ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಆರೋಗ್ಯ ವಿವಿಯಲ್ಲಿ ಇ ಕಲಿಕಾ ಯೋಜನೆ ಆರಂಭ

Rashmi Kasaragodu
Updated On : 3 Jun 2013, 1:04 am

ಬೆಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಶೈಕ್ಷಣಿಕ ಗುಣಮಟ್ಟ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಈ ಶೈಕ್ಷಣಿಕ ವರ್ಷದಿಂದಲೇ ಇ- ಕಲಿಕಾ ಯೋಜನೆ ಪ್ರಾರಂಭಿಸಲಾಗುವುದು ಎಂದು ಕುಲಪತಿ ಡಾ.ಕೆ.ಎಸ್.ಶ್ರೀಪ್ರಕಾಶ್ ಹೇಳಿದ್ದಾರೆ.
ಶಿಕ್ಷಕರ ಕೊರತೆ ನಿರ್ವಹಣೆ ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಇ- ಕಲಿಕೆ ಅನಿವಾರ್ಯವಾಗಿದೆ. ಆರೋಗ್ಯ ಕ್ಷೇತ್ರದಲ್ಲಿನ ಜಾಗತಿಕ ಬೆಳವಣಿಗೆಗಳನ್ನು ಇ- ಕಲಿಕೆಯ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಲು ಸಾಧ್ಯವಿದೆ. ಯುಜಿಸಿ ಹಾಗೂ ಕೇಂದ್ರ ಸರ್ಕಾರದ ನೆರವಿನಿಂದ ಈ ಯೋಜನೆ ಜಾರಿಗೆ ಬರುತ್ತಿದೆ. ತರಗತಿಗಳು ಸಾಂಪ್ರದಾಯಿಕ ಬೋಧನೆಗಿಂತ ವಿಭಿನ್ನವಾಗಿರಲಿದೆ ಎಂದು ನಗರದಲ್ಲಿ ಶನಿವಾರ ನಡೆದ ವಿವಿಯ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಅವರು ಅಭಿಪ್ರಾಯಪಟ್ಟರು.
ಇ- ಕಲಿಕಾ ಯೋಜನೆಗಾಗಿ ಈಗಾಗಲೇ ತಜ್ಞ ಉಪನ್ಯಾಸಕರಿಗೆ ತರಬೇತಿ ನೀಡಲಾಗುತ್ತಿದೆ. ಇದನ್ನು ಹೊರತುಪಡಿಸಿ ವಿವಿಯ ಉಳಿದ ಉಪನ್ಯಾಸಕರಿಗೆ ವಿಶೇಷ ತರಬೇತಿ ನೀಡಲಾಗುವುದು. ಈ ಮೂಲಕ ಉಪನ್ಯಾಸಕರಲ್ಲಿ ಕಲಿಕಾ ಕೌಶಲ ಅಭಿವೃದ್ಧಿಪಡಿಸಲು ಸಾಧ್ಯವಿದೆ ಎಂದು ಶ್ರೀಪ್ರಕಾಶ್ ಹೇಳಿದರು.
ಶೀಘ್ರದಲ್ಲಿಯೇ ವಿವಿ ಸ್ಥಳಾಂತರ: ರಾಮನಗರ ಸಮೀಪದ ಭೀಮನಕುಪ್ಪೆಯಲ್ಲಿ ಆರೋಗ್ಯ ವಿವಿಗೆ ಸಂಬಂಧಿಸಿದ ಬಹುತೇಕ ಕೆಲಸಗಳು ಅಂತಿಮಗೊಂಡಿವೆ. ಶೀಘ್ರದಲ್ಲಿಯೇ ವಿವಿಯನ್ನು ಸ್ಥಳಾಂತರಿಸಲಾಗುವುದು. ಇದರಿಂದ ರಾಜ್ಯದ ಏಕೈಕ ಆರೋಗ್ಯ ವಿವಿಯು ಬೃಹತ್ ಕ್ಯಾಂಪಸ್‌ನ್ನು ಹೊಂದಲಿದೆ. ವಿವಿಯ ಸಂಶೋಧನೆ ಹಾಗೂ ಇತರ ಚಟುವಟಿಕೆಗೆ ಅಲ್ಲಿ ಪೂರಕ ವಾತಾವರಣ ದೊರೆಯಲಿದೆ ಎಂದು ಕುಲಪತಿ ತಿಳಿಸಿದರು.
ವಿವಿಯ ಸಿಬ್ಬಂದಿ ಹಾಗೂ ಅಧಿಕಾರಿಗಳ ಪಿಂಚಣಿ ಹಾಗೂ ಇತರ ಸೌಲಭ್ಯಕ್ಕಾಗಿ 100 ಕೋಟಿ ಮೀಸಲಿರಿಸಲಾಗಿದೆ. ಇನ್ನು ವಿವಿಯ ಪ್ರತಿಷ್ಠೆ ಕಾಪಾಡುವ ನಿಟ್ಟಿನಲ್ಲಿ ಮಾನ್ಯತೆ ಪಡೆದ ವೈದ್ಯ ಕಾಲೇಜುಗಳ ಗುಣಮಟ್ಟ ವೃದ್ಧಿಸಲು ವಿಶೇಷ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಇದು ಆಯುಷ್ ಆಸ್ಪತ್ರೆಗಳಲ್ಲೂ ಪ್ರಾರಂಭವಾಗಲಿದೆ ಎಂದು ಅವರು ಹೇಳಿದರು.
ಭಾರತದ ನಗರ ಪ್ರದೇಶಗಳ ಕೊಳಗೇರಿ ಹಾಗೂ ಗ್ರಾಮೀಣ ಜನರಿಗೆ ಕೈಗೆಟಕುವ ದರದಲ್ಲಿ ಚಿಕಿತ್ಸೆ ನೀಡುವುದು ಆರೋಗ್ಯ ಕ್ಷೇತ್ರ ಹಾಗೂ ಸರ್ಕಾರಕ್ಕಿರುವ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳ ಮೂಲ ಸೌಕರ್ಯ ಅಭಿವೃದ್ಧಿಯನ್ನು ಕೂಡಲೇ ಮಾಡಬೇಕಿದೆ ಎಂದು ವಿಶ್ರಾಂತ ಕುಲಪತಿ ಡಾ.ಎಸ್. ಕಾಂತಾ ಅಭಿಪ್ರಾಯಪಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement