ಭೂಮಿ ಫೌಂಡೇಶನ್ ಫಾರ್ ಗುಡ್‌ನೆಸ್ ಸಂಸ್ಥೆ ಉದ್ಘಾಟನೆ
ದೇವನಹಳ್ಳಿ: ಬೆಂಗಳೂರು ಉತ್ತರ ತಾಲೂಕು ವಿದ್ಯಾನಗರ ಬಳಿ ಇರುವ ಬಿಲ್ಲಮಾರನಹಳ್ಳಿಯ ಗ್ರಾಮೀಣ ಭಾಗದ ವಿದ್ಯಾವಂತ ತರುಣರಿಂದ ಆರಂಭಗೊಂಡಿರುವ ಭೂಮಿ ಫೌಂಡೇಶನ್ ಫಾರ್ ಗುಡ್‌ನೆಸ್ ಎಂಬ ಸಂಸ್ಥೆಯ ಉದ್ಘಾಟನಾ ಸಮಾರಂಭ ಇಲ್ಲಿನ ಗುರುಭವನದಲ್ಲಿ ಶನಿವಾರ ಆಯೋಜಿಸಲಾಗಿತ್ತು.
ಸಮಾರಂಭದ ಉಧ್ಘಾಟನೆಯನ್ನು ಸಮಾಜಸೇವಕ ಸತ್ಯನಾರಾಯಣರವರ ನೆರವೇರಿಸಿದರು. ರೈತರ ಬದುಕಿನ ಬಗ್ಗೆ ಚಿಂತನೆ ಇಲ್ಲದ ಸರ್ಕಾರಗಳು ರಾಜಕೀಯ ಮಾಡುತ್ತಿವೆ. ರೈತ ಬೆಳೆದ ಬೆಳೆಗ ಸರಿಯಾದ ಬೆಲೆ ದೊರಕುತ್ತಿಲ್ಲ ಎಂದರು.
ಕಾರಹಳ್ಳಿ ಶ್ರೀನಿವಾಸ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಮುಖಂಡರಾದ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಾದ ಬಿ.ಟಿ. ವಿನೋದಮ್ಮ ಮಾತನಾಡಿ ಈ ಸಂಸ್ಥೆಯವರು ರೈತರಿಗಾಗಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗೆ ತಮ್ಮ ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಕರಾಪಜಾ ವರ್ಗಗಳ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಎಸ್.ಮುನಿಯಪ್ಪ , ಹುಣಸಮಾರನಹಳ್ಳಿ ಎಸ್‌ಜೆಪಿ ಕಾಲೇಜು ಉಪನ್ಯಾಕರಾದ ಡಾ.ಮಹಾದೇವ್, ಚನ್ನಹಳ್ಳಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕರಾದ ವೆಂಕಟೇಶ್ ಮಾತನಾಡಿದರು.
ಸಂಸ್ಥೆಯ ಉದ್ದೇಶಗಳ ಬಗ್ಗೆ ಸಂಘದ ಖಜಾಂಚಿ ಎಸ್.ಮಹೇಶ್ ಮಾತನಾಡಿ ರೈತ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜುಗೊಳಿಸುವುದು, ಸಾವಯವ ಕೃಷಿ ಬಗ್ಗೆ ಅರಿವು ಮೂಡಿಸುವುದು ಹಳ್ಳಿಗಳಲ್ಲಿ ವಿದ್ಯಾಭ್ಯಾಸ ನಿಲ್ಲಿಸಿರುವ ಹೆಣ್ಣುಮಕ್ಕಳಿಗೆ ಮತ್ತೆ ಶಾಲೆಗೆ ಸೇರಿಸಿ ಉನ್ನತ ವ್ಯಾಸಂಗ ಮಾಡಲು ಪ್ರೋತ್ಸಾಹ ನೀಡುವುದು, ಬಾಲಕಾರ್ಮಿಕ ಪದ್ಧತಿ ನಿವಾರಣೆ, ಗ್ರಾಮಾಂತರ ಶಾಲೆಯ ಮಕ್ಕಳಿಗೆ ರಂಗಭೂಮಿ ಕಲೆ, ಸಾಹಿತ್ಯ, ನಾಟಕ ಮತ್ತು ಜಾನಪದ ಗೀತೆಗಳ ಪರಿಚಯ ಮಾಡಿಸುವುದೇ ಆಗಿದೆ ಎಂದರು. ಸಮಾರಂಭದಲ್ಲಿ ಗೌರವಾಧ್ಯಕ್ಷರಾದ ಬಿ.ಟಿ ಗೋವಿಂದರಾಜು, ಅಧ್ಯಕ್ಷರಾದ ಆರ್. ಸುನಿಲ್‌ಕುಮಾರ್ ಕಾಡಿಗಾನಹಳ್ಳಿಯ ಮುಖಂಡರಾದ ಕೆಂಪಣ್ಣ ಉಪಸ್ಥಿತರಿದ್ದರು. ಬಿ.ಎನ್.ಅರುಣ್ ಕುಮಾರ್ ಹಾಗೂ ಭಾಸ್ಕರ್ ಸ್ವಾಗತ ಕೋರಿದರು, ಕೆ.ಸೌಮ್ಯ ವಂದನೆ ಅರ್ಪಿಸಿದರು.