'ಇತಿಹಾಸದ ಬಗ್ಗೆ ಅರಿವಿದ್ದರೆ ದೇಶದ ಬಗ್ಗೆ ಗೌರವ'
ಬೆಂಗಳೂರು: ದೇಶದ ಇತಿಹಾಸದ ಬಗ್ಗೆ ಅರಿವು ಉಂಟಾದಾಗ ಮಾತ್ರ ದೇಶದ ಬಗ್ಗೆ ಗೌರವ ಮೂಡಲು ಸಾಧ್ಯ ಎಂದು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರು ಅಭಿಪ್ರಾಯಪಟ್ಟಿದ್ದಾರೆ. ಡಾ.ಕೆ.ಎನ್. ಗಣೇಶಯ್ಯ ಅವರ 'ಕಲ್ದವಸಿ' ಕಥಾಸಂಕಲನ, 'ಕನಕ ಮುಸುಕು' ಕಾದಂಬರಿಯನ್ನು ಭಾನುವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಇತಿಹಾಸ ಎಂಬುದು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗ. ಇತಿಹಾಸ ತಿಳಿಯದವರಿಗೆ ಭವಿಷ್ಯದ ಅರಿವು ಇರುವುದಿಲ್ಲ. ತಮ್ಮ ಹಿರಿಯರ ಸಂಸ್ಕೃತಿಯ ಅರಿವಾಗಬೇಕಿದ್ದರೆ ಇತಿಹಾಸ ತಿಳಿದಿರಬೇಕು. ಇದರಿಂದ ಜೀವನದ ದೃಷ್ಟಿಯೇ ಬದಲಾಗುತ್ತದೆ. ಇತಿಹಾಸ ತಿಳಿದಾಗ ಮಾತ್ರ ದೇಶದ ಬಗ್ಗೆ ಗೌರವ ಮೂಡುತ್ತದೆ. ಆದರೆ, ಅದು ಬ್ರಿಟಿಷರ ಕಾಲದ ಬೆಳವಣಿಗೆಯಲ್ಲ, ಅದಕ್ಕೂ ಹಿಂದಿನ ಸಂಸ್ಕೃತಿ- ಪರಂಪರೆ ಎಂದು ಅವರು ಹೇಳಿದರು. ಲೇಖಕ ಗಣೇಶಯ್ಯ ಅವರು ತಡವಾಗಿ ಸಾಹಿತ್ಯ ಕ್ಷೇತ್ರ ಪ್ರವೇಶಿಸಿದರೂ ವಿಶಿಷ್ಠವಾದ ಓದುಗವರ್ಗ ಸೃಷ್ಟಿಸಿದ್ದಾರೆ. ಅವರ ಬರವಣಿಗೆಗಳಲ್ಲಿ ಕಥೆ, ಕಲ್ಪನೆ ಮತ್ತು ಇತಿಹಾಸ ಎಲ್ಲಿ ಆರಂಭವಾಗಿ ಎಲ್ಲಿ ಮುಗಿಯುತ್ತದೆ ಎಂಬುದೇ ತಿಳಿಯುವುದಿಲ್ಲ. ಅಂತಹ ಕುತೂಹಲಕಾರಿ ಸಾಹಿತ್ಯ ಹೆಚ್ಚು ಸೃಷ್ಟಿಯಾಗಬೇಕು ಎಂದರು. ವಿಮರ್ಶಕ ಡಾ.ಜಿ.ಬಿ. ಹರೀಶ್ ಅವರು ಮಾತನಾಡಿ, ಕನ್ನಡ ಸಾಹಿತ್ಯ ಕುರಿತ ಚರ್ಚೆಗಳು ಇತ್ತೀಚೆಗೆ ಗರ್ಭಗುಡಿ ತಲುಪುವ ಬದಲು ಕೇವಲ ಆವರಣದಲ್ಲಿ ಸುತ್ತುತ್ತಿವೆ. ಹಾಗೆ ಸೃಷ್ಟಿಯಾದ ವಿಮರ್ಶಕ ಪರಂಪರೆ ಅನಕೃ, ತರಾಸು ಅವರನ್ನು ಕಡೆಗಣಿಸಿ, ಕನ್ನಡ ಸಾಹಿತ್ಯದಲ್ಲಿ ಶನಿ ಸಂತಾನ ಸೃಷ್ಟಿಸಿದೆ. ಅದೇ ವಿಮರ್ಶಕ ವರ್ಗದ ಹಿತಾಸಕ್ತಿ ಭೈರಪ್ಪ ಅವರಂತಹ ಸಾಹಿತಿಗಳ ಸಾಹಿತ್ಯದ ವ್ಯವಸ್ಥಿತ ಅಧ್ಯಯನ ಆಗದಂತೆ ತಡೆದಿವೆ ಎಂದು ವಿಷಾದಿಸಿದರು.