ಆದಿಶಕ್ತಿ ಮಸಿಯಮ್ಮದೇವಿ ಅದ್ಧೂರಿ ಜಾತ್ರಾ ಮಹೋತ್ಸವ
ಮಾಗಡಿ: ತಾಲೂಕಿನ ಚಂದೂರಾಯನಹಳ್ಳಿ ದಾಖಲೆ ಸಿದ್ದಗಂಗಯ್ಯ ಪಾಳ್ಯದಲ್ಲಿರುವ ಆದಿಶಕ್ತಿ ಶ್ರೀ ಮಸಿಯಮ್ಮದೇವಿಯ ಜಾತ್ರಾ ಮಹೋತ್ಸವ ಬಹಳ ವಿಜೃಂಭಣೆಯಿಂದ ನೆರವೇರಿತು.
ಜಾತ್ರಾ ಮಹೋತ್ಸವದ ಪ್ರಯುಕ್ತ ಸುತ್ತಮುತ್ತಲ ಗ್ರಾಮಸ್ಥರು ಶ್ರೀ ಆದಿಶಕ್ತಿ ಮಸಿಯಮ್ಮ ದೇವಿಗೆ ಒಡೆದ ಹೊಂಬಾಳೆಯಿಟ್ಟು ತಂಬಿಟ್ಟಿನಾರಾತಿ ನೈವೇದ್ಯ ಅರ್ಪಿಸಿ ಶ್ರದ್ಧಾಭಕ್ತಿಯಿಂದ ಪೂಜಿಸಿ ಪುನೀತರಾದರು. ಜಾತ್ರಾ ಮಹೋತ್ಸವದ ಅಂಗವಾಗಿ ಅರೆತಮಟೆ ಮಂಗಳ ವಾದ್ಯದೊಂದಿಗೆ ದೇವಿಯ ಭವ್ಯ ಮೆರವಣಿಗೆ ನಡೆಸಲಾಯಿತು.
ಇದೇ ವೇಳೆ ಜಾನಪದ ವಿದ್ವಾನ್ ನಾಗರಾಜು ಮಾತನಾಡಿ ಜಾನಪದ ಸೊಗಡು ಸೂಸುವ ಗ್ರಾಮೀಣ ಹಬ್ಬ, ಹರಿದಿನಗಳು, ಶಕ್ತಿದೇವತೆಗಳ ಆರಾಧನೆ ಕುರಿತು ಹಿರಿಯರು, ಮಕ್ಕಳಿಗೆ ತಿಳಿ ಹೇಳಬೇಕು. ಜನರ ಬದುಕಿಗೆ ಹತ್ತಿರವಾಗಿರುವ ಜಾನಪದ ಜೀವನ, ಜಾನಪದ ಹಾಡುಗಳು, ಕಥೆಗಳು, ಕಲೆಗಳು ಜೀವಂತವಾಗಿ ಉಳಿಸಲು ಗ್ರಾಮೀಣ ಯುವಕರಿಂದ ಮಾತ್ರ ಸಾಧ್ಯವಿದೆ ಎಂದರು. ವ್ಯವಸ್ಥಾಪಕ ಎಚ್. ರಾಮಯ್ಯ, ಅರ್ಚಕ ಶಂಕರ್, ಶಿವಲಿಂಗಯ್ಯ, ವೆಂಕಟೇಶ್, ಸಿದ್ದಪ್ಪ, ನಾರಾಯಣ, ರಾಮಚಂದ್ರ, ಮೂರ್ತಿ, ಮಹದೇವಯ್ಯ, ಎಚ್.ವಿ. ರಾಜಣ್ಣ, ಶ್ರೀನಿವಾಸ್, ಕೃಷ್ಣಕುಮಾರ್ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸಿದ್ದರು.