ಟಿಟಿ ವಾಹನ ದರೋಡೆ: ಇಬ್ಬರ ಬಂಧನ, ಮತ್ತಿಬ್ಬರ ನಾಪತ್ತೆ
ಸೂಲಿಬೆಲೆ: ಇಲ್ಲಿನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಬಾಲೇನಹಳ್ಳಿ ಬಳಿ ಮೇ 17 ರಂದು ರಾತ್ರಿ ಮದುವೆಗೆ ಹೋಗಲೆಂದು ಟಿಟಿ ವಾಹನವೊಂದನ್ನು ಬಾಡಿಗೆಗೆ ಪಡೆದಿದ್ದ ಐವರು ದರೋಡೆಕೋರರು ಚಾಲಕ, ಕ್ಲೀನರ್‌ನನ್ನು ಬೆದರಿಸಿ ವಾಹನವನ್ನು ಅಪಹರಣ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೂಲಿಬೆಲೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.ಗುಂಪಿನ ಪ್ರಮುಖ ನಾಯಕ ಶಂಕರ್‌ನೊಂದಿಗೆ ಇತರೆ ಇಬ್ಬರು ತಲೆ ಮಾರಿಸಿಕೊಂಡಿದ್ದಾರೆ. ಶಂಕರನ ವಿರುದ್ಧ ತಿರುಮಲಶೆಟ್ಟಿಹಳ್ಳಿ, ವಿಜಯಪುರ, ಬೆಂಗಳೂರು ಮತ್ತು ಆವಲಹಳ್ಳಿ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೆಚ್.ಕ್ರಾಸ್ ಬಳಿ ಮದುವೆಗೆ ಹೋಗಬೇಕಿದೆ ಎಂದು ಪ್ರಮುಖ ಆರೋಪಿ ಶಿವಶಂಕರ್ ಮೇ17 ರಂದು ಸಂಜೆ 7 ಗಂಟೆ ಸಮಯದಲ್ಲಿ ಬೆಂಗಳೂರಿನ ಟಿ.ಸಿ ಪಾಳ್ಯದ ಬಳಿ ಪುರುಷೋತಮ್ ಎಂಬವರಿಗೆ ಸೇರಿದ ಟಿಟಿ ವಾಹನವನ್ನು 2700 ರು.ಬಾಡಿಗೆಗೆ ನಿಗದಿ ಮಾಡಿದ್ದರು. ಅಲ್ಲಿಂದ ಬರುವಾಗ ಹೊಸಕೋಟೆ ಸಂತೆ ಸರ್ಕಲ್‌ನಲ್ಲಿ ಇನ್ನೂ ನಾಲ್ವರು ಸೇರಿಕೊಂಡು ಬೆಂಡಿಗಾನಹಳ್ಳಿ ಸಮೀಪದ ಬಾಲೇನಹಳ್ಳಿ ಗ್ರಾಮದ ಬಳಿ ರಾತ್ರಿವೇಳೆಯಲ್ಲಿ ಚಾಲಕನಿಗೆ ಮಾರಾಕಾಸ್ತ್ರ ತೋರಿಸಿ ಬೆದರಿಸಿದ್ದಾರೆ. ಭಯಕ್ಕೆ ಬಿದ್ದ ಚಾಲಕ ಕತ್ತಲ್ಲಿನಲ್ಲಿ ತಪ್ಪಿಸಿಕೊಂಡರೆ ಕ್ಲೀನರ್ ಮೇಲೆ ಹಲ್ಲೆ ಮಾಡಿ ರಾಳ್ಳುಕುಂಟೆ ಬಳಿ ತಳ್ಳಿ ಪರಾರಿಯಾಗಿದ್ದರು. ಅಂದೇ ರಾತ್ರಿ ಚಾಲಕ ಸೂಲಿಬೆಲೆ ಪೊಲೀಸರಿಗೆ ದೂರು ನೀಡಿದ್ದರು.
ಸಿಕ್ಕದ್ದು ಹೇಗೆ: ಟಿಟಿವಾಹನ ಸಂತೆ ಸರ್ಕಲ್ ಬಳಿ ನಿಲ್ಲಿಸಿದ್ದಾಗ ಆರೋಪಿಗಳ ಮೊಬೈಲು ಅಂಗಡಿಯೊಂದರಲ್ಲಿ ಕರೆನ್ಸಿ ಹಾಕಿಸಿಕೊಂಡಿದ್ದನ್ನು ಗಮನಿಸಿದ್ದ ಚಾಲಕ ಪೊಲೀಸರಿಗೆ ವಿಷಯ ತಿಳಿಸಿದ್ದ.
ಈ ಜಾಡು ಹಿಡಿದ ಪೊಲೀಸರು ಹೊಸಕೋಟೆ ತಾಲೂಕಿನ ನಡುವತ್ತಿ ಗ್ರಾಮದ ಹರೀಶ್ (21), ಬೆಂಗಳೂರಿನ ಆಡುಗೋಡಿಯ ರವಿ (28)ಬಂಧಿಸಿದ್ದಾರೆ. ಶಿವ ಶಂಕರ್ ಸೇರಿದಂತೆ ಕೃತ್ಯದಲ್ಲಿ ಪಾಲ್ಗೊಂಡಿದ್ದ ಮುನಿಯಪ್ಪ, ಕಿರಣ್ ತಲೆ ಮರೆಸಿಕೊಂಡಿದ್ದಾರೆ. ಪೊಲೀಸರು ಬೆನ್ನು ಹತ್ತಿರುವ ವಿಚಾರ ತಿಳಿದು ಧರ್ಮಸ್ಥಳದಲ್ಲಿ ವಾಹನವನ್ನು ಬಿಟ್ಟು ಪರಾರಿಯಾಗಿದ್ದರು. ಎಸ್ಪಿ ಪ್ರಕಾಶ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಜೀನೇಂದ್ರ ನೇತೃತ್ವದಲ್ಲಿ ಸಿಪಿಐ ವಸಂತ್,ಪಿಎಸ್‌ಐಗಳಾದ ನದಾಫ್, ನವೀನ್‌ಕುಮಾರ್, ಸಿಬ್ಬಂದಿಗಳಾದ ಕೃಷ್ಣಪ್ಪ, ಶಿವರುದ್ರೇಗೌಡ, ರವಿ, ಮಂಜುನಾಥ್, ರಾಮಾಂಜಿನಿ, ಸಂಜಯ್ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.