ನವೀಕರಣವಿಲ್ಲದ ಪಡಿತರ ಚೀಟಿಗಳಿಗೆ ರೇಷನ್ ಸ್ಥಗಿತ, ಗ್ರಾಮಸಭೆಯಲ್ಲಿ ಗದ್ದಲ
ಸೂಲಿಬೆಲೆ: 2010 ರ ಹಿಂದಿನ ಅವಧಿಯಲ್ಲಿ ವಿತರಣೆ ಮಾಡಿ ನವೀಕರಣಗೊಳ್ಳದ ಪಡಿತರ ಚೀಟಿಗಳಿಗೆ ಪ್ರಸುತ್ತ ತಿಂಗಳಲ್ಲಿ ಆಹಾರ ಧಾನ್ಯಗಳನ್ನು ಬಿಡಗಡೆ ಮಾಡದೆ ಆಹಾರ ಇಲಾಖೆ ಬಡವರಿಗೆ ಅನ್ಯಾಯ ಮಾಡಿದೆ. ಇತ್ತ ನವೀಕರಣಕ್ಕೂ ಅವಕಾಶವಿಲ್ಲದೇ, ಅತ್ತ ಆಹಾರ ಧಾನ್ಯಗಳಿಲ್ಲದೇ ಬಡವರು ಪರದಾಡುವಂತಾಗಿದೆ ಎಂದು ಗ್ರಾಮಸಭೆಯಲ್ಲಿ ಜನರು ಅಸಮಾಧಾನ ವ್ಯಕ್ತಪಡಿಸಿದ ಘಟನೆ ಸಮೀಪದ ಬೆಂಡಿಗಾನಹಳ್ಳಿ ಗ್ರಾಮದಲ್ಲಿ ಬುಧವಾರ ನಡೆಯಿತು.
ಸೂಲಿಬೆಲೆ ಸಮೀಪದ ದೊಡ್ಡ ಅರಳಿಗೆರೆ ಗ್ರಾಪಂ ವ್ಯಾಪ್ತಿಗೆ ಒಳಪಟ್ಟಂತೆ ಬೆಂಡಿಗಾನಹಳ್ಳಿ ಗ್ರಾಮದಲ್ಲಿ ನಡೆದ 2013-14 ಸಾಲಿನ ಗ್ರಾಮಸಭೆಯಲ್ಲಿ ಪಾಲ್ಗೊಂಡಿದ್ದ ಗ್ರಾಪಂ ಸದಸ್ಯರು ಸಭೆ ಪ್ರಾರಂಭವಾಗುತ್ತಿದಂತೆ ಪಡಿತರ ವಿಚಾರಗಳನ್ನು ಎತ್ತಿದರು. ಕಳೆದ ಜು.18 ರಿಂದ ತಾತ್ಕಾಲಿಕ ಪಡಿತರ ಚೀಟಿಗಳ ನವೀಕರಣವನ್ನು ಸ್ಥಗಿತಗೊಳಿಸಿದೆ. ಈ ಕಾರ್ಡುಗಳಿಗೆ ಪಡಿತರ ಧಾನ್ಯಗಳನ್ನು ನೀಡುವ ಭರವಸೆ ನೀಡಿದ ಇಲಾಖೆ ಪ್ರಸುತ್ತ ಜುಲೈ ತಿಂಗಳಲ್ಲಿ ಧಾನ್ಯಗಳನ್ನು ನೀಡದೆ ವಂಚಿಸಿದೆ. ಪಡಿತರ ಚೀಟಿ ಹಿಡಿದು ಅಂಗಡಿಗೆ ಹೋದ ಪಲಾನುಭವಿಗಳನ್ನು ಅಂಗಡಿಗಳು ಕಾರ್ಡಿಗೆ ಅಕ್ಕಿ ಬಂದಿಲ್ಲ ಎಂದು ವಾಪಸ್ ಕಳುಹಿಸುತ್ತಿದ್ದಾರೆ. ಪಡಿತರವಿಲ್ಲದೆ ಬಡವರು ಪರದಾಡುವಂತಾಗಿದೆ ಎಂದು ಇಲಾಖೆಯ ನಿಯಮಗಳು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಧ್ಯ ಪ್ರವೇಶಿಸಿದ ಅಧಿಕಾರಿಗಳು ಸೆ.1ರಿಂದ ನವೀಕರಣ ಕಾರ್ಯಕ್ಕೆ ಇಲಾಖೆ ಚಾಲನೆ ನೀಡುವ ಸಂಭವವಿದ್ದು, ಪಡಿತರ ಪಲಾನುಭವಿಗಳು ಭಯಪಡುವ ಅಗತ್ಯವಿಲ್ಲ ಎಂದರು. ಮಾರ್ಗದರ್ಶನ ಅಧಿಕಾರಿಯಾಗಿ ಆಗಮಿಸಿದ್ದ ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ದೇವಿ ಸೇರಿದಂತೆ ನಾನಾ ಇಲಾಖೆ ಅಧಿಕಾರಿಗಳು ಸರ್ಕಾರದ ಸೌಲಭ್ಯಗಳ ಬಗ್ಗೆ ಸಭೆಗೆ ವಿವರಿಸದರು. ತಾಪಂ ಮಾಜಿ ಸದಸ್ಯ ಡಿ.ಟಿ ವೆಂಕಟೇಶ್, ಮುಖಂಡ ಮುನಿಯಪ್ಪ ಸೇರಿದಂತೆ ಹಲವರು ಮಾತನಾಡಿದರು. ಪಿಡಿಒ ಚೈತ್ರಾ, ಗ್ರಾಪಂ ಅಧ್ಯಕ್ಷೆ ಲಕ್ಷಮ್ಮ ನ್ಯಾನಪ್ಪ, ಉಪಾಧ್ಯಕ್ಷ ನಾರಾಯಣಸ್ವಾಮಿ ಸೇರಿದಂತೆ ಗ್ರಾಪಂ ಸದಸ್ಯರು ಮುಖಂಡರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.