ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕನ್ನಡ ಚಿತ್ರಗಳಲ್ಲಿ ಮೌಲ್ಯಗಳ ಕೊರತೆ

Rashmi Kasaragodu
Updated On : 3 Jun 2013, 1:04 am

ಕ.ಪ್ರ. ವಾರ್ತೆ  ರಾಮನಗರ  ಜೂ. 2
ಇತ್ತೀಚೆಗೆ ಬಿಡುಗಡೆಯಾಗುತ್ತಿರುವ ಕನ್ನಡ ಚಿತ್ರಗಳಲ್ಲಿ ಮೌಲ್ಯಾಧಾರಿತ ಅಂಶಗಳ ಕೊರತೆ ಇದೆ. ಮೈಮಾಟ ಪ್ರದರ್ಶನಕ್ಕೇ ಹೆಚ್ಚು ಒತ್ತು ನೀಡುವ ನಿರ್ದೇಶಕರು ಕೇವಲ ವಾಣಿಜ್ಯ ದೃಷ್ಟಿಯಿಟ್ಟುಕೊಂಡು ಚಿತ್ರಗಳನ್ನು ಮಾಡುತ್ತಿದ್ದಾರೆ ಎಂದು ಚಿತ್ರ ನಟ ರಾಜೇಶ್ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಶ್ರೀರಾಮ ಕಲ್ಯಾಣ ಮಂದಿರದಲ್ಲಿ ಪಾಂಚಜನ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನ, ವಿಶ್ವ ಮಾನವ ಟ್ರಸ್ಟ್, ಜಿಲ್ಲಾ ಲೇಖಕರ ವೇದಿಕೆ, ಪ್ರಗತಿ ಗಣಹ ನಿರ್ಮಾಣ ಸಹಕಾರ ಸಂಘಗಳಿಂದ ನಡೆದ ಡಾ.ಪಿ.ಬಿ.ಶ್ರೀನಿವಾಸ್ ನೆನಪು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಹಿತ್ಯ, ನಟನೆ, ಕೌಟುಂಬಿಕ ಭಾವನೆ ಅಂಶಗಳ ಕೊರತೆ ಇರುವ ಕನ್ನಡ ಚಿತ್ರಗಳೇ ಹೆಚ್ಚಾಗಿ ಬರುತ್ತಿವೆ ಎಂದು ವಿಷಾದಿಸಿದರು.
ಪ್ರೇಕ್ಷಕನಿಗೆ 3 ಗಂಟೆ ಕಾಲ ಮನರಂಜನೆ ನೀಡುವ ಜತೆಗೆ ಸಾಮಾಜಿಕ ಕಳಕಳಿಯುಳ್ಳ ನೀತಿ ಬೋಧಿಸುವ
ಚಿತ್ರಗಳನ್ನು ಹಿಂದಿನ ಕಾಲದ ನಿರ್ದೇಶಕರು ಮಾಡುತ್ತಿದ್ದರು. ಇಂದಿನ ಕಾಲದ ಚಿತ್ರಗಳಲ್ಲಿ ಮೌಲ್ಯಗಳು ಇಲ್ಲ, ಇಂಪಾದ ಹಾಡುಗಳು ಇಲ್ಲ, ಸಾಹಿತ್ಯವೂ ಇರುವುದಿಲ್ಲ. ಹಣ ಮಾಡುವುದಷ್ಟೇ ಪ್ರಮುಖ ಗುರಿ ಎಂದು ಟೀಕಿಸಿದರು.
ಅಸಂಬದ್ಧ ಸಾಹಿತ್ಯ: ಅಮ್ಮ ಲೂಸಾ, ಅಪ್ಪ ಲೂಸಾ ಹಳೆ ಪಾತ್ರೆ ಹಳೆ ಕಬ್ಬಿಣ ಇನ್ನೂ ಮುಂತಾದ ಅರ್ಥವಿಲ್ಲದ, ಅಸಂಬದ್ಧ ಸಾಹಿತ್ಯವಿರುವ ಹಾಡುಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಕನ್ನಡ ಭಾಷೆ, ನೆಲ, ಜಲ, ಸಂಸ್ಕೃತಿಯ ರಕ್ಷಣೆಗೆ ನಿಂತಿರುವ ಕನ್ನಡಪರ ಸಂಘಟನೆಗಳು ಇಂತಹವನ್ನು ಸಹಿಸಿಕೊಂಡಿರುವುದು ಸರಿಯಲ್ಲ ಎಂದರು.
