ಗ್ರಾಮೀಣ ಪ್ರದೇಶದ ಕೃಷಿಕರ, ಕಾರ್ಮಿಕರ ಹಿತದೃಷ್ಟಿಯಿಂದ ಕೆನರಾ ಬ್ಯಾಂಕ್ ಶಾಖೆ
ನೆಲಮಂಗಲ: ಗ್ರಾಮೀಣ ಪ್ರದೇಶದ ಕೃಷಿಕರ ಮತ್ತು ಕಾರ್ಮಿಕರ ಹಿತದೃಷ್ಟಿಯಿಂದ ಕೆನರಾಬ್ಯಾಂಕ್ ಆರ್ಥಿಕ ಸೇರ್ಪಡೆ ಶಾಖೆಗಳನ್ನು ಗ್ರಾಮೀಣ ಪ್ರದೇಶದಲ್ಲಿ ತೆರೆಯಲಾಗುತ್ತಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೆನರಾಬ್ಯಾಂಕ್ ವೃತ್ತ ಕಚೇರಿ ಮುಖ್ಯಸ್ಥ ಡಿ.ಜೆ.ಎಂ. ಸಂಪತ್ಕುಮಾರ್ ತಿಳಿಸಿದರು.
ಅವರು ಬುಧವಾರ ತಾಲೂಕಿನ ಬಿಲ್ಲಿನಕೋಟೆ, ನಿಡವಂದ ಮತ್ತು ನರಸೀಪುರ ಗ್ರಾಮಗಳಲ್ಲಿ ಕೆನರಾ ಬ್ಯಾಂಕ್ನ ನೂತನ ಶಾಖೆಗಳನ್ನು ಉದ್ಘಾಟಿಸಿ ಮಾತನಾಡುತ್ತಾ ಗ್ರಾಮೀಣ ಪ್ರದೇಶದ ಕೃಷಿಕರು ಮತ್ತು ಕಾರ್ಮಿಕರು ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ಕಾರವು ಗ್ರಾಮೀಣ ಪ್ರದೇಶಗಳ ಅಭ್ಯುದಯಕ್ಕಾಗಿ ಹಳ್ಳಿಗಳಲ್ಲಿ ಬ್ಯಾಂಕ್ ತೆರೆಯುವ ಸರ್ಕಾರ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಆರ್ಥಿಕ ಸೇರ್ಪಡೆಗೆ ನಮ್ಮ ಬ್ಯಾಂಕ್ ಉತ್ತಮವಾಗಿ ಸ್ಪಂದಿಸುತ್ತಿದೆ ಎಂದರು.
ನೆಲಮಂಗಲ ತಾಲೂಕಿನ ಮೂರು ಮತ್ತು ದೊಡ್ಡಬಳ್ಳಾಪುರ ತಾಲೂಕಿನ ಒಂದು ಕೇಂದ್ರ ಸೇರಿದಂತೆ ಒಟ್ಟು 112 ಶಾಖೆಗಳನ್ನು ಹೊಂದಿದಂತಾಗುತ್ತದೆ ಎಂದರು. ಗ್ರಾಮೀಣ ರೈತರು ಕಾರ್ಮಿಕರು ಮತ್ತು ವಿದ್ಯಾರ್ಥಿಗಳು ದೇಶದ ಅರ್ಥ ವ್ಯವಸ್ಥೆಯ ಬ್ಯಾಂಕಿಂಗ್ ವ್ಯವಸ್ಥೆಯ ಮುಖ್ಯ ವಾಹಿನಿಯಲ್ಲಿ ಸೇರಿ ಸೌಲಭ್ಯಗಳ ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.
ಸೋಂಪುರ ಗ್ರಾಪಂ ಅಧ್ಯಕ್ಷ ತೀರ್ಥಪ್ರಸಾದ್, ನರಸೀಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮೆಹರುನ್ನಿಸಾ, ಕುಲುವನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರೇವಮ್ಮ, ಸದಸ್ಯರಾದ ಬಾಲಕೃಷ್ಣೇಗೌಡ, ಕುಮಾರ್, ಕೃಷ್ಣ, ಬಿಲ್ಲಿನಕೋಟೆ ಬ್ಯಾಂಕ್ನ ವ್ಯವಸ್ಥಾಪಕಿ ಜಯಲಕ್ಷ್ಮೀ, ಬ್ಯಾಂಕ್ನ ಅಧಿಕಾರಿಗಳಾದ ಎ.ಜಿ.ಎಂ. ಕೋದಂಡರಾಮಯ್ಯ, ಆರ್.ಜಿ.ಸ್ವಾಮಿ, ಮಂಜುನಾಥ್ ಸ್ವಾಮಿ ಇದ್ದರು.