ಗುಟ್ಕಾ ನಿಷೇಧ ಮರು ಪರಿಶೀಲನೆ ಅಗತ್ಯ: ಆಚಾರ್
ಮಂಗಳೂರು: ರಾಜ್ಯದಲ್ಲಿ ಗುಟ್ಕಾ ನಿಷೇಧ ಪ್ರಕ್ರಿಯೆ ಆತುರದ ನಿರ್ಧಾರ. ಇದನ್ನು ಮರು ಪರಿಶೀಲಿಸಬೇಕಿದೆ ಎಂದು ಅಖಿಲ ಭಾರತ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್ ಹೇಳಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಶಾಸಕರೊಂದಿಗೆ ಸಮಾಲೋಚನೆ ಮಾಡದೆ, ಸದನದಲ್ಲಿ ಚರ್ಚೆ ಮಾಡದೆ ದಿಢೀರನೆ ಗುಟ್ಕಾ ನಿಷೇಧ ಹೇರುವ ಅಗತ್ಯವಿರಲಿಲ್ಲ. ನಿಷೇಧ ಮಾಡುವ ಮೊದಲು ಅಡಕೆ ಸಂಘಟನೆಗಳೊಂದಿಗೆ, ಜನಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದ ಮೇಲೆ ತೀರ್ಮಾನ ಕೈಗೊಳ್ಳಬಹುದಿತ್ತು ಎಂದು ತಿಳಿಸಿದ್ದಾರೆ.
ಗುಟ್ಕಾದಲ್ಲಿರುವ ಜೀವವಿರೋಧಿ ರಾಸಾಯನಿಕಗಳನ್ನು ಅಧ್ಯಯನ ಮಾಡಿ ಜನರಿಗೆ ತಿಳಿಹೇಳುವ ಕೆಲಸವಾಗಬೇಕು. ಕಲಬೆರಕೆ ಆಹಾರದ ದುಷ್ಪಾರಿಣಾಮಗಳನ್ನು ಜನತೆ ನಿತ್ಯ ಅನುಭವಿಸುತ್ತಿದ್ದಾರೆ. ಇಂಥ ರಾಸಾಯನಿಕವನ್ನು ನಿಷೇಧಿಸಬೇಕಾಗಿದೆ. ಸರ್ಕಾರ ನಿಷೇಧದ ಕುರಿತು ಸರಿಯಾದ ಚಿಂತನೆ ನಡೆಸಿಲ್ಲ. ಅಡಕೆ ಕೃಷಿಗೆ, ಕೃಷಿಕರಿಗೆ ತೊಂದರೆಯಾಗಲಾರದು ಎಂಬ ಅಂಕಿ ಅಂಶಗಳ ಮಾಹಿತಿ ಜನರ ಮುಂದೆ ಇಟ್ಟಿದ್ದರೂ ದೂರ ಪರಿಣಾಮದಲ್ಲಿ ಅಡಕೆ ಕೃಷಿಗೆ ತೊಂದರೆಯಾಗಬಹುದು ಎಂದರು.