ನಾಮಪತ್ರ ಸಲ್ಲಿಸಲು ಉಳಿದಿರೋದು ಮೂರೇ ದಿನ
ಕ.ಪ್ರ.ವಾರ್ತೆ , ರಾಮನಗರ , ಜು. 31
ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳ ಮರು ಚುನಾವಣೆಗೆ ನಾಮಪತ್ರ ಸಲ್ಲಿಸಲು ಉಳಿದಿರೋದು ಮೂರೇ ದಿನ. ಇಷ್ಟಾಗಿಯೂ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ಮೀನಮೇಷದ ಜತೆಗೆ ಇನ್ನೂ ಕಾದು ನೋಡುವ ತಂತ್ರ ಅನುಸರಿಸುತ್ತಿವೆ.
ಕೇಂದ್ರ ಸರ್ಕಾರ ಅವಧಿ ಪೂರೈಸುತ್ತದೆ ಎನ್ನುವುದಾದರೂ ಮರು ಚುನಾವಣೆಯಲ್ಲಿ ಆಯ್ಕೆಯಾಗುವ ನೂತನ ಸಂಸದರ ಅಧಿಕಾರ ಉಳಿಯುವುದು ಗರಿಷ್ಠ 8 ತಿಂಗಳಷ್ಟೇ. ಸೀಮಿತ ಅವಧಿ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳಲ್ಲಿ ಮರು ಚುನಾವಣೆ ಬಗ್ಗೆ ನಿರಾಸಕ್ತಿ ಮನೆ ಮಾಡಿದೆ.
ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಮೀನಾಮೇಷಕ್ಕೆ ಚುನಾವಣೆ ಬಗೆಗಿನ ನಿರಾಸಕ್ತಿ ಒಂದೇ ಕಾರಣವಲ್ಲ. ಎದುರಾಳಿ ಪಕ್ಷದ ಅಭ್ಯರ್ಥಿ ಯಾರಾಗುತ್ತಾರೆ ಎನ್ನುವುದನ್ನು ನೋಡಿಕೊಂಡು, ತನ್ನ ಅಭ್ಯರ್ಥಿಯನ್ನು ನಿರ್ಧರಿಸುವ ತಂತ್ರ, ಪ್ರತಿತಂತ್ರಕ್ಕೆ ಪ್ರಮುಖ ಪಕ್ಷಗಳು ಮೊರೆ ಹೋಗಿವೆ.
ಆ.3 ಕಡೆಯ ದಿನ: ಉಭಯ ಕ್ಷೇತ್ರಗಳಿಗೆ ಆ.21ಕ್ಕೆ ನಡೆಯುವ ಮರು ಚುನಾವಣೆಗೆ ಉಮೇದುವಾರಿಕೆ ಸಲ್ಲಿಸಲು ಆ.3 ಕಡೆಯ ದಿನವಾಗಿದೆ. ಗುರುವಾರವೂ ಸಹಿತ ಇನ್ನುಳಿಯುವುದು ಮೂರೇ ದಿನ. ಕಡೆಯ ದಿನ ಶನಿವಾರದ ಕಾರಣಕ್ಕೆ ಬಹುತೇಕ ಶುಕ್ರವಾರವೇ ನಾಮಪತ್ರ ಸಲ್ಲಿಕೆಗೆ ಶುಭ ಮುಹೂರ್ತ.
ಈ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆಯೇ ನೇರ ಹಣಾಹಣಿ. ಬಿಜೆಪಿ ಸಹಿತ ಉಳಿದ ಪಕ್ಷಗಳು ಮರು ಚುನಾವಣೆ ಬಗ್ಗೆ ಹೆಚ್ಚೇನೂ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಆ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದರೂ ಅದು ಸಾಂಕೇತಿಕ ಹೋರಾಟಕ್ಕೆ ಸೀಮಿತವಾಗಲಿದೆ.
ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಸಾಂಪ್ರಾಯಿಕ ಎದುರಾಳಿ ಪಕ್ಷಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್ ಅನಿವಾರ್ಯವಾಗಿ ಈ ಮರು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಲೇಬೇಕಿದೆ. ಜಿದ್ದಾಜಿದ್ದಿನ ಹೋರಾಟದಲ್ಲಿ ಎರಡೂ ಪಕ್ಷಗಳಿಗೆ ಗೆಲುಮೊಂದೇ ಗುರಿಯಾಗಿದೆ.
ವಿಳಂಬದ ಗುಟ್ಟು: ಬೇಡವಾದ ಚುನಾವಣೆ ಎಂದುಕೊಂಡೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಾಗಲೇ ಬೆಂಗಳೂರು ಗ್ರಾಮಾಂತರದಲ್ಲಿ ಕ್ಷೇತ್ರ ಪ್ರವಾಸ ಕೈಗೊಂಡು ರಣ ಕಹಳೆ ಮೊಳಗಿಸಿದ್ದಾರೆ. ಕುಣಿಗಲ್, ಮಾಗಡಿ, ಚನ್ನಪಟ್ಟಣ, ಕನಕಪುರದಲ್ಲಿ ಕಾರ್ಯಕರ್ತರ ಸಭೆಯನ್ನೂ ನಡೆಸಿದ್ದಾರೆ.
ಕಾರ್ಯಕರ್ತರು ಮತ್ತು ಮುಖಂಡರಲ್ಲಿ ರಣೋತ್ಸಾಹ ಮೂಡಿಸಿ, ಪಕ್ಷವನ್ನು ಚುನಾವಣೆಗೆ ಸಜ್ಜುಗೊಳಿಸುವ ಕೆಲಸದಲ್ಲಿ ದೇವೇಗೌಡ ನಿರತರಾಗಿದ್ದಾರೆ. ಜೆಡಿಎಸ್ ಪಾಲಿಗೆ ಉಭಯ ಕ್ಷೇತ್ರಗಳಲ್ಲಿ ಅಭ್ಯರ್ಥಿ ಆಯ್ಕೆ ವಿಷಯ ಕಗ್ಗಂಟಾಗೇನೂ ಉಳಿದಿಲ್ಲ.
ಪುಟ್ಟರಾಜು ಬಹುತೇಕ ಖಚಿತ: ಮಂಡ್ಯದಿಂದ ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಅವರನ್ನು ಕಣಕ್ಕಿಳಿಸುವುದು ಬಹುತೇಕ ಖಚಿತವಾಗಿದೆ. ಉಳಿದಿರುವುದು ಬೆಂಗಳೂರು ಗ್ರಾಮಾಂತರವಷ್ಟೇ. ಇಲ್ಲಿ ಅನಿತಾ ಕುಮಾರಸ್ವಾಮಿ ಒಪ್ಪಿದರೆ ಸಮಸ್ಯೆ ಇಲ್ಲ. ಒಂದೊಮ್ಮೆ ಅವರು ನಿರಾಕರಿಸಿದರಷ್ಟೇ ಪರ್ಯಾಯ ಆಯ್ಕೆ ನಡೆಯಲಿದೆ.
ಒಲ್ಲೆನೆಂದರೂ ಬಿಡರು: ವಿದೇಶಾಂಗ ಖಾತೆ ಮಾಜಿ ಸಚಿವ ಎಸ್.ಎಂ.ಕೃಷ್ಣ ಅವರ ಪತ್ರಾಸ್ತ್ರದ ಕಾರಣಕ್ಕೆ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿಷಯವಾಗಿ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲ ಮೂಡಿದೆ. ಆದರೆ, ಬೆಂಗಳೂರು ಗ್ರಾಮಾಂತರದಲ್ಲಿ ಪೈಪೋಟಿಯ ವಾತಾವರಣ ಕಂಡು ಬಂದಿದೆ.
ಮಂಡ್ಯದಲ್ಲಿ ಕೃಷ್ಣ ಮತ್ತು ಸಚಿವ ಅಂಬರೀಷ್ ನಡುವೆ ಒಮ್ಮತ ಮೂಡದ ಹೊರತು ಅಭ್ಯರ್ಥಿ ಆಯ್ಕೆ ಸಲೀಸಾಗದ ಸ್ಥಿತಿ ಎದುರಾಗಿದೆ. ಇತ್ತ, ಬೆಂಗಳೂರು ಗ್ರಾಮಾಂತರದಲ್ಲಿ ಸಚಿವ ಸ್ಥಾನ ವಂಚಿತ ನಾಯಕ ಡಿ.ಕೆ.ಶಿವಕುಮಾರ್ ಒಲ್ಲೆ ಎಂದರೂ ಹೊಣೆ ಹೆಗಲಿಗೇರಿಸುವ ಪ್ರಯತ್ನ ನಡೆದಿದೆ.
