ಮಾತೆಯರ ಯೋಗಾಸನ ತರಗತಿ
ಕ.ಪ್ರ. ವಾರ್ತೆ ವಿಜಯಪುರ ಜೂ. 2
ಆಧುನಿಕ ಸಮಾಜದಲ್ಲಿ ಅವಿಭಕ್ತ ಕುಟುಂಬಗಳ ಸಂಖ್ಯೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಮಾತೃ ವಾತ್ಸಲ್ಯ ನೆನಪಿಸುವ ಮಹತ್ವಪೂರ್ಣ ಕಾರ್ಯಕ್ರಮವನ್ನು ಪತಂಜಲಿ ಯೋಗ ಶಿಕ್ಷಣ ಸಮಿತಿ ನಡೆಸುತ್ತಿದೆ ಎಂದು ಪ್ರಗತಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎನ್. ನಾಗರಾಜ್ ತಿಳಿಸಿದರು.
ಅವರು ಪಟ್ಟಣ ಸಮೀಪದ ಬಿಜ್ಜವಾರ ಗ್ರಾಮದಲ್ಲಿ ಇತ್ತೀಚೆಗೆ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಮಾತೆಯರ ಯೋಗಾಸನ ತರಗತಿಯ ಹೊಸ ವರ್ಗ ಮತ್ತು ಚಾಂದನಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಭಾರತೀಯ ಸಂಸ್ಕೃತಿಯ ಶ್ರೇಷ್ಠತೆ ಎಷ್ಟೆಂದರೆ ವಿದೇಶಿಗರು ಸಹ ನಮ್ಮ ಸಂಸ್ಕೃತಿಯನ್ನು ಅನುಸರಿಸಲು ಬಯಸುತ್ತಿದ್ದರು ಎಂದರು. ಪತಂಜಲಿ ಯೋಗ ಶಿಕ್ಷಣದ ಸಂಚಾಲಕಿ ಭಾರತಿ ಪ್ರಭುದೇವ್ ಮಾತನಾಡಿ ಸುಮಾರು 33 ವರ್ಷಗಳಿಂದ ಹಳ್ಳಿ ಹಳ್ಳಿಗಳಲ್ಲಿ ಯೋಗ ಪ್ರಚಾರ ಮಾಡುತ್ತಾ ಬಂದಿದ್ದು, ಇದರೊಂದಿಗೆ ಪ್ರಕೃತಿ ಚಿಕಿತ್ಸೆ, ಚಿಂತನಾ ಕಮ್ಮಟ, ಮಕ್ಕಳಿಗೆ ವಸಂತ ಶಿಬಿರ, ಶಿಕ್ಷಕರಿಗೆ, ಮಹಿಳೆ ಯರಿಗೆ ಅನೇಕ ಶಿಬಿರಗಳನ್ನು ನಡೆಸುತ್ತಾ ಸಮಾಜ ಸೇವೆಯಲ್ಲಿ ನಿಸ್ವಾರ್ಥವಾಗಿ ತೊಡಗಿಸಿಕೊಂಡಿರುವುದಾಗಿ ತಿಳಿಸಿದರು. ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿ ಕಾಲೇಜಿನ ಪ್ರಾಂಶುಪಾಲ ಮಹೇಶ್ ಇದ್ದರು. ಕಾರ್ಯಕ್ರಮದ ನಂತರ ಎಲ್ಲರೂ ಬೆಳದಿಂಗಳಿನಲ್ಲಿ ಕೈತುತ್ತಿನ ಊಟವನ್ನು ಸವಿದರು.