ಉತ್ತಮ ಸಾಹಿತ್ಯಾಭಿರುಚಿಯನ್ನು ಬೆಳೆಸಬೇಕಾದ ಸಾಹಿತಿಗಳೇ ಹೀಗೆ ಅಸಂಬದ್ಧವಾಗಿ ಬರೆಯಲಾರಂಭಿಸಿದರೆ ಭಾಷೆಗೂ ಮಾರಕ, ಪ್ರೇಕ್ಷಕನಿಗೆ ಅನೈತಿಕತೆಯನ್ನು ಹೇರಿದಂತಾಗುತ್ತದೆ. ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಅತ್ಯಂತ ಶ್ರೀಮಂತ ಭಾಷೆ, ಶ್ರೇಷ್ಠ ಪರಂಪರೆ ಇರುವ ಭಾಷೆಯನ್ನು ಇಂತಹ  ಸಿನೆಮಾ ಹಾಡುಗಳು ಅವಮಾನ ಮಾಡುತ್ತಿವೆ. ಇಂತಹ ಕೀಳು ಅಭಿರುಚಿಯುಳ್ಳ ಚಿತ್ರಗಳನ್ನು ಮಾಡುವವರಿಗೆ ಸರ್ಕಾರದಿಂದ ಯಾವುದೇ ಸಹಾಯಧನ ನೀಡಬಾರದು ಎಂದರು.
ಕನ್ನಡದ ಕೋಗಿಲೆ: ಪಿ.ಬಿ.ಶ್ರೀನಿವಾಸ್ ಅವರು ಕನ್ನಡದ ಕೋಗಿಲೆಯಾಗಿದ್ದರು. ಅವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಮತ್ತು ಇಲ್ಲೇ ನೆಲಯೂರಿದ ಬಗ್ಗೆ ವಿವರಿಸಿದ ರಾಜೇಶ್ ಅತ್ಯಂತ ಶ್ರೇಷ್ಠ ಕಲಾವಿದನನ್ನು ಕನ್ನಡ ಚಿತ್ರರಂಗ ಕಳೆದುಕೊಂಡಿದೆ ಎಂದರು.
ಬೇಸರ: ಚಿತ್ರ ಸಾಹಿತಿ ಹಾಗೂ ನಿರ್ದೇಶಕ ಸಿ.ವಿ. ಶಿವಶಂಕರ್ ಮಾತನಾಡಿ, ರಾಷ್ಟ್ರೀಯ ಚಿತ್ರ ಹಬ್ಬದಲ್ಲಿ ಕನ್ನಡ  ಚಿತ್ರಗಳಿಗೆ ಪ್ರಶಸ್ತಿ ಬರದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಭಾಗವಹಿಸಿದ್ದ ಕನ್ನಡ ಚಿತ್ರಗಳ ಪೈಕಿ  5-6 ಚಿತ್ರಗಳು ಪ್ರಶಸ್ತಿಗೆ ಅರ್ಹವಾಗಿದ್ದವು. ಆದರೆ ಒಂದು ಚಿತ್ರಕ್ಕೂ ಪ್ರಶಸ್ತಿ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಮರ್ಶಕ ಡಾ. ಬೈರಮಂಗಲ ರಾಮೇಗೌಡ ಮಾತನಾಡಿದರು. ವಸುಂಧರ ಚಲನ ಚಿತ್ರ ನಿರ್ಮಾಪಕ ಆರ್. ನಂಜಪ್ಪ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ.ಬಿ.ಕೃಷ್ಣ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ವೈ.ಟಿ.ಸೋಮಶೇಖರ್, ಗಾಯಕ ಎಚ್.ವಿ.ಹನುಮಂತು, ಪಾಂಚಜನ್ಯ ಪ್ರತಿಷ್ಠಾನದ ಅಧ್ಯಕ್ಷ ಎಚ್.ಶಿವರಾಮಯ್ಯ, ಜಿಲ್ಲಾ ಲೇಖಕರ ವೇದಿಕೆಯ ಅಧ್ಯಕ್ಷ ಕೂ.ಗಿ. ಗಿರಿಯಪ್ಪ, ಪ್ರಗತಿ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಎಚ್. ಸುರೇಶ್ ಭಾಗವಹಿಸಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement