ರಾಮನಗರದಲ್ಲಿ ಸ್ವಚ್ಛತೆ ಕೊರತೆಯದ್ದೇ ಚಿಂತೆ
ಟಿಮತ್ತೀಕೆರೆ ಜಯರಾಮ್
ಕ.ಪ್ರ.ವಾರ್ತೆ ರಾಮನಗರ ಜೂ.1
ಡೆಂಘೀ, ಮಲೇರಿಯಾ ಸೇರಿದಂತೆ ಮಾರಕ ಸಾಂಕ್ರಾಮಿಕ ರೋಗಭೀತಿ ಹೆಚ್ಚಿದ್ದರೂ ರಾಮನಗರ ನಗರಸಭೆ ಆಡಳಿತವು ನಗರ ನೈರ್ಮಲ್ಯದ ಕಡೆಗೆ ಗಮನ ಹರಿಸದೆ ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.
ಕಳೆದ ಆಡಳಿತಾವಧಿಯಲ್ಲಿ ಅರಾಜಕತೆಯಿಂದ ಕೂಡಿದ್ದ ಈ ನಗರಸಭೆಯಲ್ಲಿ ಇದುವರೆಗೆ ಚುನಾಯಿತ ಆಡಳಿತ ವ್ಯವಸ್ಥೆ ಅಸ್ತಿತ್ವಕ್ಕೆ ಬಂದಿಲ್ಲ. ಪ್ರಸ್ತುತ ಆಡಳಿತಾಧಿಕಾರಿ ಮತ್ತು ಆಯುಕ್ತರ ದರ್ಬಾರ್ ನಡೆಯುತ್ತಿದ್ದು, ಜನಹಿತ ಕಾರ್ಯಕ್ರಮಗಳು ಮರೀಚಿಕೆಯಾಗಿವೆ.
ಅತ್ತ ಹಳ್ಳಿಯೂ ಅಲ್ಲ, ಇತ್ತ ಪಟ್ಟಣವೂ ಅಲ್ಲ ಎನ್ನುವಂತಹ ಸ್ಥಿತಿಯಲ್ಲಿರುವ ರಾಮನಗರದ ಅರ್ಕಾವತಿ ನದಿ, ಚರಂಡಿಗಳು, ಕೊಚ್ಚೆ ಗುಂಡಿಗಳು ಸಾಂಕ್ರಾಮಿಕ ರೋಗ ಹರಡುವ ಸೊಳ್ಳೆಗಳ ಉತ್ಪತ್ತಿ ಕೇಂದ್ರಗಳಾಗಿವೆ.
ನದಿಯಿಂದ ಅವಾಂತರ: ನಿರ್ಮಲ ನಗರ ಯೋಜನೆ ಅನುಷ್ಠಾನದ ಬಳಿಕವೂ ಈ ನಗರದ ಪರಿಸ್ಥಿತಿ ಸುಧಾರಿಸಿಲ್ಲ. ಗಿಡಗಂಟಿ ಬೆಳೆದು, ಕೊಳಚೆ ನೀರಿನ ಹರಿವಿನಿಂದ ಗಬ್ಬೆದ್ದು ನಾರುತ್ತಿರುವ ಅರ್ಕಾವತಿ ನದಿಯಿಂದ ರಾಮನಗರಕ್ಕೆ ಮಾತ್ರವಲ್ಲದೆ ಇಡೀ ಜಿಲ್ಲೆಗೆಲ್ಲಾ ರೋಗ ಹರಡುವಷ್ಟು ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ.
ಈ ನದಿಯ ಶುದ್ಧೀಕರಣದ ಹೆಸರಿನಲ್ಲಿ ಲಕ್ಷಗಟ್ಟಲೆ ಹಣ ಕೊಚ್ಚಿ ಹೋಯಿತೇ ಹೊರತು ಕಿಂಚಿತ್ ಪ್ರಯೋಜನವಾಗಲಿಲ್ಲ. ಆಸುಪಾಸಿನ ಬಡಾವಣೆಗಳ ಜನರು ಒಳಚರಂಡಿ ಬದಲು ನೇರವಾಗಿ ನದಿಗೆ ತಮ್ಮ ಮನೆಯಿಂದ ಕೊಳಚೆ ನೀರಿನ ಪೈಪ್ ಲೈನ ಅಳವಡಿಸಿದ್ದಾರೆ.
