ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮಾರಕ ಡೆಂಘೀ ಬಗ್ಗೆ ಎಚ್ಚರವಿರಲಿ

Rashmi Kasaragodu
Updated On : 3 Jun 2013, 1:05 am

ನೆಲಮಂಗಲ: ಮಾರಕ  ಡೆಂಘೀ ಜ್ವರ ವ್ಯಾಪಕವಾಗಿ ಹರಡುತ್ತಿದ್ದು ಜನ ಆತಂಕಗೊಂಡಿದ್ದಾರೆ. ಈ ರೋಗದ ಬಗ್ಗೆ ಜನ ಬಹಳ ಎಚ್ಚರಿಕೆ ವಹಿಸಬೇಕಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಪಿ.ನರಸಿಂಹಯ್ಯ ತಿಳಿಸಿದರು.
ಅವರು ಪಟ್ಟಣದ ತಾಲೂಕು ಕಚೇರಿಯಲ್ಲಿ ತಾಲೂಕು ಆರೋಗ್ಯ ಇಲಾಖೆ ಮತ್ತು ತಾಲೂಕು ಆಡಳಿತದ ವತಿಯಿಂದ ನಡೆದ ಸಭೆಯಲ್ಲಿ ಮಾಹಿತಿ ನೀಡಿ ಮಾತನಾಡುತ್ತಾ ಡೆಂಘೀ ಜ್ವರ ತಾಲೂಕಿನಲ್ಲಿ 14 ಶಂಕಿತ ರೋಗಿಗಳ ರಕ್ತವನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಅವುಗಳ ಪೈಕಿ 7 ಪ್ರಕರಣಗಳು ದೃಢಪಟ್ಟಿದ್ದು ಅಂತಹ ರೋಗಿಗಳು ಚಿಕಿತ್ಸೆ ಮೂಲಕ ಚೇತರಿಸಿಕೊಂಡಿದ್ದಾರೆ.
24 ಮಂದಿಗೆ ಜ್ವರ ಬಾಧೆ: ಶಿವಗಂಗೆ ಸಮೀಪದ ಕೂತಘಟ್ಟ ಗ್ರಾಮದಲ್ಲಿಯೇ 24 ಮಂದಿಗೆ ಜ್ವರ ಬಾಧೆ ಕಾಣಿಸಿಕೊಂಡಿದ್ದು, ಇವರಲ್ಲಿ ಇಬ್ಬರಿಗೆ ಡೆಂಘೀ ಜ್ವರ ಇರುವ ಬಗ್ಗೆ ದೃಢೀಕರಿಸಲಾಗಿದೆ. ಈಗ ನಿಯಂತ್ರಣದಲ್ಲಿದೆ. ತ್ಯಾಮಗೊಂಡ್ಲು ಬಳಿಯ ಬೀರಗೊಂಡನಹಳ್ಳಿ, ನರಸಾಪುರ ಗ್ರಾಮದಲ್ಲಿ ಎರಡು ಪ್ರಕರಣಗಳು ಪತ್ತೆಯಾಗಿದ್ದು ಇಲ್ಲಿಯೂ ಸಹರೋಗ ನಿಯಂತ್ರಣದಲ್ಲಿದೆ. ಅಲ್ಲದೆ ಹೊನ್ನೇನಹಳ್ಳಿ ಗ್ರಾಮದಲ್ಲಿ ಚರಂಡಿ ನೀರು ಕುಡಿಯುವ  ನೀರಿಗೆ ಸೇರಿಕೊಂಡು ವಾಂತಿ ಭೇದಿಯಿಂದ 31 ಜನ ಅಸ್ವಸ್ತರಾಗಿದ್ದು ಎಲ್ಲರೂ ಗುಣಮುಖರಾಗಿದ್ದಾರೆ ಎಂದು ತಿಳಿಸಿದರು.
ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ ಮಾತನಾಡುತ್ತಾ  ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಹೆಚ್ಚಿನ ಪ್ರಕರಣಗಳು ಪತ್ತೆಯಾಗಿಲ್ಲ. ಹೆಚ್1, ಎನ್1 ಪ್ರಕರಣ ಮಲೇರಿಯಾ ಪ್ರಕರಣಗಳು ಸಹ ಕಡಿಮೆಯಾಗಿದೆ ಎಂಬ ಅಂಕಿ ಅಂಶವನ್ನು ತಿಳಿಸಿದರು.
ಗ್ರಾಮೀಣ ಪ್ರದೇಶದಲ್ಲಿ ನೀರು ನಿಲ್ಲದಂತೆ ಬಹಳ ಜಾಗ್ರತೆ ವಹಿಸಬೇಕು ಮತ್ತು ಮನೆಯಲ್ಲಿ ಸೊಳ್ಳೆ ನಿರೋಧಕಗಳನ್ನು ಬಳಸಿಕೊಳ್ಳಬೇಕು. ಅಲ್ಲದೆ ಸೊಳ್ಳೆ ಪರದೆಯನ್ನು ಬಳಸಿಕೊಂಡು ರೋಗದಿಂದ ದೂರವಾಗಬೇಕು ಎಂದರು.
ನಿರ್ಲಕ್ಷ್ಯ ಬೇಡ: ಈ ವಿಚಾರದಲ್ಲಿ ನಿರ್ಲಕ್ಷ ಮಾಡಬಾರದು. ಸ್ವಲ್ಪ ಪ್ರಮಾಣದಲ್ಲಿ ಜ್ವರದ ಲಕ್ಷಣ ಕಂಡರೂ ತಕ್ಷಣ ವೈದ್ಯರಲ್ಲಿ ತೋರಿಸಿ ಚಿಕಿತ್ಸೆ ಪಡೆಯಲು ಮುಂದಾಗಬೇಕು ಎಂಬ ಎಚ್ಚರಿಕೆಯನ್ನು ನೀಡಿದರು.
 ತಹಸೀಲ್ದಾರ್ ವಿ.ರಾಜೇಂದ್ರ ಮಾತನಾಡುತ್ತಾ ತಾಲೂಕಿನ ಶಿಕ್ಷಣ ಇಲಾಖೆ ವತಿಯಿಂದ  ಡೆಂಘೀ ಜ್ವರದ ಬಗ್ಗೆ ಜಾಥಾ ನಡೆಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಜೊತೆಗೆ ಅಂಗನವಾಡಿ ಕಾರ್ಯಕರ್ತರ ಮೂಲಕವು ಗ್ರಾಮಗಳಲ್ಲಿ ಜಾಥದ ಮೂಲಕ ರೋಗ ತಗಲದಂತೆ ಎಚ್ಚರಿಕೆ ವಹಿಸುವ ಬಗ್ಗೆ ಅರಿವು ಮೂಡಿಸಲು ಮುಂದಾಗಬೇಕೆಂದು ತಿಳಿಸಿದರು.
ಆದೇಶ: ಮೀನುಗಾರಿಕೆ ಇಲಾಖೆಯವರು ಡೆಂಘೀ ಹರಡುವ ಸೊಳ್ಳೆಗಳನ್ನು ಭಕ್ಷಿಸುವ ಮೀನುಗಳಾದ ಗಪ್ಪಿನ್,  ಗ್ಯಾಬೋಜಿಯ ಮೀನುಗಳನ್ನು ಅವಶ್ಯಕತೆ ಇರುವಲ್ಲಿ ಬಿಟ್ಟು ಸೊಳ್ಳೆ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಆದೇಶ ನೀಡಿದರು.
ಗ್ರಾಮ ಪಂಚಾಯ್ತಿಗಳು ಕುಡಿಯುವ ನೀರು ಸರಬರಾಜು ಮಾಡುವ ನೀರಿನ ಟ್ಯಾಂಕ್‌ಗಳನ್ನು ಸ್ವಚ್ಛ ಮಾಡಬೇಕು ಮತ್ತು ನೀರಿನ  ಪೈಪುಗಳು ಚರಂಡಿಯಲ್ಲಿ ಹಾಕಿದ್ದರೆ ತಕ್ಷಣ ತೆರವುಗೊಳಿಸಿ ಮುಂಜಾಗ್ರತೆ ವಹಿಸಬೇಕು. ಗ್ರಾಮದಲ್ಲಿ ನೀರು ನಿಲ್ಲದಂತೆ ಕ್ರಮ ತೆಗೆದುಕೊಳ್ಳಬೇಕು. ಪುರಸಭೆ ಹಾಗೂ ಗ್ರಾಮಪಂಚಾಯ್ತಿಗಳಲ್ಲಿ ಕೆಲಸ ನಿರ್ವಹಿಸುವ ಪಿ.ಡಿ.ಓಗಳು ಇದರ ಬಗ್ಗೆ ಜಾಗೃತಿ ವಹಿಸಬೇಕು ಎಂದು ತಿಳಿಸಿದರು.
ತಾಲ್ಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement