ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಆಧಾರ್: ನಾಲ್ಕೈದು ದಿನ ಓಡಾಡಿದರೂ ಸಿಗದ ಕಾರ್ಡ್, ಬೇಸರಗೊಂಡ ಜನತೆ

Rashmi Kasaragodu
Updated On : 4 Jun 2013, 12:10 pm

ಕ.ಪ್ರ. ವಾರ್ತೆ  ನೆಲಮಂಗಲ  ಜೂ. 3
ತಾಲೂಕಿನಾದ್ಯಂತ ಸಾಕಷ್ಟು ಜನರಿಗೆ ಆಧಾರ್ ಕಾರ್ಡ್ ಮಾಡಿಸಲು ಅವಕಾಶ ಒದಗಿಸುವಲ್ಲಿ ತಾಲೂಕು ಮತ್ತು ಜಿಲ್ಲಾ ಆಡಳಿತ ವಿಫಲವಾಗಿದೆ ಎಂದು  ಸಾಕಷ್ಟು ಮಂದಿ ಜಿಲ್ಲಾ ಆಡಳಿತಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.
ಈ ಜನರ ಆರೋಪವೆಂದರೆ ತಾಲೂಕು ಕೇಂದ್ರದಲ್ಲಿರುವ ಅಂಚೆ ಕಚೇರಿಗೆ ಮೂರು ನಾಲ್ಕು ದಿನ ಅಲೆದರು ಕಾರ್ಡ್ ಮಾಡಿಸಲಾಗದೆ ಅಸಹಾಯಕರಾಗಿರುವುದು, ಅಂಚೆ ಕಚೇರಿಗೆ ಹೋದರೆ ಪ್ರತಿ ದಿನ ಬೆಳಿಗ್ಗೆಯೇ ಬಂದು ಟೋಕನ್ ಪಡೆಯಿರಿ ಎನ್ನುತ್ತಾರೆ ಅಂಚೆ ಕಚೇರಿಯ ಪೋಸ್ಟ್‌ಮಾಸ್ಟರ್.
ನಮ್ಮ ಗ್ರಾಮದಿಂದ ಇಪ್ಪತ್ತೈದು ಕಿ.ಮೀ ದೂರದಲ್ಲಿರುವ ನೆಲಮಂಗಲಕ್ಕೆ  ಹೋಗುವುದೇ ಕಷ್ಟ. ಅದರಲ್ಲಿಯೂ ಆಧಾರ ಕಾರ್ಡ್ ಮಾಡಿಸಲು ಬೆಳಗಿನ ಜಾವ ಮೂರು ಗಂಟೆಗಾಗಲೇ ಜನ ಸಾಲುಗಟ್ಟಿ ನಿಂತಿರುತ್ತಾರೆ. ನಾವು ಕಷ್ಟಪಟ್ಟು ಆರು ಗಂಟೆಗೆ ಹೋದರೂ ಪ್ರಯೋಜನವಾಗುತ್ತಿಲ್ಲ ಎಂದು ತಮ್ಮ ಗೋಳು ತೋಡಿಕೊಳ್ಳುತ್ತಾರೆ.
ತಾಲ್ಲೂಕು ಕೇಂದ್ರದಲ್ಲಿನ ಅಂಚೆ ಕಚೇರಿಯಲ್ಲಿ ಪ್ರತಿ ದಿನ ಕೇವಲ 60 ಮಂದಿಗೆ ಮಾತ್ರ ಟೋಕನ್ ನೀಡುತ್ತಾರೆ. ಈ ಟೋಕನ್ ಪಡೆಯಬೇಕಾದರೆ ಬೆಳಗಿನ ಜಾವ ಮೂರು ಗಂಟೆಗೆ ಸರತಿಯ ಸಾಲಿನಲ್ಲಿ ನಿಂತು ಟೋಕನ್ ಪಡೆದುಕೊಳ್ಳಬೇಕು. ಇಲ್ಲಿ ಕೆಲವೇ ಮಂದಿಗೆ ಟೋಕನ್ ನೀಡುವ ಶಾಸ್ತ್ರ ಮುಗಿಸಿ ಉಳಿದವನ್ನು ಬ್ಲಾಕ್ ಮಾಡುತ್ತಾರೆ. ಬೇಕಾದವರಿಗೆ ಟೋಕನ್ ನೀಡುತ್ತಾರೆ  ಸಾಲಿನಲ್ಲಿ ನಿಂತವರಿಗೆ ನೀಡದೆ ಇಲ್ಲಿಯೂ ಮೋಸವಾಗುತ್ತಿದೆ ಎಂದು ಅಗಳಕುಪ್ಪೆ ಗ್ರಾಮದ ಹನುಮಂತರಾಜು ಆರೋಪ ಮಾಡುತ್ತಾರೆ.
ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಒಂದೆರಡು ದಿನ ಆಧಾರ್ ಕಾರ್ಡ್ ತೆಗೆದುಕೊಂಡು ಹೋದರು ಮತ್ತೆ ಇದರ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಈಗ ತಾಲೂಕು ಕೇಂದ್ರದಲ್ಲಿನ ಅಂಚೆ ಕಚೇರಿಯಲ್ಲಿ ಮಾತ್ರ ಆಧಾರ್ ಕಾರ್ಡ್  ಮಾಡಿಸಲು ತಾಲೂಕಿಗೆ ಕೇವಲ ಒಂದು ಕೇಂದ್ರವನ್ನು ಮಾತ್ರ ವ್ಯವಸ್ಥೆ ಮಾಡಿದ್ದಾರೆ. ಮತ್ತೊಂದು ಖಾಸಗಿಯಾಗಿ ನಡೆಯುತ್ತಿದ್ದರೂ ಇಲ್ಲಿಯೂ ಹಣ ನೀಡಿದವರಿಗೆ ಆದ್ಯತೆ ನೀಡುತ್ತಾರೆ. ಈಗಾದರೆ ಜನ ಸಾಮಾನ್ಯರ ಕಥೆ ಕೇಳುವವರು ಯಾರು, ಈಗಿರುವ ವ್ಯವಸ್ಥೆಯಿಂದ ಜನರಿಗೆ ಬಾರಿ ತೊಂದರೆಯಾಗುತ್ತಿದೆ.
ಇಲ್ಲಿ ಒಬ್ಬ ಕಾರ್ಡ್ ಮಾಡಿಸಬೇಕಾದರೆ ಕನಿಷ್ಟ ಮೂರು ದಿನ ಕಾಯಬೇಕು. ಅಷ್ಟೊಂದು  ಒತ್ತಡ ಇರುತ್ತದೆ.  ಸ್ಥಳೀಯ  ಜನ ಆಧಾರ್ ಕಾರ್ಡ್ ಮಾಡಿಸದೇ ಸರ್ಕಾರದಿಂದ ಸಿಗುವ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ.
ಈಗಲಾದರೂ ಜಿಲ್ಲಾ ಆಡಳಿತ ತಾಲೂಕಿನ ಪ್ರತಿ ಹೋಬಳಿ ಕೇಂದ್ರ ಅಥವಾ ಗ್ರಾಮ ಪಂಚಾಯ್ತಿ ಕೇಂದ್ರಗಳಲ್ಲಿ ಆಧಾರ್ ಕಾರ್ಡ್ ಮಾಡಿಸಲು ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement