ಮದ್ಯಮಾರಾಟ ತಡೆಯಲು ಆಗ್ರಹ
ಮಾಗಡಿ: ಪರಂಗಿಚಿಕ್ಕನಪಾಳ್ಯದಲ್ಲಿ ಕಿರಾಣಿ, ಇತರೆ ಅಂಗಡಿಗಳಲ್ಲಿ ಮದ್ಯಮಾರಾಟ ನಡೆಯುತ್ತಿದ್ದು, ಹಗಲಿನ ವೇಳೆ ಮಹಿಳೆಯರು ಮಕ್ಕಳು ರಸ್ತೆಗಳಲ್ಲಿ ತಿರುಗಾಡುವದಕ್ಕೆ ಆತಂಕ ಎದುರಿಸುತ್ತಿದ್ದಾರೆ. ಮದ್ಯಮಾರಾಟ ಹೆಚ್ಚಿದ್ದು,ನಿರಂತರ ಕುಡಿತದಿಂದಾಗಿ ಎಷ್ಟೋ ಕುಟುಂಬಗಳು ಬೀದಿಪಾಲಾಗುತ್ತಿವೆ. ಒಪ್ಪತ್ತಿನ ಗಂಜಿಗೂ ಗತಿ ಇಲ್ಲದಂತೆ ಮಹಿಳೆಯರು ಮಕ್ಕಳು ಯಾತನೆ ಅನುಭವಿಸುತ್ತಿದ್ದು, ಇಲಾಖೆಗೆ ಹಿಡಿಶಾಪ ಹಾಕಲಾಗುತ್ತಿದೆ. ಕೂಡಲೆ ಮದ್ಯಮಾರಾಟ ತಡೆಯುವಂತೆ ಸಂಬಂಧಪಟ್ಟ ಇಲಾಖೆಗೆ ದೂರು ನೀಡಲು ಗ್ರಾಮಸ್ಥರು ಹಾಗೂ ಸ್ತ್ರೀಶಕ್ತಿ ಸಂಘಟನೆಗಳು ಒಕ್ಕೊರಲಿನ ತೀರ್ಮಾನ ಕೈಗೊಂಡಿವೆ. ಈ ಸಂಬಂಧ ಅಬಕಾರಿ ಇಲಾಖೆಗೆ ಲಿಖಿತ ದೂರು ನೀಡಿರುವುದಾಗಿ ನೇತೇನಹಳ್ಳಿ ಗ್ರಾಪಂ ಅಧ್ಯಕ್ಷ ದಶರಥ, ಯಾಲಕ್ಕಯ್ಯ ತಿಳಿಸಿದ್ದಾರೆ.