ಒಂದು ಕಾಲಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆಗೆ ಆಸರೆಯಾಗಿದ್ದ ಅರ್ಕಾವತಿ ನದಿ ಬಳಿ ಸಾಗುವವರು ಈಗ ಮೂಗು ಮುಚ್ಚಿಕೊಳ್ಳುವ ಸ್ಥಿತಿ ಇದೆ. ಅಲ್ಲಿರುವ ಕ್ರಿಮಿ, ಕೀಟಗಳು ಮತ್ತು ಗಬ್ಬು ವಾಸನೆ ತಡೆ ನಿಟ್ಟಿನಲ್ಲಿ ಕನಿಷ್ಠಪಕ್ಷ ಬ್ಲೀಚಿಂಗ್ ಪೌಡರ್ಸಿಂಪಡಿಸುವ ಕೆಲಸವೂ ಆಗುತ್ತಿಲ್ಲ.
ಅನೈರ್ಮಲ್ಯ ತಾಂಡವ: ರಾಮನಗರದ ಬಡಾವಣೆಗಳಲ್ಲಿ ರಸ್ತೆಗಳು ತೀರಾ ಕಿರಿದಾಗಿವೆ. ಅವುಗಳ ಪಕ್ಕ ಇರುವ ಚರಂಡಿಗಳಲ್ಲಿ ಕೊಳಚೆ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಇಲ್ಲ. ಎಷ್ಟೋ ಕಡೆ ಹೂಳು, ಕೊಳಚೆ ತುಂಬಿಕೊಂಡು, ಚರಂಡಿಗಳು ಅದ್ವಾನಗೊಂಡಿವೆ.
ಲೂಟಿ ಮಾರ್ಗ ಕಂಡುಕೊಂಡ ನಗರಸಭೆ ಅಧಿಕಾರಿಶಾಹಿಗೆ ಜನಪರವಾದ ಕಾರ್ಯಕ್ರಮಗಳತ್ತ ಕಿಂಚಿತ್ ಕಾಳಜಿ ಇಲ್ಲ. ಎಲ್ಲೆಂದರಲ್ಲಿ ಕಟ್ಟಿಕೊಂಡ ಚರಂಡಿಗಳ ದುರಸ್ತಿಗೆ ಕೈ ಹಾಕಿಲ್ಲ. ಸಾರ್ವಜನಿಕರೂ ತಮ್ಮ ಮನೆಗಳ ಎದುರು ಇರುವ ಚರಂಡಿ ಶುಚಿಗೊಳಿಸುವ ಗೋಜಿಗೆ ಹೋಗುತ್ತಿಲ್ಲ. ಹೆದ್ದಾರಿ, ಸಂಪರ್ಕ ರಸ್ತೆ ಮತ್ತು ನಗರದ ರಸ್ತೆಗಳ ಇಕ್ಕೆಲಗಳಲ್ಲಿ ಕೊಳಚೆಯಿಂದ ತುಂಬಿದ ಚರಂಡಿಗಳು ಕಣ್ಣಿಗೆ ರಾಚುತ್ತಿವೆ. ಕೆಲವೆಡೆ ಚರಂಡಿ ನೀರು ರಸ್ತೆಯಲ್ಲಿ ಹರಿದು ಹೋಗುತ್ತಿರುವ ನಿದರ್ಶನಗಳಿವೆ. ಅಧಿಕಾರಿಗಳು ಜಾಣಕುರುಡುತನ ಪ್ರದರ್ಶಿಸಿದ್ದಾರೆ.
