ಕಲ್ಯಾಣ ಮಠದ ಮಹದೇವ ಸ್ವಾಮೀಜಿ ಅವರು ಉದ್ಘಾಟಿಸಿದರು.
ನೇಕಾರರ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಶ್ರೀನಿವಾಸ್, ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಎಂ.ಯೋಗೇಶ್ ಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ಪ್ರಾಶಂತ್ ಬಾಬು, ನೇಕಾರರ ವಿಭಾಗದ ನಂದಿನಿ ಗೌಡ ಇತರರು ಇದ್ದರು.