ದೇವನಹಳ್ಳಿ ಬಿಜೆಪಿ ಯುವ ಮೋರ್ಚಾದಿಂದ ರಕ್ತದಾನ ಶಿಬಿರ
ದೇವನಹಳ್ಳಿ: ತಾಲೂಕು ಭಾರತೀಯ ಜನತಾ ಪಕ್ಷ ಯುವ ಮೋರ್ಚಾ ಕಾರ್ಯಕರ್ತರು ದೇಶ ಭಕ್ತ ಚಂದ್ರಶೇಖರ ಆಜಾದ್ ಅವರ 107ನೆಯ ಹುಟ್ಟುಹಬ್ಬ ಅಂಗವಾಗಿ ಹಾಗೂ ರಾಷ್ಟ್ರೋತ್ಥಾನ ರಕ್ತನಿಧಿ ವೈದ್ಯರ ಸಹಕಾರದೊಂದಿಗೆ ಬುಧವಾರ ಇಲ್ಲಿನ ಗುರುಭವನದಲ್ಲಿ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ 10 ಮಂದಿ ಮಹಿಳೆಯರು ಸೇರಿ 225 ಮಂದಿ ರಕ್ತದಾನ ಮಾಡಿದ್ದಾರೆ.
ರಾಷ್ಟ್ರೋತ್ಥಾನ ರಕ್ತನಿಧಿ ಶಿಬಿರ ಸಂಯೋಜನಾಧಿಕಾರಿಗಳಾದ ಕೆ.ಎಸ್.ಸುಂದರ್ ಮಾತನಾಡಿ ಕಳೆದ ವರ್ಷ ರಾಜ್ಯದಲ್ಲಿ ನಡೆದ 400 ರಕ್ತದಾನ ಶಿಬಿರಗಳಲ್ಲಿ 36 ಸಾವಿರ ಮಂದಿ ತಮ್ಮ ರಕ್ತದಾನ ಮಾಡಿದ್ದು ಅದರಲ್ಲಿ ಸುಮಾರು 27 ಸಾವಿರ ಯುನಿಟ್ ರಕ್ತವನ್ನು ವಿವಿಧ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿನ ರೋಗಿಗಳಿಗೆ ನೀಡಲಾಗಿದೆ ಎಂದರು.
ರಕ್ತ ನೀಡಲು ಬರುವ ಎಲ್ಲರನ್ನೂ ನಮ್ಮಲ್ಲಿನ ವೈದ್ಯರು ಪರೀಕ್ಷಿಸಿ ಅವರಲ್ಲಿ ಯಾವುದೇ ಸೊಂಕು ರೋಗ ಇಲ್ಲದೇ ಇರುವುದನ್ನು ಪರೀಕ್ಷಿಸಿ ನಂತರ ರಕ್ತ ಪಡೆಯಲಾಗುವುದು ಎಂದು ಸುಂದರ್ ತಿಳಿಸಿ ರಕ್ತ ಪಡೆದನಂತರವೂ ಪ್ರಯೋಗಾಲಯದಲ್ಲಿ ಪರೀಕ್ಷಿಸಿ ಯಾವುದಾದರೂ ಸೊಂಕಿದ್ದರೆ ಅವರಿಗೆ ಕೂಡಲೇ ತಿಳಿಸಲಾಗುವುದು ಎಂದರು.
ರಕ್ತದಾನ ಶಿಬಿರಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಬಿ.ಸಿ.ನಾರಾಯಣಸ್ವಾಮಿ, ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯರಾದ ಎ.ಸಿ.ಗುರುಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ನಾಗೇಶ್, ಜಿಲ್ಲಾ ಸಂಘಟನಾ ಪ್ರಧಾನ ಕಾರ್ಯದರ್ಶಿ ಕಾಂತರಾಜು, ಜಿಲ್ಲಾ ಮುಖಂಡರಾದ ಹೊಸಕೋಟೆ ನಾರಾಯಣಸ್ವಾಮಿ, ಜಿಲ್ಲಾ ಸಂಚಾಲಕರಾದ ಎಸ್.ರಮೇಶ್, ತಾಲೂಕು ಅಧ್ಯಕ್ಷರಾದ ರಾಜಗೋಪಾಲ್, ಮಾಜಿ ಅಧ್ಯಕ್ಷರಾದ ಹನುಮಂತರಾಯಪ್ಪ, ವಕೀಲರಾದ ಎನ್. ರಮೇಶ್, ಭಾಗ್ಯ ರಮೇಶ್ ಭಾಗವಹಿಸಿದ್ದರು. ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ ಎಲ್ಲ ದಾನಿಗಳಿಗೂ ಮತ್ತು ವಿದ್ಯಾರ್ಥಿಗಳಿಗೂ ತಾಲೂಕು ಪ್ರಧಾನ ಕಾರ್ಯದರ್ಶಿ ನಾರಾಯಣಸ್ವಾಮಿ ಕೃತಜ್ಞತೆ ಸಲ್ಲಿಸಿದರು.