ಹಳ್ಳ ಹಿಡಿದ ಯೋಜನೆ: ನಗರ ನೈರ್ಮಲ್ಯಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಯೋಜನೆಯನ್ನು ರೂಪಿಸಲಾಗಿದೆ. ಈ ಉದ್ದೇಶಕ್ಕೆ ಪ್ರತಿ ವರ್ಷ ಲಕ್ಷಗಟ್ಟಲೆ ಹಣ ಮೀಸಲಿಟ್ಟು, ಬ್ಲೀಚಿಂಗ್ ಪೌಡರ್ ಸಹಿತ ನಾನಾ ಸಾಮಗ್ರಿಗಳನ್ನು ಖರೀದಿಸಿದರೂ ಅವೆಲ್ಲಾ ಎಲ್ಲಿ ಉಪಯೋಗ ಆಗುತ್ತಿವೆ ಎನ್ನುವುದು ತಿಳಿಯದಾಗಿದೆ.ಕಸ ವಿಲೇವಾರಿಯನ್ನೂ ಸಮರ್ಪಕವಾಗಿ ನಡೆಸಲಾಗುತ್ತಿಲ್ಲ. ಅಲ್ಲಲ್ಲಿ ಕಸದ ರಾಶಿಯು ರಸ್ತೆಗೆ ಚಾಚಿಕೊಳ್ಳುತ್ತಿದ್ದರೂ ಕೇಳುವವರಿಲ್ಲ. ಕಸದ ರಾಶಿಯನ್ನು ನಗರದಂಚಿನ ಬಡಾವಣೆಗಳ ಸಮೀಪ ರಸ್ತೆ ಬದಿಯಲ್ಲೇ ವಿಲೇವಾರಿ ಮಾಡುವ ಮೂಲಕ ನೈರ್ಮಲ್ಯವನ್ನು ಮತ್ತಷ್ಟು ಹದಗೆಡಿಸಲಾಗುತ್ತಿದೆ. ಸಾಂಕ್ರಾಮಿಕ ರೋಗಗಳ ತಡೆ ಬಗ್ಗೆ ಸರ್ಕಾರ ಜನ ಜಾಗೃತಿ ಮೂಡಿಸುವ ಜಾಹಿರಾತು ನೀಡಬಹುದು, ಆರೋಗ್ಯ ಇಲಾಖೆಯು ರೋಗಿಗಳಿಗೆ ಔಷಧೋಪಚಾರ ಮಾಡಬಹುದು. ಆದರೆ, ರೋಗ ತಡೆಗೆ ಮುಂಜಾಗ್ರತೆ ಕ್ರಮ ಸ್ಥಳೀಯ ಸಂಸ್ಥೆಗಳಿಂದಷ್ಟೇ ಸಾಧ್ಯ. ವಾರಕ್ಕೊಮ್ಮೆಯೂ ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಈ ನಗರದಲ್ಲಿಲ್ಲ. ಕಡೇಪಕ್ಷ ನಾಗರಿಕರ ಆರೋಗ್ಯದ ವಿಷಯದಲ್ಲಿ ನಗರಸಭೆ ಆಡಳಿತ ವ್ಯವಸ್ಥೆಯು ಚೆಲ್ಲಾಟ ಆಡುವುದನ್ನು ಬಿಟ್ಟು, ನೈರ್ಮಲ್ಯದ ಕಡೆಗೆ ಗಮನ ನೀಡಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.
ತಾರತಮ್ಯ ನೀತಿ: ನಗರದ 29ನೇ ವಾರ್ಡ್ನ ವೃತ್ತಮೊಂದರಲ್ಲಿ ರಾಜಕೀಯ ವೈಷಮ್ಯದ ಕಾರಣಕ್ಕೆ ವ್ಯಕ್ತಿಯೊಬ್ಬರ ಅಂಗಡಿ ಮುಂದಿನ ಚರಂಡಿಗೆ ಕಲ್ಲು ಹಾಕಿದ್ದು, ಅದನ್ನು ಶುಚಿಗೊಳಿಸದಂತೆ ನಗರಸಭೆ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಸದರಿ ಅಂಗಡಿ ಮಾಲೀಕ ಕಳೆದ ಎರಡು ತಿಂಗಳಿಂದಲೂ ದೂರು ನೀಡುತ್ತಲೇ ಬಂದಿದ್ದಾರೆ. ನಗರಸಭೆಯ ಅಧಿಕಾರಿಗಳು ಚರಂಡಿ ಶುಚಿಗೊಳಿಸುವುದಿರಲಿ ಇತ್ತ ಕಡೆ ತಲೆ ಕೂಡ ಹಾಕದೆ ನಿರ್ಲಕ್ಷ್ಯ ತೋರಿದ್ದಾರೆ.