ತಮ್ಮ ಸಹೋದರ ಡಿ.ಕೆ.ಸುರೇಶ್ ಅವರಿಗೆ ಟಿಕೆಟ್ ನೀಡುವಂತೆ ಸ್ವತಃ ಶಿವಕುಮಾರ್ ಬೇಡಿಕೆಯನ್ನೇನೂ ಇಟ್ಟಿಲ್ಲ. ಆದರೆ, ಸುರೇಶ್ ಅವರನ್ನೇ ಕಣಕ್ಕೆ ಇಳಿಸಿ ಶಿವಕುಮಾರ್ ಅವರ ಶಕ್ತಿ, ಸಾಮರ್ಥ್ಯವನ್ನು ಬಳಸಿಕೊಳ್ಳಬೇಕೆನ್ನುವ ಹವಣಿಕೆಯಲ್ಲಿ ಕಾಂಗ್ರೆಸ್ ಮುಖಂಡರಿದ್ದಾರೆ.
ಮಾಜಿ ಸಂಸದೆ ತೇಜಸ್ವಿನಿಗೌಡ ಮತ್ತು ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಇಲ್ಲಿ ಟಿಕೆಟ್ ಆಕಾಂಕ್ಷಿಗಳು. ಈ ಪೈಕಿ ಲಿಂಗಪ್ಪ ಅವರು ಶಿವಕುಮಾರ್ ಬೆಂಬಲಿತ ಅಭ್ಯರ್ಥಿ. ಸಹೋದರನ ಸ್ಪರ್ಧೆಗೆ ಶಿವಕುಮಾರ್ ಆಸಕ್ತಿ ತೋರದಿದ್ದಲ್ಲಿ ಕಾಂಗ್ರೆಸ್ ಆಯ್ಕೆ ಏನೆಂಬ ಸುಳಿವು ಇನ್ನೂ ನಿಗೂಢವೇ ಸರಿ.
ಹೊಂದಾಣಿಕೆ ಮಂತ್ರ: ಲೋಕಸಭೆ, ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಜತೆ ಮೈತ್ರಿಗೆ ಬಿಜೆಪಿ ಉತ್ಸುಕವಾಗಿದೆ. ಜೆಡಿಎಸ್ ಮುಖಂಡರಿಂದ ಮೈತ್ರಿ ಪ್ರಸ್ತಾಪ ಬಂದರೆ ಪರಿಶೀಲಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಕೂಡ ಹೇಳಿಕೆ ನೀಡಿದ್ದಾರೆ.
ಇದನ್ನು ಗಮನಿಸಿದರೆ, ಪ್ರತಿಪಕ್ಷ ಜೆಡಿಎಸ್ಗೆ ಮರು ಚುನಾವಣೆಯಲ್ಲಿ ಬೆಂಬಲಿಸಿ ಆಡಳಿತ ಪಕ್ಷ ಕಾಂಗ್ರೆಸ್ ಅನ್ನು ಹಣಿಯಬೇಕೆನ್ನುವ ಕಾರ್ಯತಂತ್ರವನ್ನು ಬಿಜೆಪಿ ಹೆಣೆಯಲು ಹೊರಟಿರುವುದು ಸ್ಪಷ್ಟವಾಗುತ್ತದೆ. ಒಂದೊಮ್ಮೆ ಜೆಡಿಎಸ್ ಮೈತ್ರಿಗೆ ಮುಂದಾಗದಿದ್ದಲ್ಲಿ, ಬಿಜೆಪಿಗೆ ಸ್ಪರ್ಧೆ ಅನಿವಾರ್ಯ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ನೆಲ ಕಚ್ಚಿರುವ ಕೆಜೆಪಿ, ಬಿಎಸ್ಸಾರ್ ಕಾಂಗ್ರೆಸ್ಗಳಿಗೆ ಆಸುಪಾಸಿನ ಈ ಕ್ಷೇತ್ರಗಳಲ್ಲಿ ನೆಲೆಯೇ ಇಲ್ಲ. ಹೀಗಾಗಿ ಆ ಪಕ್ಷಗಳು ಚುನಾವಣೆ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಹೀಗಾಗಿ ಮರು ಚುನಾವಣೆ ಜೆಡಿಎಸ್ ಮತ್ತು ಕಾಂಗ್ರೆಸ್ ಪಾಲಿಗಷ್ಟೇ ಪ್ರತಿಷ್ಠೆಯ ಕಣವಾಗಿದೆ.
-ಮತ್ತೀಕೆರೆ ಜಯರಾಮ್