ಜಿಲ್ಲಾ ವಾರ್ತಾಧಿಕಾರಿ ಅ.ನಾ. ಪ್ರಹ್ಲಾದರಾವ್ ನಿವೃತ್ತಿ
ಕ.ಪ್ರ.ವಾರ್ತೆ , ರಾಮನಗರ , ಜು.31
ದಕ್ಷ, ಪ್ರಾಮಾಣಿಕ ಮತ್ತು ಸ್ನೇಹ ಜೀವಿಯಾಗಿ ಮೂರು ದಶಕ ಸರ್ಕಾರಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಜಿಲ್ಲಾ ವಾರ್ತಾಧಿಕಾರಿ ಅ.ನಾ.ಪ್ರಹ್ಲಾದರಾವ್ ಅವರಿಗೆ ನಗರದಲ್ಲಿ ಬುಧವಾರ ಹೃದಯ ಸ್ಪರ್ಶಿ ಸನ್ಮಾನದೊಂದಿಗೆ ಬೀಳ್ಕೊಡುಗೆ ನೀಡಲಾಯಿತು.
ನಗರದ ವಾರ್ತಾ ಇಲಾಖೆ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಹಾಸನ, ಮಂಡ್ಯ, ರಾಮನಗರ ಮತ್ತು ಬೆಂಗಳೂರು ಸೇರಿದಂತೆ ನಾನಾ ಕಡೆ ಪ್ರಹ್ಲಾದರಾವ್ ಅವರು ಸಲ್ಲಿಸಿದ ಸೇವೆಯನ್ನು ಸ್ಮರಿಸಲಾಯಿತು.
ಹಿರಿಯ ಪತ್ರಕರ್ತ ಅಬ್ಬೂರು ರಾಜಶೇಖರ್ ಮಾತನಾಡಿ, ಅಧಿಕಾರಿ ಆಗಿದ್ದುಕೊಂಡೇ ಪತ್ರಿಕೋದ್ಯಮದ ಜತೆಗಿನ ಸಂಬಂಧವನ್ನು ಪ್ರಹ್ಲಾದರಾವ್ ಮುಂದುವರೆಸಿಕೊಂಡು ಬಂದಿದ್ದಾರೆ. ಸಿನೆಮಾ, ಸಾಹಿತ್ಯ, ಕಲೆ, ಪದಬಂಧ ಸಹಿತ ವಿವಿಧ ಅಂಕಣಗಳಿಂದಲೂ ಅವರು ಗಮನ ಸೆಳೆದಿದ್ದಾರೆ ಎಂದರು.
ಅಧಿಕಾರಿಯಾಗಿ ಅವರಿಗೆ ನಿವೃತ್ತಿಯಾಗಿದೆ. ಅಂಕಣಕಾರ, ಬರಹಗಾರರಾಗಿ ಅವರಿಗೆ ನಿವೃತ್ತಿ ಎಂಬುದೇ ಇಲ್ಲ. ನಿವೃತ್ತಿಯ ದಿನಗಳಲ್ಲಿ ಅವರು ಪತ್ರಿಕೋದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸೇವೆ ಸಲ್ಲಿಸುವಂತಾಗಬೇಕು ಎಂದು ಆಶಿಸಿದರು.
ಸ್ನೇಹಜೀವಿ: ಕನ್ನಡಪ್ರಭದ ಪ್ರಧಾನ ವರದಿಗಾರ ಮತ್ತೀಕೆರೆ ಜಯರಾಮ್ ಮಾತನಾಡಿ, ಪ್ರಹ್ಲಾದರಾವ್ ಮಂಡ್ಯದಲ್ಲಿ 5 ವರ್ಷ ಸೇವೆ ಸಲ್ಲಿಸಿ ಸಾಕಷ್ಟು ಹೆಸರು ಮಾಡಿದ್ದರು. ಹಿರಿಯರೊಂದಿಗೆ ಹಿರಿಯರಾಗಿ, ಕಿರಿಯರೊಂದಿಗೆ ಕಿರಿಯರಾಗಿ ಸ್ನೇಹಜೀವಿಯಾಗಿದ್ದಾರೆ ಎಂದು ತಿಳಿಸಿದರು.
ಪತ್ರಕರ್ತ ಎಸ್.ಸಂಪತ್ ಮಾತನಾಡಿ, ಒಬ್ಬ ಅಧಿಕಾರಿಯಾಗಿಯೂ ಪ್ರಹ್ಲಾದರಾವ್ ಅವರು ಪತ್ರಿಕೋದ್ಯಮದ ಉದಯೋನ್ಮುಖ ಪ್ರತಿಭೆಗಳಿಗೆ ಮಾರ್ಗದರ್ಶಕರಾಗಿ ಪ್ರೋತ್ಸಾಹಿಸಿದ್ದಾರೆ ಎಂದು ಹೇಳಿದರು. ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಹೆಚ್.ಪ್ರಕಾಶ್, ಸಹಾಯಕ ವಾರ್ತಾಧಿಕಾರಿ ಸಿದ್ದಯ್ಯ, ಸರ್ಕಾರಿ ನೌಕರರ ಸಂಘದ ನಿರ್ದೇಶಕ ರಾಘವೇಂದ್ರ ಮಾತನಾಡಿದರು.
ಸೇವೆ ತೃಪ್ತಿ ತಂದಿದೆ: ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ಅ.ನಾ.ಪ್ರಹ್ಲಾದರಾವ್, ವಿವಿಧೆಡೆ ಸೇವೆ ಸಲ್ಲಿಸಿದ್ದಾಗ್ಯೂ ಸೀಮಿತ ಅವಧಿ ಕೆಲಸ ಮಾಡಿದ ರಾಮನಗರದಲ್ಲಿ ತಮಗೆ ಸನ್ಮಾನದೊಂದಿಗೆ ಬೀಳ್ಕೊಡುಗೆ ಸಿಕ್ಕಿದೆ. ಇದಕ್ಕೆ ನಾನು ಋಣಿಯಾಗಿರುತ್ತೇನೆ ಎಂದು ತಿಳಿಸಿದರು.
ಮೂವತ್ತು ವರ್ಷದ ಸೇವೆಯು ನನಗೆ ತೃಪ್ತಿ ತಂದಿದೆ. ನಾನು ಸೇವೆ ಸಲ್ಲಿಸಿದ ಸಂಸ್ಥೆ, ಇಲಾಖೆಗೆ ಧಕ್ಕೆಯಾಗುವ ರೀತಿ ನಾನೆಂದೂ ವರ್ತಿಸಿಲ್ಲ. ಸೇವಾವಧಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಸಹಕಾರವನ್ನು ಮರೆಯುವುದಿಲ್ಲ ಎಂದು ಹೇಳಿದರು.