ಹೀಗಾಗಿ ಆ ಮೋರಿ ಗಬ್ಬೆದ್ದು ನಾರುತ್ತಿದೆ. ಇಷ್ಟಲ್ಲದೆ ಅಲ್ಲಿ ಸಾಂಕ್ರಾಮಿಕ ರೋಗ ಭೀತಿ ಕಾಡುತ್ತಿದೆ. ಚುನಾಯಿತ ವ್ಯವಸ್ಥೆ ಬರುವ ಮುನ್ನವೇ ಹೀಗಾದರೆ, ಪುರಪಿತಣಗಳ ದರ್ಬಾರ್ನಲ್ಲಿ ಮತ್ತೇನು ಅವಾಂತರ ಕಾದಿದೆಯೋ
ಎನ್ನುವ ಆತಂಕ ಕಾಡಿದೆ.
ಡೆಂಘೀ ತಡೆಗೆ ನಿರ್ಲಕ್ಷ್ಯ: ಡೆಂಘೀ ಹರಡುವ ಸೊಳ್ಳೆಗಳ ತಡೆ ನಿಟ್ಟಿನಲ್ಲಿ ಸರ್ಕಾರವು ಮಾಧ್ಯಮಗಳ ಜಾಹಿರಾತು ಮೂಲಕ ಮೂಡಿಸಿರುವ ಜನಜಾಗೃತಿ ಹೊರತಾಗಿ ಜಿಲ್ಲಾಡಳಿತ, ನಗರಸಭೆ ಸಹಿತ ಸ್ಥಳೀಯ ಸಂಸ್ಥೆಗಳು ಇದುವರೆಗೆ ಯಾವುದೇ ಕಾರ್ಯಕ್ರಮ ನಡೆಸಿಲ್ಲ.
ಜ್ವರಬಾಧೆಯಿಂದ ಆಸ್ಪತ್ರೆಗಳಿಗೆ ದಾಖಲಾಗುವವರಲ್ಲಿ ಡೆಂಘೀ ಶಂಕೆ ಇದ್ದಲ್ಲಿ ಅವರಿಂದ ರಕ್ತದ ಮಾದರಿ ಪಡೆದು, ತಕ್ಷಣವೇ ಪರೀಕ್ಷೆಗೆ ಕಳುಹಿಸಬೇಕು. ಈ ಕುರಿತ ಮಾಹಿತಿಯನ್ನು ಪ್ರತಿ ದಿನ ಜಿಲ್ಲಾಡಳಿತ ಮತ್ತು ಜಿ.ಪಂ.ಗೆ ರವಾನಿಸಬೇಕೆಂದು ಎಲ್ಲ ವೈದ್ಯಾಧಿಕಾರಿಗಳಿಗೆ ಈಗಷ್ಟೇ ಸೂಚಿಸಲಾಗಿದೆ.
ಹದಗೆಟ್ಟ ಆಸ್ಪತ್ರೆಗಳು: ರಾಮನಗರದಲ್ಲಿರುವ ಜಿಲ್ಲಾಸ್ಪತ್ರೆ, 3 ತಾಲೂಕು ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಅನಾರೋಗ್ಯಪೀಡಿತವಾಗಿವೆ. ಸೂಕ್ತ ನಿರ್ವಹಣೆ ಇಲ್ಲದೆ ಗಬ್ಬೆದ್ದು ನಾರುತ್ತಿರುವ ಆಸ್ಪತ್ರೆಗಳಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯವಿಲ್ಲದೆ ರೋಗಿಗಳ ಪರದಾಡುತ್ತಿದ್ದಾರೆ.
ಡೆಂಘೀ ಪೀಡಿತರಿಗೆಂದೇ ಜಿಲ್ಲಾಸ್ಪತ್ರೆ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ತಲಾ 6 ಹಾಸಿಗಳನ್ನು ಮೀಸಲಿಡಲಾಗಿದೆ. ಡೆಂಘೀ ಖಚಿತಪಡಿಸಿಕೊಳ್ಳಲು ಜಿಲ್ಲಾ ಕೇಂದ್ರದಲ್ಲಿ ಬೇರೆ ಇನ್ಯಾವುದೇ ಪರೀಕ್ಷೆ ಇಲ್ಲ. ರಕ್ತದ ಮಾದರಿಯನ್ನು ಬೆಂಗಳೂರಿಗೆ ರವಾನಿಸಲಾಗುತ್ತದೆ. ವರದಿ ಬರಲು 2-3 ದಿನವಾಗುತ್ತಿದೆ. ಡೆಂಘೀ ಮೀರಿದವರನ್ನು ವೈದ್ಯರು ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸಿ, ಕೈತೊಳೆದುಕೊಳ್ಳುತ್ತಿದ್ದಾರೆ.